ADVERTISEMENT

‘ಸ್ಮಾರ್ಟ್‌ ಸಿಟಿ’ಯಿಂದ ₹ 70 ಲಕ್ಷ ವಸೂಲಿ ಮಾಡಿ: ವೀರಣ್ಣ ಸವಡಿ

ಚಿಟಗುಪ್ಪಿ ಆಸ್ಪತ್ರೆಯಲ್ಲಿ ‘ಸ್ಮಾರ್ಟ್‌ ಹೆಲ್ತ್‌ಕೇರ್‌’ ವ್ಯವಸ್ಥೆ ಅನುಷ್ಠಾನದಲ್ಲಿ ಅಕ್ರಮ ಪ್ರಕರಣ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 4:45 IST
Last Updated 8 ನವೆಂಬರ್ 2025, 4:45 IST
ಧಾರವಾಡದ ಪಾಲಿಕೆ ಕಚೇರಿಯಲ್ಲಿ ಶುಕ್ರವಾರ ಸದನ ಸಮಿತಿ ಅಧ್ಯಕ್ಷ ವೀರಣ್ಣ ಸವಡಿ ಅವರು ಮೇಯರ್‌ ಜ್ಯೋತಿ ಪಾಟೀಲ ಅವರಿಗೆ ವರದಿ ಸಲ್ಲಿಸಿದರು. ಉಪಮೇಯರ್‌ ಸಂತೋಷ ಚವಾಣ್‌, ಸದ‌ನ ಸಮಿತಿ ಸದಸ್ಯರಾದ ಮಯೂರ ಮೊರೆ, ಈರೇಶ ಅಂಟಗೇರಿ, ಶಿವು ಹಿರೇಮಠ ಪಾಲ್ಗೊಂಡಿದ್ದರು ಪ್ರಜಾವಾಣಿ ಚಿತ್ರ
ಧಾರವಾಡದ ಪಾಲಿಕೆ ಕಚೇರಿಯಲ್ಲಿ ಶುಕ್ರವಾರ ಸದನ ಸಮಿತಿ ಅಧ್ಯಕ್ಷ ವೀರಣ್ಣ ಸವಡಿ ಅವರು ಮೇಯರ್‌ ಜ್ಯೋತಿ ಪಾಟೀಲ ಅವರಿಗೆ ವರದಿ ಸಲ್ಲಿಸಿದರು. ಉಪಮೇಯರ್‌ ಸಂತೋಷ ಚವಾಣ್‌, ಸದ‌ನ ಸಮಿತಿ ಸದಸ್ಯರಾದ ಮಯೂರ ಮೊರೆ, ಈರೇಶ ಅಂಟಗೇರಿ, ಶಿವು ಹಿರೇಮಠ ಪಾಲ್ಗೊಂಡಿದ್ದರು ಪ್ರಜಾವಾಣಿ ಚಿತ್ರ   

ಧಾರವಾಡ: ‘ಸ್ಮಾರ್ಟ್‌ ಸಿಟಿ ಯೋಜನೆಯಡಿ ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ‘ಸ್ಮಾರ್ಟ್‌ ಹೆಲ್ತ್‌ಕೇರ್‌’ ವ್ಯವಸ್ಥೆ ಅನುಷ್ಠಾನದಲ್ಲಿ ಲೋಪಗಳಾಗಿವೆ. ಯೋಜನೆಯಡಿ ಆಸ್ಪತ್ರೆಯ ಹೊರಗುತ್ತಿಗೆ ಸಿಬ್ಬಂದಿ ವೇತನಕ್ಕೆ ಪಾಲಿಕೆಯಿಂದ ₹ 70 ಲಕ್ಷ ಪಾವತಿಸಲಾಗಿದೆ. ಈ ಹಣವನ್ನು ‘ಸ್ಮಾರ್ಟ್‌ ಸಿಟಿ’ ಯೋಜನೆಯವರಿಂದ ಗುತ್ತಿಗೆದಾರನಿಂದ ವಸೂಲಿ ಮಾಡಬೇಕು ಎಂದು ಸದನ ಸಮಿತಿ ಶಿಫಾರಸು ಮಾಡಿದೆ’ ಎಂದು ಸದನ ಸಮಿತಿ ಅಧ್ಯಕ್ಷ ವೀರಣ್ಣ ಸವಡಿ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸ್ಮಾರ್ಟ್‌ ಸಿಟಿ ಯೋಜನೆ ಡಿಜಿಟಲೀಕರಣ ಸಂಬಂಧ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಅಳವಡಿಸಿದ್ದ ಸ್ಮಾರ್ಟ್‌ ಹೆಲ್ತ್‌ಕೇರ್‌ನಲ್ಲಿ ನಡೆದಿದ್ದ ಅವ್ಯವಹಾರಕ್ಕೆ ಸಂಬಂಧಿಸಿ ಸಮಿತಿಯು ಪರಿಶೀಲಿಸಿ ವರದಿ ಸಲ್ಲಿಸಿದೆ. ಸ್ಮಾರ್ಟ್‌ ಸಿಟಿ ಕಚೇರಿಯನ್ನೇ ಬಂದ್‌ ಮಾಡಿದ್ದಾರೆ. ಯೋಜನೆ ಟೆಂಡರ್‌ ಪ್ರಕ್ರಿಯೆ ಸರಿಯಾಗಿ ನಡೆದಿದೆ. ಆದರೆ, ಮಹಾನಗರ ಪಾಲಿಕೆಯ ಅನುಮೋದನೆ ಪಡೆದಿಲ್ಲ. ₹ 3.26 ಕೋಟಿ ಅನುದಾನದಲ್ಲಿ ₹ 2.4 ಕೋಟಿ ಸಾಫ್ಟವೇರ್‌, ಪ್ರಿಂಟರ್‌ ಇತ್ಯಾದಿಗೆ ಬಳಕೆಯಾಗಿದೆ. ನಿರ್ವಹಣೆಗೆ ಪಾಲಿಕೆಯ ಹೊರಗುತ್ತಿಗೆ ಸಿಬ್ಬಂದಿ ಬಳಕೆ ಮಾಡಿಕೊಂಡಿದ್ಧಾರೆ. ಹೊರಗುತ್ತಿಗೆ ಸಿಬ್ಬಂದಿಗೆ ಪಾಲಿಕೆಯಿಂದ ಪಾವತಿಸಿರುವ ₹ 70 ಲಕ್ಷ ವೇತನವನ್ನು ಸ್ಮಾರ್ಟ್‌ ಸಿಟಿ ಯೋಜನೆಯವರ ಕಡೆಯಿಂದ ವಸೂಲಿ ಮಾಡಬೇಕು ಎಂದು ಶಿಫಾರಸು ಮಾಡಿದ್ದೇವೆ’ ಎಂದು ತಿಳಿಸಿದರು.

‘ಔಷಧ ವಿತರಣೆ (ವೆಂಡಿಂಗ್‌) ಯಂತ್ರಕ್ಕೆ ಶೀತಲೀಕರಣ ವ್ಯವಸ್ಥೆ ಕಲ್ಪಿಸಿರಲಿಲ್ಲ. ಇಂಥ ಕೆಲವು ಲೋಪಗಳು ಕಂಡುಬಂದಿವೆ. ಮೇಯರ್ ಅವರಿಗೆ ವರದಿ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಯೋಜನೆಯನ್ನು ಸಮರ್ಪಕವಾಗಿ ಮುಂದುವರಿಸುವಂತೆ ತಿಳಿಸಿದ್ದೇವೆ’ ಎಂದರು.

ADVERTISEMENT

ಗುತ್ತಿಗೆದಾರನಿಂದ ಕರಾರು ಉಲ್ಲಂಘನೆ: ವರದಿಯಲ್ಲಿ ಉಲ್ಲೇಖ ಗುತ್ತಿಗೆದಾರ ಗುತ್ತಿಗೆ ಕರಾರುಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಲೋಪ ಎಸಗಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರನಿಂದ ಹಣ ವಸೂಲಿ ಮಾಡಬೇಕು ಮತ್ತು ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ವರದಿಯಲ್ಲಿ ಉಲ್ಲೇಖ ಇದೆ. ಒಟ್ಟು 11 ಪುಟಗಳ ವರದಿ ಸಲ್ಲಿಸಲಾಗಿದೆ.

ವರದಿಯಲ್ಲಿ ಒಬ್ಬರು ಸದಸ್ಯರ ಸಹಿ ಇಲ್ಲ

ವರದಿಯಲ್ಲಿ ಸಮಿತಿ ಅಧ್ಯಕ್ಷ ವೀರಣ್ಣ ಸವಡಿ ಸದಸ್ಯರಾದ ಈರೇಶ ಅಂಚಟಗೇರಿ ಶಿವುಹಿರೇಮಠ ಮಯೂರ ಮೊರೆ ಅವರ ಸಹಿ ಇದೆ. ಆದರೆ ಮತ್ತೊಬ್ಬ ಸದಸ್ಯ ರಾಜಶೇಖರ ಕಮತಿ ಅವರ ಸಹಿ ಇಲ್ಲ. ‌ಸದನ ಸಮಿತಿ ವರದಿ ಸಲ್ಲಿಸುವಾಗಲೂ ರಾಜಶೇಖರ ಕಮತಿ ಹಾಜರಿರಲಿಲ್ಲ.

ಸದನ ಸಮಿತಿಯು ವರದಿಯನ್ನು ಸಲ್ಲಿಸಿದೆ. ವರದಿಯನ್ನು ಪಾಲಿಕೆ ಆಯುಕ್ತರಿಗೆ ನೀಡಲಾಗುವುದು. ಕ್ರಮ ವಹಿಸಲಾಗುವುದು.
–ಜ್ಯೋತಿ ಪಾಟೀಲ, ಮೇಯರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.