ADVERTISEMENT

ಕಲಘಟಗಿಯಲ್ಲಿ ಮಾ.19 ರಿಂದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2022, 12:47 IST
Last Updated 17 ಮಾರ್ಚ್ 2022, 12:47 IST
   

ಹುಬ್ಬಳ್ಳಿ: ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಬಾನಗಿತ್ತಿ ಗುಡಿಹಾಳ ಗ್ರಾಮದಲ್ಲಿ ಮಾ.19 ರಿಂದ 21ರವರೆಗೆ ರಾಜ್ಯಮಟ್ಟದ ಪುರುಷ ಹಾಗೂ ಮಹಿಳೆಯರ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ.

ಬಾನಗಿತ್ತಿ ಗುಡಿಹಾಳ ಕುಸ್ತಿ ಗೆಳೆಯರ ಬಳಗ, ಕರ್ನಾಟಕ ರಾಜ್ಯ ಕುಸ್ತಿ ಸಂಘ ಹಾಗೂ ಧಾರವಾಡ ಜಿಲ್ಲಾ ಕುಸ್ತಿ ಸಂಘದ ಸಹಯೋಗದಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮದನ ಕುಲಕರ್ಣಿ ಹೇಳಿದರು.

ಪುರುಷರ ವಿಭಾಗದಲ್ಲಿ 28 ರಿಂದ 79 ಕೆಜಿ ಪ್ಲಸ್‌ವರೆಗೆ 14 ವಿಭಾಗಗಳಲ್ಲಿ, ಮಹಿಳೆಯರ ವಿಭಾಗದಲ್ಲಿ 27 ರಿಂದ 57 ಕೆಜಿ ಪ್ಲಸ್‌ವರೆಗೆ 10 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಸುನಿಲ ಪಡತರೆ, ಸಂಗಮೇಶ ಬಿರಾದಾರ ಸೇರುದಣತೆ 500ಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸಲಿದ್ದಾರೆ ಎಂದರು.

ADVERTISEMENT

ಏಳು ವಿಭಾಗಗಳಲ್ಲಿ ಬೆಳ್ಳಿ ಗಧೆ ಹಾಗೂ ನಗದು ಬಹುಮಾನ ನೀಡಲಾಗುತ್ತದೆ. ಒಟ್ಟು ₹5.40 ಲಕ್ಷ ಮೊತ್ತವನ್ನು ಬಹುಮಾನವಾಗಿ ನೀಡಲಾಗುತ್ತಿದೆ. ಕ್ರೀಡಾಪಟುಗಳಿಗೆ ಊಟ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿದೆ. ಪಂದ್ಯಾವಳಿಗೆ ಪ್ರವೇಶ ಉಚಿತವಾಗಿದೆ ಎಂದು ಹೇಳಿದರು.

ಮಾ.19 ರಂದು ಕುಸ್ತಿಪಟುಗಳ ಎತ್ತರ, ತೂಕ ತಪಾಸಣೆ ಮಾಡಲಾಗುತ್ತದೆ. ಮಾ.20 ರಂದು ಬೆಳಿಗ್ಗೆ 7 ಗಂಟೆಯಿಂದಲೇ ಕುಸ್ತಿ ಪಂದ್ಯಾವಳಿ ಆರಂಭವಾಗಲಿದೆ. 11 ಹಾಗೂ 14 ವರ್ಷದೊಳಗಿನ ವಿಭಾಗದಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳು ಮಾ.19ಕ್ಕೆ ಆ ವಯಸ್ಸು ಮೀರಿರಬಾರದು. ಆಧಾರ್‌ ಕಾರ್ಡ್‌ ಹಾಗೂ ಜನನ ಪ್ರಮಾಣ ಪತ್ರ ತರಬೇಕು ಎಂದರು.

ಪಂದ್ಯಾವಳಿಯನ್ನು ಕಾಂಗ್ರೆಸ್‌ ಮುಖಂಡ ನಾಗರಾಜ ಛಬ್ಬಿ ಉದ್ಘಾಟಿಸಲಿದ್ದಾರೆ. ಗುರುನಾಥ ದಾನವೇನವರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಸಿ.ಎಂ. ನಿಂಬಣ್ಣವರ, ಕಾಂಗ್ರೆಸ್‌ ಮುಖಂಡ ಸಂತೋಷ ಲಾಡ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಗುರುನಾಥ, ಕಿರಣ ಪಾಟೀಲ ಕುಲಕರ್ಣಿ, ಶಿವಲಿಂಗಪ್ಪ ಕುಂದರಗಿ, ಅಜ್ಜಪ್ಪ ನಡವಿನಮನಿ, ಫಕೀರಪ್ಪ ಕಣವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.