ಧಾರವಾಡ: ನಗರದ ವಿವಿಧ ರಸ್ತೆಗಳಲ್ಲಿ ಬೀಡಾಡಿ ದನಗಳ ಮಲಗುವುದು, ನಿಲ್ಲುವುದು ವಾಹನ ಸವಾರರು ಮತ್ತು ಜನರಿಗೆ ಕಿರಿಕಿರಿಯಾಗಿ ಪರಿಣಮಿಸಿದೆ.
ಹೊಸ ಬಸ್‌ನಿಲ್ದಾಣ, ರೈಲು ನಿಲ್ದಾಣ ರಸ್ತೆ, ಕಲ್ಯಾಣ ನಗರ, ಹು-ಧಾ ಬಿಆರ್‌ಟಿಎಸ್ ಮಾರ್ಗ, ಮಾರುಕಟ್ಟೆ, ಹಳೇ ಬಸ್‌ನಿಲ್ದಾಣ, ಜುಬಿಲಿ ವೃತ್ತ, ಸಪ್ತಾಪುರ, ಎಪಿಎಂಸಿ, ಕೋರ್ಟ್ ವೃತ್ತ, ಕೆಸಿಡಿ ವೃತ್ತ, ಕೆಲಗೇರಿ ರಸ್ತೆ, ಶಿವಾಜಿ ವೃತ್ತ ಸೇರಿದಂತೆ ಮುಖ್ಯರಸ್ತೆಗಳು, ಬಡಾವಣೆಗಳಲ್ಲಿ ಬೀಡಾಡಿ ದನಗಳ ಹಾವಳಿ ಸಂಕಷ್ಟ ತಂದೊಡ್ಡಿದೆ.
ರಸ್ತೆಯಲ್ಲಿ ಬೀಡಾಡಿ ದನಗಳು ಅಡ್ಡಾದಿಡ್ಡಿಯಾಗಿ ಓಡಾಡುತ್ತವೆ. ದನಗಳನ್ನು ತಪ್ಪಿಸಿ ವಾಹನ ಚಲಾಯಿಸುವ ಭರದಲ್ಲಿ ಅಪಘಾತ ಸಂಭವಿಸಿ, ಸವಾರರಿಗೆ ಪೆಟ್ಟಾದ ನಿದರ್ಶನಗಳಿವೆ. ರಾತ್ರಿ, ರಾಸುಗಳು ರಸ್ತೆಯಲ್ಲಿ ಪವಡಿಸಿರುವುದು, ನಿಂತಿರುವುದು ಸಮೀಪಕ್ಕೆ ಬರುವವರೆಗೂ ಗೋಚರಿಸದೆ ಸವಾರರು ವಾಹನ ಗುದ್ದಿಸಿ ರಾಸುಗಳು ಗಾಯಗೊಂಡ ಉದಾಹರಣೆಗಳೂ ಇವೆ.
ರಸ್ತೆಯಲ್ಲಿ ರಾಸುಗಳು ಹಾವಳಿ ತಪ್ಪಿಸಲು ಹು–ಧಾ ಮಹಾನಗರ ಪಾಲಿಕೆಯವರು ಗಮನ ಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಅಸಮಾಧಾನವಾಗಿದೆ.
‘ಜಿಲ್ಲಾ ಕೇಂದ್ರಕ್ಕೆ ನಿತ್ಯ ಸಹಸ್ರಾರು ಮಂದಿ ಭೇಟಿ ನೀಡುತ್ತಾರೆ. ಹಳೇ ಪಿ.ಬಿ. ರಸ್ತೆಯಲ್ಲಿ ದಿನವಿಡೀ ಸಾವಿರಾರು ವಾಹನಗಳು ಸಂಚರಿಸುತ್ತವೆ. ಬೀಡಾಡಿ ಜಾನುವಾರುಗಳು ರಸ್ತೆಯಲ್ಲಿ ಮಲಗಿರುತ್ತವೆ.ಇದು ಸಂಚಾರಕ್ಕೆ ಸಂಚಕಾರವಾಗಿ ಪರಿಣಮಿಸಿದೆ. ರಸ್ತೆಯಲ್ಲಿನ ಜಾನುವಾರುಗಳನ್ನು ಗೋಶಾಲೆಗೆ ಸಾಗಿಸಲು ಪಾಲಿಕೆಯವರು ಕ್ರಮ ವಹಿಸಬೇಕು’ ಎಂದು ವಿದ್ಯಾರ್ಥಿ ನವೀನ ಪಾಟೀಲ ಒತ್ತಾಯಿಸಿದರು.
ವ್ಯಾಪಾರಸ್ಥರಿಗೂ ತೊಂದರೆ
‘ಮಾರುಕಟ್ಟೆ ಭಾಗದಲ್ಲೂ ಬೀಡಾಡಿ ದನಗಳ ಹಾವಳಿ ಇದೆ. ಹಣ್ಣು ಸೊಪ್ಪು ತರಕಾರಿಗಳನ್ನು ತಿನ್ನಲು ನುಗ್ಗುತ್ತವೆ. ಸ್ವಲ್ಪ ಯಾಮಾರಿದರೂ ಬಾಯಿ ಹಾಕಿ ಹಣ್ಣು ಸೊಪ್ಪು ತರಕಾರಿಯನ್ನು ಚೆಲ್ಲಾಪಿಲ್ಲಿ ಮಾಡುತ್ತವೆ. ದನಗಳನ್ನು ಮಾರುಕಟ್ಟೆಯಿಂದ ಓಡಿಸಲು ವ್ಯಾಪಾರಿಗಳು ಹರಸಾಹಸ ಪಡುವಂತಾಗಿದೆ. ಒಂದು ಕಡೆ ಓಡಿಸಿದರೆ ಮತ್ತೊಂದು ಕಡೆಯಿಂದ ನುಗ್ಗುತ್ತವೆ. ವ್ಯಾಪಾರ ಮಾಡುವುದಕ್ಕಿಂತ ದನ ಓಡಿಸುವುದೇ ಕೆಲಸವಾಗಿದೆ. ನಿತ್ಯವೂ ತೊಂದರೆ ಅನುಭವಿಸುವಂತಾಗಿದೆ. ಬೀಡಾಡಿ ದನಗಳ ವಾರಸುದಾರರನ್ನು ಪತ್ತೆ ಹಚ್ಚಿ ಎಚ್ಚರಿಕೆ ನೀಡಿ ದಂಡ ವಿಧಿಸಬೇಕು’ ಎಂದು ತರಕಾರಿ ವ್ಯಾಪಾರಿ ಯಲ್ಲಮ್ಮ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.