ADVERTISEMENT

ಹುಬ್ಬಳ್ಳಿ | ಬಿಡಾಡಿ ದನಗಳ ಹಾವಳಿಗೆ ಬೇಕಿದೆ ನಿಯಂತ್ರಣ

ಸಿದ್ದನಗೌಡ ಪಾಟೀಲ
Published 6 ನವೆಂಬರ್ 2023, 5:06 IST
Last Updated 6 ನವೆಂಬರ್ 2023, 5:06 IST
ಹುಬ್ಬಳ್ಳಿಯ ಮೇದಾರ ಓಣಿಯಲ್ಲಿ ಬೀಡು ಬಿಟ್ಟಿರುವ ಗೋವುಗಳು
ಹುಬ್ಬಳ್ಳಿಯ ಮೇದಾರ ಓಣಿಯಲ್ಲಿ ಬೀಡು ಬಿಟ್ಟಿರುವ ಗೋವುಗಳು   

ಹುಬ್ಬಳ್ಳಿ: ನಗರ ಮತ್ತು ತಾಲ್ಲೂಕಿನ ಜನಸಂದಣಿ ಪ್ರದೇಶಗಳಲ್ಲಿ ಜಾನುವಾರುಗಳ ಹಾವಳಿ ಹೆಚ್ಚಾಗಿದ್ದು, ಇವುಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಸ್ಥಳೀಯ ಆಡಳಿತ ವ್ಯವಸ್ಥೆಯ ಲೋಪದಿಂದ ಸಮಸ್ಯೆ ಹೆಚ್ಚಾಗುತ್ತಿದೆ.

ಬಿಡಾಡಿ ದನಗಳನ್ನು ಹಿಡಿದು ಬೇರೆಡೆ ಸಾಗಿಸುವ ಕೆಲಸವನ್ನು ಪಾಲಿಕೆ ಮಾಡುತ್ತಿಲ್ಲ. ನಗರದಲ್ಲಿ 3 ಗೋಶಾಲೆಗಳು ಇವೆ. ರಸ್ತೆಯಲ್ಲಿ ಬೀಡು ಬಿಡುವ ಜಾನುವಾರುಗಳನ್ನು ಸಿಬ್ಬಂದಿ ಪತ್ತೆ ಹಚ್ಚಿ ಗೋಶಾಲೆಗೆ ಕಳುಹಿಸಬೇಕು. ಮೂಲ ಮಾಲೀಕರು ಬಂದರೆ ದಂಡ ವಿಧಿಸಿ ಕಠಿಣ ಎಚ್ಚರಿಕೆ ನೀಡಬೇಕು. ಆದರೆ ಇವು ಯಾವ ಕೆಲಸಗಳೂ ಆಗುತ್ತಿಲ್ಲ.

ಬಸ್‌ ನಿಲ್ದಾಣ, ಮಾರುಕಟ್ಟೆ ಪ್ರದೇಶ ಮತ್ತು ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಓಡಾಡುವ ದನಗಳಿಂದ ತೀವ್ರ ತೊಂದರೆಯಾಗಿದೆ. ಬಿಡಾಡಿ ದನ ಎಂದು ಕಟ್ಟಿ ಹಾಕಿದರೆ ಬಿಡಿಸಿಕೊಂಡು ಹೋಗಲು ಬರುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿರುವ ಎಲ್ಲವೂ ಬಿಡಾಡಿ ದನಗಳಲ್ಲ. ಆದ್ದರಿಂದ ಸ್ಥಳೀಯ ಆಡಳಿತ ಅಸಲಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಭವಿಷ್ಯದಲ್ಲಾಗುವ ಜೀವಹಾನಿಗಳನ್ನಾದರೂ ತಡೆಯಬಹುದು.

ADVERTISEMENT
ನಗರದಲ್ಲಿ ಹೆಸರಿಗಷ್ಟೇ ಬಿಡಾಡಿ ದನಗಳು ಇವೆ. ಅವುಗಳ ಮೂಲ ಮಾಲೀಕರು ರಸ್ತೆಗೆ ಬಿಟ್ಟು ಸುಮ್ಮನಾಗುತ್ತಾರೆ. ಸಾರ್ವಜನಿಕರಲ್ಲಿ ಜಾಗೃತಿ ಬರದೇ ಹೊರತು ಸಮಸ್ಯೆಗೆ ಮುಕ್ತಿ ಇಲ್ಲ.
ಎ.ಜೆ.ಕುಲಕರ್ಣಿ, ಪಶು ವೈದ್ಯ ಮಹಾನಗರ ಪಾಲಿಕೆ

ನಗರದ ಹೃದಯ ಭಾಗದಲ್ಲಿಯೇ ಇರುವ ಗೌಳಿಗರ ಗಲ್ಲಿಯನ್ನು ಸ್ಥಳಾಂತರ ಮಾಡಬೇಕು ಎಂದು ಸ್ಮಾರ್ಟ್‌ ಸಿಟಿ ತಜ್ಞರು ಹೇಳುತ್ತಾರೆ. ಆದರೆ ಅವರಿಗೆ ನೀಡುವ ಪರ್ಯಾಯ ಜಾಗ ನಗರಕ್ಕೆ ಸಮೀಪವಿದ್ದರೆ ಮಾತ್ರ ಹೋಗುವುದಾಗಿ ಆ ಸಮುದಾಯದ ಜನ ಹೇಳುತ್ತಾರೆ. ಹೆಚ್ಚು ಜನ ಓಡಾಡುವ ಪ್ರದೇಶದಲ್ಲಿಯೇ ನೂರಾರು ಸಂಖ್ಯೆಯಲ್ಲಿ ಬೆಳಿಗ್ಗೆ, ಮಧ್ಯಾಹ್ನ ಮೇಯಲು ಹೋಗಿ ಬರುವಾಗ ಅಕ್ಷರಶಃ ಸಂಚಾರ ಬಂದ್‌ ಆಗುತ್ತದೆ.

ಗೋಶಾಲೆ

ನಗರದಲ್ಲಿ ಜೈನ್‌ ಸಮಾಜದಿಂದ ಪಾಂಜರಪೋಳ, ಸಿದ್ಧಾರೂಢಮಠದ ಗೋಶಾಲೆ ಇದೆ. ಇನ್ನೊಂದು ಗೋಶಾಲೆ ನಿರ್ಮಾಣ ಮಾಡಬೇಕು ಎಂದು ಈ ಹಿಂದಿನ ಸರ್ಕಾರ ನಿರ್ಧಾರ ಮಾಡಿತ್ತು. ಅದಿನ್ನು ಕಾರ್ಯರೂಪಕ್ಕೆ ಬಂದಿಲ್ಲ. ಗೋಶಾಲೆ ನಿರ್ವಹಣೆ ಕೂಡಾ ವೆಚ್ಚದಾಯಕವಾಗಿರುವುದರಿಂದ ನಿರ್ವಹಣೆ ಕೂಡಾ ದುಬಾರಿಯಾಗುತ್ತದೆ.

ಪಶುವೈದ್ಯರ ಕೊರತೆ ಇದ್ದರೂ ಸಮಸ್ಯೆ ಆಗದಂತೆ ಕಾರ್ಯನಿರ್ವಹಣೆಗೆ ಒತ್ತು ನೀಡಿದ್ದೇವೆ. ರೋಗ ಬಂದರೆ ಜಾನುವಾರುಗಳಿಗೆ ಚಿಕಿತ್ಸೆ ನೀಡುತ್ತೇವೆ. ಆದರೆ ಅವುಗಳಿಂದ ತೊಂದರೆಯಾದರೆ ಆಡಳಿತ ವ್ಯವಸ್ಥೆ ಕ್ರಮ ಕೈಗೊಳ್ಳುತ್ತದೆ
ಡಾ. ರವಿ ಸಾಲಿಗೌಡರ, ಉಪನಿರ್ದೇಶಕರು, ಆಡಳಿತ ಪಶು ಸಂಗೋಪನೆ ಇಲಾಖೆ ಧಾರವಾಡ

ಖಾಸಗಿಯಾಗಿ ಪಾಲಿಕೆ ಸಿಬ್ಬಂದಿ ದನಗಳನ್ನು ಹಿಡಿದು ಗೋಶಾಲೆಗೆ ಸಾಗಿಸಬೇಕು ಎಂದರೆ ಅಲ್ಲಿ ಸ್ಥಳಾವಕಾಶ ಇಲ್ಲ. ಅವರು ಸೇರಿಸಿಕೊಳ್ಳುವುದಿಲ್ಲ. ನೀರು, ಮೇವಿನ ಕೊರತೆಯಿಂದ ದನಗಳನ್ನು ಬೀದಿಗೆ ಬಿಡುವುದು ಅನಿವಾರ್ಯವಾಗಿದೆ. ಈ ಸಾರಿ ಮುಂಗಾರು, ಹಿಂಗಾರು ಮಳೆ ಕೊರತೆ ಆಗಿರುವುದರಿಂದ ದನಗಳನ್ನು ಸಾಕುವುದು ರೈತರಿಗೆ, ಹೈನುಗಾರರಿಗೆ ಇನ್ನೂ ಸಂಕಷ್ಟ ಎದುರಾಗಿದೆ.

ತಾಲ್ಲೂಕುಗಳಲ್ಲಿನ ಸಮಸ್ಯೆ

ಧಾರವಾಡ ಜಿಲ್ಲೆಯ ಬಹುತೇಕ ತಾಲ್ಲೂಕುಗಳು ಕೃಷಿ ಪ್ರಧಾನ ಪಟ್ಟಣಗಳೇ ಆಗಿರುವುದರಿಂದ ಜಾನುವಾರುಗಳು ರಸ್ತೆಯಲ್ಲಿ ಸಂಚರಿಸುವುದು ಸಾಮಾನ್ಯವಾಗಿದೆ.

ಸಂಚಾರಕ್ಕೆ ಅಲ್ಪ ತೊಂದರೆಯಾದರೂ ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಾಗುತ್ತದೆ. ಹಿಂದಿನಂತೆ ಕೊಂಡವಾಡಗಳಾಲಿ, ಗೋಶಾಲೆಗಳಾಗಲಿ ಇಲ್ಲ. ಇಲ್ಲಿ ಬಿಡಾಡಿ ದನಗಳ ಸಂಖ್ಯೆ ಕಡಿಮೆ. ದನಗಳ ಮಾಲೀಕರೇ ಎಚ್ಚರ ವಹಿಸ ತಮ್ಮ ಜಾನುವಾರುಗಳ ಮೇಲೆ ನಿಗಾ ಇಟ್ಟಿರುತ್ತಾರೆ.

ಕಡಿಮೆಯಾದ ಗೋಮಾಳ: ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಈ ಹಿಂದೆ ಗೋಮಾಳಗಳು ಇದ್ದವು. ಈಗ ಕೆಲವು ಮಾತ್ರ ಉಳಿದಿದ್ದರೂ ಅವುಗಳ ಮೇಲೂ ಉದ್ಯಮಿಗಳ ಕಣ್ಣು ಬಿದ್ದಿರುವುದರಿಂದ ಗೋಮಾಳ ಸಂಪೂರ್ಣ ನಶಿಸಿ ಹೋಗುವ ಆತಂಕ ಇದ್ದೇ ಇದೆ. ಕೆಲವು ಅತಿಕ್ರಮಣಗೊಂಡರೆ, ಕೆಲವೆಡೆ ಸರ್ಕಾರಿ ಕಟ್ಟಡಗಳು ತಲೆ ಎತ್ತಿವೆ. ಜಾನುವಾರುಗಳಿಗೆ ಮೇಲಿಂದ ಮೇಲೆ ಬರುವ ಕಾಯಿಲೆ, ನಿರ್ವಹಣೆ ವೆಚ್ಚದಿಂದ ಶೇ 70ರಷ್ಟು ಜಾನುವಾರು ಸಾಕಾಣಿಕೆ ಕಡಿಮೆಯಾಗಿದೆ. ಅವಳಿ ನಗರದಲ್ಲಿ ಈಗ ಯಾವುದೇ ಗೋಮಾಳಗಳು ಉಳಿದಿಲ್ಲ. ಇರುವ ಕೆಲವು ಗೋಮಾಳಗಳಲ್ಲಿ ದನ ಮೇಯಿಸಲು ಹೋಗುತ್ತಾರೆ.

ನಗರದಲ್ಲಿ ಎಲ್ಲೆಂದರಲ್ಲಿ ದನಗಳು ರಸ್ತೆಗೆ ಅಡ್ಡಲಾಗಿ ನಿಂತಿರುತ್ತವೆ. ಸಂಚಾರ ಪೊಲೀಸರೇ ಕೆಲವೊಮ್ಮೆ ರಸ್ತೆಯಿಂದ ಆಚೆ ಕಳುಹಿಸುತ್ತಾರೆ. ಆದರೆ ಪಾಲಿಕೆ ಮಾತ್ರ ಗಂಭೀರ ಕ್ರಮ ಕೈಗೊಳ್ಳುತ್ತಿಲ್ಲ.
ಚಂದ್ರಶೇಖರ ಯಾವಗಲ್ಲ ಮಠ, ಉಪನ್ಯಾಸಕ

ಒಟ್ಟಾರೆಯಾಗಿ ದನಗಳ ಹಾವಳಿಯಿಂದ ವೃದ್ಧರು, ಮಕ್ಕಳು, ಮಹಿಳೆಯರಿಗೆ ನಿತ್ಯ ತೊಂದರೆ ತಪ್ಪಿದ್ದಲ್ಲ.

ಬಿಡಾಡಿ ದನಗಳ ಸಮಸ್ಯೆ ಹೇಗೆ?

ಇಲ್ಲಿ ಪಶು ತಜ್ಞರು ಮೂರು ಕಾರಣಗಳನ್ನು ನೀಡುತ್ತಾರೆ. ಆಸ್ತಿಕರು ಪೂಜ್ಯ ಭಾವನೆಯಿಂದ ನೋಡಿದರೆ, ನಗರ ಯೋಜನಾ ತಜ್ಞರು ದನಗಳು ರಸ್ತೆಗೆ ಇಳಿಯಬಾರದು ಎನ್ನುತ್ತಾರೆ. ಮಾಲೀಕರು ಹೆಚ್ಚು ವೆಚ್ಚ ಇಲ್ಲದೇ ಜಾನುವಾರುಗಳನ್ನು ಬೀದಿಗೆ ಬಿಡುವುದರಿಂದ ಲಾಭ ಮಾಡಿಕೊಳ್ಳುತ್ತಾರೆ. ಬಡಾವಣೆಗಳಲ್ಲಿ ಜನರು ಆಹಾರ ನೀಡುವುದರಿಂದ ದನಗಳು ನಿತ್ಯ ಅಲ್ಲಿಯೇ ಸಂಚಾರ ಮಾಡುತ್ತವೆ.

ಆದರೆ ದನಗಳಿಗೆ ಜನರು ನೀಡುವ ರೊಟ್ಟಿ, ಅನ್ನ ವ್ಯರ್ಜ್ಯ. ಇದು ಕಾಯಿಲೆಗೆ ಕಾರಣವಾಗುತ್ತದೆ. ಮೇವು, ಹುಲ್ಲು ತಿನ್ನಬೇಕಾದ ದನಗಳು ಮನುಷ್ಯರ ಆಹಾರವನ್ನು ಸೇವಿಸಿ ಅಜೀರ್ಣತೆ, ಹೊಟ್ಟೆ ಉಬ್ಬುವುದು, ಕಾಲು, ಬಾಯಿ ರೋಗಕ್ಕೆ ಕಾರಣವಾಗಿ ಮಾಲೀಕರಿಗೆ ನಷ್ಟವನ್ನು ಉಂಟು ಮಾಡುತ್ತಿವೆ.

ಗೋವು... ಧರ್ಮ ಸೂಕ್ಷ್ಮ

ಗೋವುಗಳು ಹಿಂದೂಗಳಿಗೆ ಪವಿತ್ರ ಎಂಬ ಕಾರಣಕ್ಕೆ ಮಾರುಕಟ್ಟೆಯ ಜನನಿಬಿಡ ಪ್ರದೇಶದಲ್ಲಿ ಸೇರುವ ಗೋವುಗಳಿಗೆ ಆಸ್ತಿಕರು ನಿತ್ಯ ಹುಲ್ಲು ಹಾಕುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ. ಇದರಿಂದ ಸಂಚಾರಕ್ಕೆ ತೊಂದರೆಯಾದರೂ ಗೋವುಗಳನ್ನು ಮುಟ್ಟಿ ನಮಸ್ಕಾರ ಮಾಡಿ ಸಂಚರಿಸುತ್ತಾರೆ. ಹುಲ್ಲು ಮಾರುವವರಿಗೆ ವ್ಯಾಪಾರವಾದರೆ ಸ್ವಚ್ಛತಾ ಸಿಬ್ಬಂದಿಗೆ ನಿತ್ಯ ಬೇಸರ ಇರುತ್ತದೆ. ಧಾರ್ಮಿಕ ಕಾರಣಕ್ಕೆ ಮಹಾನಗರ ಪಾಲಿಕೆ ಏನೂ ಮಾಡಲು ಆಗುತ್ತಿಲ್ಲ. ಜನರೇ ಸಮೀಪದ ಗೋಶಾಲೆಗೆ ಹೋಗಿ ಹುಲ್ಲು ಹಾಕಿ ಬಂದರೆ ಸಮಸ್ಯೆ ಕಡಿಮೆಯಾಗುತ್ತದೆ. ಕೆಲವು ಗೋಪಾಲಕರು ಗೋಮಾಳ ಇಲ್ಲದೇ ಇರುವುದರಿಂದ ಬಡಾವಣೆಗಳಲ್ಲಿ ದನಗಳನ್ನು ಬಿಡುತ್ತಾರೆ. ಅವು ಅಲ್ಲಿನ ಮನೆಯವರು ನೀಡುವ ಆಹಾರಕ್ಕೆ ನಿತ್ಯ ಅಲ್ಲಿಯೇ ಸಂಚರಿಸುವುದರಿಂದ ಸಣ್ಣಪುಟ್ಟ ಅಪಘಾತಗಳು ಆಗಿದ್ದು ಉಂಟು. ಬಾಲಕನ ಮೇಲೆ ಹೋರಿಯೊಂದು ತಿವಿದು ಗಾಯ ಆಗಿದ್ದು ಇದೆ.

ಜಾನುವಾರು ಗಣತಿ ಆಧರಿಸಿದ ಮಾಹಿತಿ

ಪಶು ವೈದ್ಯರ ಕೊರತೆ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಮಂಜೂರಾದ ಎಲ್ಲ ಹುದ್ದೆಗಳಿಗೆ ಪಶು ವೈದ್ಯರ ನೇಮಕ ಆಗದೇ ಇರುವುದರಿಂದ ತೊಂದರೆ ಆಗಿದೆ. ಜಿಲ್ಲೆಗೆ 76 ಪಶುವೈದ್ಯರ ಹುದ್ದೆಗಳು ಮಂಜೂರಾಗಿವೆ. ಸದ್ಯ ಕಾರ್ಯನಿರ್ವಹಿಸುತ್ತಿರುವವರು 47 ಮಾತ್ರ. ಇನ್ನೂ 29 ಹುದ್ದೆಗಳು ಖಾಲಿ ಉಳಿದಿವೆ. ಖಾಲಿ ಇರುವ ಹುದ್ದೆಗಳ ಪೈಕಿ ಐವರು ಮುಖ್ಯ ಪಶುವೈದ್ಯಾಧಿಕಾರಿಗಳು ಮೂರು ಹಿರಿಯ ಪಶುವೈದ್ಯಾಧಿಕಾರಿಗಳು ಹಾಗೂ 21 ಪಶು ವೈದ್ಯಾಧಿಕಾರಿಗಳು. ಇಷ್ಟೊಂದು ಪ್ರಮಾಣದಲ್ಲಿ ಪಶು ಚಿಕಿತ್ಸಕರ ಹುದ್ದೆ ಭರ್ತಿಯಾಗದೇ ಇರುವುದರಿಂದ ಹಲವು ಆಸ್ಪತ್ರೆಗಳಲ್ಲಿ ಪಶುವೈದ್ಯರು ಲಭ್ಯವಿಲ್ಲ. ಪರಿಣಾಮವಾಗಿ ಕೆಲವು ಪಶು ವೈದ್ಯರಿಗೆ ಅವರಿಗೆ ಹತ್ತಿರದ ಆಸ್ಪತ್ರೆಗಳ ಜವಾಬ್ದಾರಿಯನ್ನೂ ವಹಿಸಲಾಗಿದೆ. ಇದರಿಂದಾಗಿ ರೈತರಿಗೆ ಅಗತ್ಯ ಇರುವ ಸಂದರ್ಭಕ್ಕೆ ಪಶುವೈದ್ಯರು ತಲುಪುವುದು ಕಷ್ಟಸಾಧ್ಯವಾಗಿದೆ.

ಹುಬ್ಬಳ್ಳಿಯ ನೆಹರೂ ಕಾಲೇಜಿನ ಎದುರು ರಸ್ತೆಯಲ್ಲಿಯೇ ಮಲಗಿರುವ ದನಗಳು
ವಿದ್ಯಾನಗರ ಪ್ರವೇಶಿಸುವ ಮಾರ್ಗದಲ್ಲಿ ರಸ್ತೆಯಲ್ಲಿ ಅಡ್ಡಲಾಗಿ ಮಲಗಿರುವ ದೃಶ್ಯ
ಜನನಿಬಿಡ ಮಾರುಕಟ್ಟೆ ಪ್ರದೇಶದ ಮೇದಾರ ಓಣಿಯಲ್ಲಿರುವ ಜಾನುವಾರುಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.