ಹುಬ್ಬಳ್ಳಿ: ಅವಳಿ ನಗರದಲ್ಲಿ ಬೀದಿನಾಯಿ ಹಾವಳಿ ಅತಿಯಾಗಿದೆ. ಮಕ್ಕಳು, ವೃದ್ಧರು, ದ್ವಿಚಕ್ರ ವಾಹನ ಸವಾರರು ಸಂಚರಿಸಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಳೇ ಹುಬ್ಬಳ್ಳಿ, ನೇಕಾರ ನಗರ, ಶೆಟ್ಟರ ಕಾಲೊನಿ, ಲಿಂಗರಾಜ ನಗರ, ಅರವಿಂದ ನಗರ, ಶಾಂತಿ ನಗರ, ಮಂಟೂರು ರಸ್ತೆ, ಕಾಟನ್ ಮಾರ್ಕೆಟ್, ಆನಂದ ನಗರ, ಹೆಗ್ಗೇರಿ, ಗೋಪನಕೊಪ್ಪ, ಕೇಶ್ವಾಪುರ, ಅಯೋಧ್ಯ ನಗರ ಹಾಗೂ ಧಾರವಾಡದ ಸೂಪರ್ ಮರುಕಟ್ಟೆ, ಶಿವಾಜಿ ವೃತ್ತ, ನಗರ ಸಾರಿಗೆ ಬಸ್ ನಿಲ್ದಾಣ, ಮಟನ್ ಮಾರ್ಕೆಟ್ ಸೇರಿ ನಗರದ ಪ್ರಮುಖ ಬೀದಿಗಳಲ್ಲಿ ನಾಯಿಗಳ ಹಾವಳಿ ಅಧಿಕವಾಗಿದೆ.
‘ರಾತ್ರಿ ವೇಳೆ ದ್ವಿಚಕ್ರ ವಾಹನಗಳಿಗೆ ಬೆನ್ನತ್ತುವ ನಾಯಿಗಳಿಂದ ಹಲವು ಅಪಘಾತ ಸಂಭವಿಸಿವೆ. ಮಕ್ಕಳು ಬೀದಿಗಳಲ್ಲಿ ಆಟವಾಡುವಾಗ ನಾಯಿ ಕಚ್ಚಿ ಗಾಯಗೊಳಿಸಿವೆ. ಧಾರವಾಡದ ಸೂಪರ್ ಮಾರುಕಟ್ಟೆಯಲ್ಲಿ ರಾತ್ರಿ ವೇಳೆ ಸಂಗ್ರಹವಾದ ತ್ಯಾಜ್ಯ ವಸ್ತುಗಳನ್ನು ತಿನ್ನಲು ಬರುವ ಬೀದಿನಾಯಿ ಹಾಗೂ ಬೀಡಾಡಿ ದನಗಳಿಂದ ಓಡಾಡಲು ಭಯ ಪಡುವಂತಾಗಿದೆ’ ಎಂದು ಜನರು ತಿಳಿಸಿದರು.
‘ಅವಳಿ ನಗರಗಳಲ್ಲಿ 30 ಸಾವಿರ ಬೀದಿನಾಯಿಗಳಿವೆ. ಸಲಕಿನಕೊಪ್ಪ ಗ್ರಾಮದಲ್ಲಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಮಾಡಲಾಗುತ್ತದೆ. ಪ್ರತಿ ವರ್ಷ 5 ಸಾವಿರ ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದ್ದು, ‘ಕೇರ್ ಆಫ್ ದಿ ವಾಯ್ಸ್‌ಲೆಸ್’ ಸಂಸ್ಥೆಗೆ ಟೆಂಡರ್ ನೀಡಲಾಗಿದೆ. ಪ್ರತಿ ನಾಯಿಗೆ ₹ 1650ರಂತೆ ದರ ನಿಗದಿಪಡಿಸಲಾಗಿದೆ’ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಪ್ರಭಾರ ಪಶು ವೈದ್ಯಾಧಿಕಾರಿ ಎ.ಜಿ. ಕುಲಕರ್ಣಿ ತಿಳಿಸಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಭೆಗಳಲ್ಲಿ ಬೀದಿನಾಯಿಗಳ ನಿಯಂತ್ರಣ ಕುರಿತು ಅನೇಕ ನಿರ್ಣಯಗಳನ್ನು ಕೈಗೊಂಡಿದ್ದರು ಕೂಡ ಬೀದಿನಾಯಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಬೀದಿನಾಯಿ ದತ್ತು ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಭಾಗವಹಿಸಿ ನಾಯಿ ಮರಿಗಳನ್ನು ದತ್ತು ಪಡೆಯಬೇಕು. ಇದರಿಂದ ಬೀದಿನಾಯಿ ಹಾವಳಿ ತಡೆಗೆ ಕ್ರಮ ವಹಿಸಿದಂತಾಗುತ್ತದೆರಮೇಶ ಭಜಂತ್ರಿ ಹಿರಿಯ ಸಂಯೋಜಕ ಹ್ಯೂಮನ್ ವರ್ಲ್ಡ್ ಅನಿಮಲ್ಸ್ ಸಂಸ್ಥೆ
40 ಬೀದಿನಾಯಿಗಳು ದತ್ತು
ಹ್ಯೂಮನ್ ವರ್ಲ್ಡ್ ಅನಿಮಲ್ ಸಂಸ್ಥೆಯಿಂದ ಮಹಾನಗರ ಪಾಲಿಕೆ ಹಾಗೂ ಪಶುಪಾಲನೆ ಇಲಾಖೆ ಸಹಯೋಗದೊಂದಿಗೆ ಕಳೆದ ವರ್ಷ ಬೀದಿನಾಯಿ ದತ್ತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ‘ಸಂಸ್ಥೆಯಲ್ಲಿ ಒಟ್ಟು 250 ಜನ ಸ್ವಯಂ ಸೇವಕರಿದ್ದು ದತ್ತು ನೀಡುವ ನಾಯಿ ಮರಿಗಳನ್ನು ಗುರುತಿಸಿ ಕಾನೂನು ಸೂಚನೆ ಅನುಸಾರ ನಾಯಿಮರಿಗಳನ್ನು ದತ್ತು ನೀಡಲಾಗುತ್ತದೆ. ಪ್ರಸ್ತುತ ವರ್ಷದಲ್ಲಿ ಏಳು ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪಾಲಿಕೆ ವತಿಯಿಂದ ದತ್ತು ಕಾರ್ಯಕ್ರಮ ನಡೆಸಲಾಗಿದ್ದು 40 ಬೀದಿ ನಾಯಿಗಳನ್ನು ಸಾರ್ವಜನಿಕರು ದತ್ತು ಪಡೆದಿದ್ದಾರೆ’ ಎಂದು ಹ್ಯೂಮನ್ ವರ್ಲ್ಡ್ ಅನಿಮಲ್ ಸಂಸ್ಥೆ ಹಿರಿಯ ಸಂಯೋಜಕ ರಮೇಶ ಭಜಂತ್ರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.