
ಉಪ್ಪಿನಬೆಟಗೇರಿಯ ಹೊಸ ಬಸ್ ನಿಲ್ಧಾಣದಲ್ಲಿ ವಿದ್ಯಾರ್ಥಿಗಳು ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು
ಉಪ್ಪಿನಬೆಟಗೇರಿ: ಸಕಾಲಕ್ಕೆ ಬಸ್‌ಗಳು ಬಾರದಿದ್ದುದನ್ನು ಖಂಡಿಸಿ ವಿದ್ಯಾರ್ಥಿಗಳು ಇಲ್ಲಿನ ಹೊಸ ಬಸ್ ನಿಲ್ಧಾಣದಲ್ಲಿ ಶುಕ್ರವಾರ 11 ಬಸ್‌ಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಮೂರು ಗಂಟೆ ಬಸ್ ಸಂಚಾರ ತಡೆದಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಬಶೀರ ಅಹ್ಮದ ಮಾಳಗಿಮನಿ ಹಾಗೂ ಗರಗ ಪಿಎಸ್‌ಐ ಸಿದ್ದರಾಮಪ್ಪ ಉನ್ನದ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮನವೊಲಿಸಲು ಯತ್ನಿಸಿದರು.
ಉಪ್ಪಿನಬೆಟಗೇರಿಗೆ ಬಂದ ಧಾರವಾಡದ ಸಾರಿಗೆ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ, ಸಮಸ್ಯೆ ಆಲಿಸಿದರು.
ಬೆಳಿಗ್ಗೆ ಮತ್ತು ಸಂಜೆ ವೇಳೆ ಪ್ರಯಾಣಿಕರ ಸಂಖ್ಯೆ ಹೆಚ್ಚು ಇರುತ್ತದೆ. ಹೀಗಾಗಿ ಈ ಸಮಸ್ಯೆ ಉಂಟಾಗುತ್ತಿದೆ. ಶೀಘ್ರ ಈ ಸಮಯದಲ್ಲಿ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಲು ಕ್ರಮ ಜರುಗಿಸಲಾಗುವುದು ಎಂದು ಧಾರವಾಡ ಡಿಪೊ ವ್ಯವಸ್ಥಾಪಕರಾದ ಕವಿತಾ ಪಾಟೀಲ ತಿಳಿಸಿದರು.
ಗರಗ ಪಿಎಸ್‌ಐ ಶಿವಯೋಗಿ ಲೋಹರ ಮಾತನಾಡಿದರು.
ವಿದ್ಯಾರ್ಥಿಗಳ ಮನವಿ ಪತ್ರ ಸ್ವೀಕರಿಸಲಾಗಿದೆ. ಬೇಡಿಕೆಯಂತೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಲಾಗುವುದು- ಕವಿತಾ ಪಾಟೀಲ, ಡಿಪೊ ವ್ಯವಸ್ಥಾಪಕಿ ಧಾರವಾಡ
ಬಸ್‌ಗಳು ಸಮಯಕ್ಕೆ ಬಾರದಿರುವುದರಿಂದ ಸಮಸ್ಯೆಯಾಗುತ್ತಿರುವ ಬಗ್ಗೆ ಸಾರಿಗೆ ಸಂಸ್ಥೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಅಲ್ಲದೆ, ಹೆಚ್ಚುವರಿ ಬಸ್ ಸೌಲಭ್ಯ ಒದಗಿಸದಿದ್ದರೆ ಪ್ರತಿಭಟನೆ ಮಾಡುವುದಾಗಿಯೂ ತಿಳಿಸಲಾಗಿತ್ತು. ಆದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.