ADVERTISEMENT

ಅರ್ಜಿದಾರರಿಗೆ ತಪ್ಪು ದಾಖಲೆ ಪೂರೈಕೆ: ಉಪನೋಂದಣಾಧಿಕಾರಿ ಕಚೇರಿ ಸಿಬ್ಬಂದಿಗೆ ದಂಡ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 7:10 IST
Last Updated 15 ಜುಲೈ 2025, 7:10 IST
ಸಾಂದರ್ಭಿಕ ಆದೇಶ
ಸಾಂದರ್ಭಿಕ ಆದೇಶ   

ಹುಬ್ಬಳ್ಳಿ: ಅರ್ಜಿದಾರರಿಗೆ ತಪ್ಪು ದಾಖಲೆಗಳನ್ನು ಪೂರೈಸಿದ ಪ್ರಕರಣದಲ್ಲಿ ಇಲ್ಲಿನ ಉಪನೋಂದಣಾಧಿಕಾರಿ ಕಚೇರಿ ಸಿಬ್ಬಂದಿ ಮತ್ತು ಗುಮಾಸ್ತರಿಗೆ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ವಕೀಲ ನಾರಾಯಣರಾವ್ ಸಾಳುಂಕೆ ಅವರು ತಮ್ಮ ಕಕ್ಷಿದಾರರ ಪರ ನ್ಯಾಯಾಲಯಕ್ಕೆ ಸಲ್ಲಿಸಲು ಅಗತ್ಯ ಇರುವ ಜಮೀನು ಕ್ರಯಪತ್ರದ ದಾಖಲೆಗಳನ್ನು ಒದಗಿಸುವಂತೆ ಉಪನೋಂದಣಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಕಂಪ್ಯೂಟರ್ ತೊಂದರೆ ಕಾರಣ ಹೇಳಿದ ಕಚೇರಿ ಸಿಬ್ಬಂದಿ, ಮತ್ತೊಮ್ಮೆ ಅರ್ಜಿ ಸಲ್ಲಿಸುವಂತೆ ತಿಳಿಸಿದ್ದರು.

ನಾರಾಯಣರಾವ್ ಅವರು ಎರಡನೇ ಬಾರಿ ಅರ್ಜಿ ಸಲ್ಲಿಸಿದ ಬಳಿಕ ಅವರಿಗೆ ಉ‍ಪನೋಂದಣಾಧಿಕಾರಿ ಕಚೇರಿ ಸಿಬ್ಬಂದಿ ತಪ್ಪಾದ ದಾಖಲೆಗಳನ್ನು ಒದಗಿಸಿದ್ದರು. ಇದನ್ನು ಪ್ರಶ್ನಿಸಿ ಅವರು ಆಯೋಗದ ಮೆಟ್ಟಿಲೇರಿದ್ದರು.

ADVERTISEMENT

ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ, ‘ಉಪನೋಂದಣಾಧಿಕಾರಿ ಕಚೇರಿ ಸಿಬ್ಬಂದಿ ರಾಜೇಶ್ವರಿ ಅರತಗಲಾ, ಹೀರಾಬಾಯಿ ಸೋನೆವಾನೆ ಹಾಗೂ ಗುಮಾಸ್ತ ದೀಪಕ ಪತಂಗೆ ಸೂಕ್ತ ದಾಖಲೆ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ದಾಖಲೆ ಪಡೆಯಲು ದೂರುದಾರರು ಭರಿಸಿದ್ದ ಅರ್ಜಿ ಶುಲ್ಕ ₹ 370ನ್ನು ಹಿಂದಿರುಗಿಸಬೇಕು. ದೂರುದಾರರು ಹಾಗೂ ಅವರ ಕಕ್ಷಿದಾರರಿಗೆ ಆದ ಮಾನಸಿಕ ಹಿಂಸೆ ಮತ್ತು ಅನನುಕೂಲಕ್ಕೆ ಪರಿಹಾರವಾಗಿ ₹50 ಸಾವಿರ ಮತ್ತು ಪ್ರಕರಣದ ವೆಚ್ಚವಾಗಿ ₹ 10 ಸಾವಿರ ನೀಡಬೇಕು’ ಎಂದು ಆದೇಶಿಸಿದ್ದಾರೆ.

‘ವಕೀಲರಿಗೇ ತಪ್ಪು ದಾಖಲೆಗಳನ್ನು ನೀಡಿದರೆ, ಉ‍ಪನೋಂದಣಾಧಿಕಾರಿ ಕಚೇರಿಗೆ ಬರುವ ರೈತರು, ಅನಕ್ಷರಸ್ಥರ ಪರಿಸ್ಥಿತಿ ಏನು’ ಎಂದೂ ಆಯೋಗ ಆತಂಕ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.