ADVERTISEMENT

ಧಾರವಾಡ | ಬೇಸಿಗೆ ಶಿಬಿರ: ಕಲಾ ಜಗತ್ತಿನಲ್ಲಿ ಮಕ್ಕಳ ಯಾನ

ಬಿ.ಜೆ.ಧನ್ಯಪ್ರಸಾದ್
Published 27 ಏಪ್ರಿಲ್ 2025, 6:37 IST
Last Updated 27 ಏಪ್ರಿಲ್ 2025, 6:37 IST
ಧಾರವಾಡದ ರಂಗಾಯಣದಲ್ಲಿ ಆಯೋಜಿಸಿರುವ ಚಿಣ್ಣರ ಮೇಳದಲ್ಲಿ ಮಂಗಳವಾರ ಮಕ್ಕಳು ಪೇಪರ್‌ ಕಟ್ಟಿಂಗ್‌ ಚಟುವಟಿಕೆಯಲ್ಲಿ ತೊಡಗಿದ್ದರು ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ
ಧಾರವಾಡದ ರಂಗಾಯಣದಲ್ಲಿ ಆಯೋಜಿಸಿರುವ ಚಿಣ್ಣರ ಮೇಳದಲ್ಲಿ ಮಂಗಳವಾರ ಮಕ್ಕಳು ಪೇಪರ್‌ ಕಟ್ಟಿಂಗ್‌ ಚಟುವಟಿಕೆಯಲ್ಲಿ ತೊಡಗಿದ್ದರು ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ    

ಧಾರವಾಡ: ಧಾರವಾಡದ ರಂಗಾಯಣ, ಚಿಲಿಪಿಲಿ ಸಂಸ್ಥೆ ಅಲ್ಲದೇ ವಿವಿಧ ಸಂಘಸಂಸ್ಥೆಗಳು ಮಕ್ಕಳಿಗೆ ಚಿಣ್ಣರ ಮೇಳ, ಬೇಸಿಗೆ ಶಿಬಿರ ಆಯೋಜಿಸಿವೆ. ನಟನೆ, ಗಾಯನ, ಚಿತ್ರಕಲೆ ಮೊದಲಾದವನ್ನು ಮಕ್ಕಳಿಗೆ ಕಲಿಸಲಾಗುತ್ತಿದೆ.

ರಂಗಾಯಣವು ‘ನಮ್ಮ ಸಂವಿಧಾನ ನಮ್ಮ ಕಲರವ’ ಧ್ಯೇಯ ವಾಕ್ಯದಡಿ ಮೇಳ ಆಯೋಜಿಸಿದೆ. ಏ.10ರಂದು ಶುರುವಾಗಿದ್ದು ಮೇ 4ರವರೆಗೆ ನಡೆಯಲಿದೆ. 140 ಮಕ್ಕಳು ಪಾಲ್ಗೊಂಡಿದ್ದಾರೆ. ಚಿಲಿಪಿಲಿ ಸಂಸ್ಥೆಯು ಡಯೆಟ್‌ನ (ಎಲ್‌ಐಸಿ ಕಚೇರಿ ಸಮೀಪ) ಪ್ರಾಥಮಿಕ ಶಾಲೆ ಆವರಣದಲ್ಲಿ ಮೇಳ ಆಯೋಜಿಸಿದೆ. ಏ.2ರಂದು ಶುರುವಾಗಿದ್ದು ಮೇ 5 ರವರೆಗೆ ನಡೆಯಲಿದೆ. 75 ಮಕ್ಕಳು ಭಾಗವಹಿಸಿದ್ದಾರೆ. 33 ದಿನ ಮೇಳ ನಡೆಯಲಿದೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 4.30ರವರೆಗೆ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. 6 ವರ್ಷದಿಂದ 15 ವರ್ಷ ವಯಸ್ಸಿನವರು ಇದ್ದಾರೆ.

‘ಮಕ್ಕಳನ್ನು ಐದು ತಂಡ ಮಾಡಿ ಐದು ನಾಟಕಗಳನ್ನು ಕಲಿಸಲಾಗುತ್ತಿದೆ. ನೃತ್ಯ, ಕೋಲಾಟ, ಗಾಯನ, ಚಿತ್ರಕಲೆ ತರಬೇತಿ ನೀಡಲಾಗುತ್ತಿದೆ. ಮಕ್ಕಳ ಸಂತೆ, ತೇರು, ಓಕುಳಿ, ಕಿರುಚಿತ್ರ ಪ್ರದರ್ಶನ ಚಟುವಟಿಕೆಗಳು ಇವೆ’ ಎಂದು ರಂಗಾಯಣದ ಚಿಣ್ಣರ ಮೇಳದ ನಿರ್ದೇಶಕ ಲಕ್ಷ್ಮಣ ಪೀರಗಾರ ತಿಳಿಸಿದರು.

ADVERTISEMENT

ನಗರ ಮತ್ತು ಅಕ್ಕಪಕ್ಕದ ಊರುಗಳು (ಪುಡಕಲಕಟ್ಟಿ, ಹಾರೋಬೆಳವಡಿ...), ವಿವಿಧ ಶಾಲೆಗಳ ಮಕ್ಕಳು ಒಟ್ಟಾಗಿ ಕಲೆತು ಸಾಂಸ್ಕೃತಿಕ ಚಟುವಟಿಕೆಗಳ ಕಲಿಕೆ, ಪ್ರತಿಭೆ ಪ್ರದರ್ಶನದಲ್ಲಿ ತೊಡಗಿದ್ಧಾರೆ. ರಂಗ ಪರಿಣತರು, ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ಮಾರ್ಗದರ್ಶನ, ತರಬೇತಿ ನೀಡುತ್ತಿದ್ದಾರೆ.

‘ಮಕ್ಕಳು ಮೊಬೈಲ್‌, ಟಿ.ವಿ ಗೀಳು ಬಿಟ್ಟು ಆಟವಾಡುವ, ಸಾಂಸ್ಕೃತಿಕ ಕಲೆ ಕಲಿಯುವ ವಾತಾವರಣವನ್ನು ಮೇಳದಲ್ಲಿ ಕಲ್ಪಿಸಲಾಗಿದೆ’’ ಎಂದು ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ತಿಳಿಸಿದರು.

ಚಿಲಿಪಿಲಿ ಸಂಸ್ಥೆಯ ಚಿಣ್ಣರ ಮೇಳದಲ್ಲಿ ಮಕ್ಕಳಿಗೆ ‘ಕಂಸಾಯಣ’, ‘ಬೆಳಕು ಹಂಚಿದ ಬಾಲಕ’ ಹಾಗೂ ‘ಅಂಧೇರಿನಗರಿ ಚೌಪಟ್‌ ರಾಜ’ ನಾಟಕಗಳನ್ನು ಕಲಿಸಲಾಗುತ್ತಿದೆ. ಗಾಯನ ತರಬೇತಿ ನೀಡಲಾಗುತ್ತಿದೆ.

‘ಮೇಳವು ವೇದಿಕೆ ಭಯ (ಸ್ಟೇಜ್‌ ಫಿಯರ್‌) ದೂರವಾಗಿಸಿದೆ. ಪ್ರಶ್ನಿಸುವ ಮತ್ತು ಕೇಳಿ ತಿಳಿದುಕೊಳ್ಳುವ ಗುಣ ಮೈಗೂಡಿಸಿದೆ. ಸಮಯಪಾಲನೆ, ಶಿಸ್ತು ಮೈಗೂಡಿಸಿದೆ’ ಎಂದು ವಿದ್ಯಾರ್ಥಿನಿ ಸುಪ್ರಿಯಾ ತಿಳಿಸಿದರು

ಧಾರವಾಡ ಡಯೆಟ್‌ ಆವರಣದ ಶಾಲಾ ಕೊಠಡಿಯಲ್ಲಿ ಮಂಗಳವಾರ ನಾಟಕ ಅಭ್ಯಾಸದಲ್ಲಿ ತೊಡಗಿದ್ದರು ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ

‘ಮೇಳದಲ್ಲಿ ಮಕ್ಕಳಿಗೆ ಕನ್ನಡ ಸ್ಪಷ್ಟ ಉಚ್ಚಾರಣೆ ಮತ್ತು, ಬರೆವಣಿಗೆ, ಅಭಿನಯ, ಕವನ–ವಚನ ಗಾಯನ ಮೊದಲಾದವುಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಮಕ್ಕಳು ಉತ್ಸಾಹದಿಂದ ಕಲಿಕೆಯಲ್ಲಿ ತೊಡಗಿದ್ಧಾರೆ’ ಎಂದು ಚಿಲಿಪಿಲಿ ಸಂಸ್ಥೆಯ ಚಿಣ್ಣರ ಮೇಳದ ನಿರ್ವಾಹಕ ಸಿಕಂದರ್‌ ತಿಳಿಸಿದರು.

‘ಬೇಸಿಗೆ ರಜೆಯಲ್ಲೂ ಮಕ್ಕಳನ್ನು ಪಠ್ಯ ಚಟುವಟಿಕೆಗಳಲ್ಲಿ ತೊಡಗಿಸುತ್ತಾರೆ. ಪೋಷಕರು  ಟ್ಯೂಷನ್‌, ಕೋಚಿಂಗ್ ತರಗತಿಗಳಿಗೆ ದಾಖಲು ಮಾಡುತ್ತಾರೆ. ಬೇಸಿಗೆಯಲ್ಲೂ ಮಕ್ಕಳು ತರಗತಿ ಪಾಠ ಕೇಳುವಂತೆ ಮಾಡು‌ತ್ತಾರೆ. ಚಿಣ್ಣರ ಮೇಳಗಳಿಗೆ ಮಕ್ಕಳನ್ನು ಸೇರಿಸಬೇಕು.ಮಕ್ಕಳು ಖುಷಿಯಿಂದ ರಜೆ ಕಳೆಯಬೇಕು. ಹಿಂದನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಚಿಣ್ಳರ ಮೇಳಗಳಲ್ಲಿ ಭಾಗವಹಿಸಿರುವ ಮಕ್ಕಳ ಸಂಖ್ಯೆ ಕಡಿಮೆ ಇದೆ’ ಎಂದು ಚಿಲಿಪಿಲಿ ಸಂಸ್ಥೆಯ ಶಂಕರ ಹಲಗತ್ತಿ ತಿಳಿಸಿದರು.

ಧಾರವಾಡ ಡಯೆಟ್‌ ಆವರಣದಲ್ಲಿ ಚಿಣ್ಣರ ಮೇಳದಲ್ಲಿ ಮಂಗಳವಾರ ಮಕ್ಕಳು ಹಗ್ಗ ಜಗ್ಗಾಟದಲ್ಲಿ ತೊಡಗಿದ್ದರು ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ

ಕೆಲ ಸಂಸ್ಥೆಗಳು ಕ್ರೀಡಾ ತರಬೇತಿ ಬೇಸಿಗೆ ಶಿಬಿರಗಳನ್ನು ಆಯೋಜಿಸಿವೆ. ಬೇಸಿಗೆ ರಜೆಯಲ್ಲಿ ಮಕ್ಕಳು ಆಟ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.