
ಅಳ್ನಾವರ: ಸಂತೋಷ್ ಲಾಡ್ ಪೌಂಡೇಶನ್ ಪ್ರಾಯೋಜಿಸಿದ ಅಳ್ನಾವರ ಪ್ರಿಮಿಯರ್ ಲೀಗ್ ಕ್ರಿಕೆಟ್ ಸಿಸನ್ 5ರ ಅಂತಿಮ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಖಾನ್ ಕ್ರಿಕೆಟ್ ಕ್ಲಬ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದ ಸನ್ ಸ್ಫೋರ್ಟ್ಸ್ ಕ್ರಿಕೆಟ್ ತಂಡ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡು ಪ್ರಥಮ ಬಾರಿ ವಿಜೇಯದ ನಗೆ ಬೀರಿತು.
ಇಲ್ಲಿನ ತಾಲ್ಲೂಕು ಮಟ್ಟದ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ನಿಗದಿತ 10 ಓವರಗಳಲ್ಲಿ ಮೊದಲು
ಬ್ಯಾಟ್ ಮಾಡಿದ ಖಾನ್ ಕ್ರಿಕೆಟ್ ತಂಡ ನಾಯಕ ಅಬ್ದುಲ್‍ಬಾರಿ ತೇಗೂರ ಅವರ 35 ರನ್ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 64 ರನ್ ಕಲೆ ಹಾಕಿತು.
ನಿಗದಿತ ಗುರಿ ಬೆನಟ್ಟಿದ ಸನ್ ಸ್ಫೋರ್ಟ್ಸ್ ತಂಡದ ಆಟಗಾರರು ಇನ್ನೂ 7 ಚೆಂಡು ಬಾಕಿ ಇರುವಂತೆ ಮೂರು ವಿಕೆಟ್ ಕಳೆದುಕೊಂಡು 65 ರನ್ ಬಾರಿಸಿ ವಿಜೇಯದ ನಗೆ ಬೀರಿದರು.
ಪ್ರಶಸ್ತಿ: ಪ್ರಥಮ ಸ್ಥಾನ ಪಡೆದ ಸನ್ ಸ್ಫೋರ್ಟ್ಸ್ ತಂಡಕ್ಕೆ ₹70 ಸಾವಿರದ ಚೆಕ್ ಹಾಗೂ ಟ್ರೋಪಿಯನ್ನು ಸಚಿವ ಸಂತೋಷ್ ಲಾಡ್ ಅವರ ಆಪ್ತ ಕಾರ್ಯದರ್ಶಿ ಶ್ರೀಕಾಂತ ಗಾಯಕವಾಡ ವಿತರಿಸಿದರು. ರನರ್ಸ್ ಆಪ್ ಪಡೆದ ತಂಡಕ್ಕೆ ₹50 ಸಾವಿರ ಚೆಕ್ ಹಾಗೂ ಟ್ರೋಪಿ ನೀಡಲಾಯಿತು.
3 ನೇ ಸ್ಥಾನ ಪಡೆದ ಯೂಥ್ ಬ್ರದರ್ಸ್ ತಂಡದ ನಾಯಕ ವಿವೇಕ ಪಾಟೀಲ, 4ನೇ ಸ್ಥಾನ ಪಡೆದ ಜೈ ಹನುಮಾನ್ ತಂಡದ ನಾಯಕ ಸಾಗರ ಮಿಂಡೋಳ್ಕರ ಅವರಿಗೆ ಸಮಾಧಾನಕರ ಬಹುಮಾನ ಹಾಗೂ ಟ್ರೋಫಿ ನೀಡಲಾಯಿತು. ಒಟ್ಟು ಎಂಟು ತಂಡಗಳು ಸತತ 9 ದಿನಗಳ ಕಾಲ ಪ್ರಶಸ್ತಿಗೆ ಸೆಣಿಸಿದವು. ಅಂತಿಮ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಸನ್ ಸ್ಫೋರ್ಟ್ಸ್ ತಂಡದ ಅರುಣ ಪಾಟೀಲ ಪಡೆದರು.