ಹುಬ್ಬಳ್ಳಿ: : ‘ನಕ್ಸಲರ ಶರಣಾಗತಿಗೆ ನನ್ನ ವಿರೋಧವಿಲ್ಲ. ಆದರೆ, ರಾಜ್ಯದಲ್ಲಿ ನಕ್ಸಲರ ಶರಣಾಗತಿ ತರಾತುರಿಯಿಂದ ನಡೆಯಿತು ಎಂಬ ಭಾವನೆ ಹಲವರಲ್ಲಿದ್ದು, ಪ್ರಶ್ನೆಗಳಿಗೆ ಹುಟ್ಟುಹಾಕಿದೆ. ಶರಣಾದ ನಕ್ಸಲರು ಎಷ್ಟು ಶಸ್ತ್ರಾಸ್ತ್ರ ಒಪ್ಪಿಸಿದ್ದಾರೆ ಎಂಬ ಮಾಹಿತಿಯನ್ನು ಜನರಿಗೆ ಮುಖ್ಯಮಂತ್ರಿ ನೀಡಲಿ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
‘ನಕ್ಸಲರ ಹೋರಾಟದ ಹಿಂದೆ ವಿದೇಶಿಯರ ಕೈವಾಡವಿದ್ದು, ಹಣ ಕೂಡ ಸಂದಾಯ ಆಗುತ್ತಿದೆ. ಇದರಲ್ಲಿ ನಮ್ಮ ರಾಜ್ಯದ ಕೆಲ ಯುವಕರು ಸಿಲುಕಿದ್ದಾರೆ. ಅವರು ವಾಪಸ್ ಬರಲು ಬಯಸಿದರೆ, ನೀಡಲಾಗುವ ಪುನರ್‌ವಸತಿ ಪ್ಯಾಕೇಜ್ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
‘ಶರಣಾದ ನಕ್ಸಲರಿಗೆ ನೀಡಲಾಗುವ ಪುನರ್‌ವಸತಿ ಪ್ಯಾಕೇಜ್ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ ಬೇರೆ ಬೇರೆ ರಾಜ್ಯಗಳಲ್ಲಿ ನಕ್ಸಲರು ಶರಣಾಗಲು ಸಾಕಷ್ಟು ಕಾಲಾವಕಾಶ ಪಡೆಯುತ್ತಾರೆ. ಹಲವು ಸುತ್ತಿನ ಮಾತುಕತೆ ನಡೆಯುತ್ತವೆ. ಆದರೆ, ಇಲ್ಲಿ ಮುಖ್ಯಮಂತ್ರಿ ಅವರು ಶರಣಾಗುವಂತೆ ಪ್ರಕಟಿಸಿದ ಒಂದು ವಾರದಲ್ಲಿ ನಕ್ಸಲರು ಬಂದು ಶರಣಾಗಿ, ಎಲ್ಲವೂ ಮುಗಿಯುತ್ತದೆ ಎಂದರೆ ಸಂಶಯ ಮೂಡುತ್ತದೆ’ ಎಂದರು.
‘ನಕ್ಸಲ್ ಚಳವಳಿಯನ್ನು ಬೇರು ಸಮೇತ ಹೊಸಕಿ ಹಾಕಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಇಂತಹ ಸಂದರ್ಭದಲ್ಲಿ ಯಾವುದೇ ಮಧ್ಯವರ್ತಿಗಳಿಲ್ಲದೇ, ಕೆಲವೇ ದಿನಗಳಲ್ಲಿ ಆರು ನಕ್ಸಲರು ಶರಣಾಗುತ್ತಾರೆಂದರೆ ಹೇಗೆ? ಶಸ್ತ್ರಾಸ್ತ್ರ ಕೂಡ ಒಪ್ಪಿಸದಿದ್ದರೆ ಹೇಗೆ’ ಎಂದು ಅವರು ಪ್ರಶ್ನಿಸಿದರು.
‘ಬೇರೆ ಬೇರೆ ಭಾಗಗಳಲ್ಲಿ ಶರಣಾಗತಿ ಆದ ನಕ್ಸಲರು ತಮ್ಮ ಬಳಿ ಇದ್ದ ಶಸ್ತಾಸ್ತ್ರಗಳನ್ನು ಒಪ್ಪಿಸಿದ್ದಾರೆ. ನಕ್ಸಲರ ಪ್ಯಾಕೇಜ್ ವ್ಯವಸ್ಥೆ ಎಲ್ಲಾ ಸರ್ಕಾರದಲ್ಲಿದೆ. ನಕ್ಸಲ್ ಪ್ಯಾಕೇಜ್ ಇತರೇ ನಕ್ಸಲರಿಗೆ ಸಲುಗೆಯಾಗದಿರಲಿ. ಆರು ನಕ್ಸಲರು ಶರಾಣಾರೆ, ರಾಜ್ಯದಲ್ಲಿ ನಕ್ಸಲ್ ಚಳವಳಿ ಮುಗಿಯಿತು ಎಂಬಂತೆ ಬಿಂಬಿಸಲಾಗುತ್ತದೆ. ನಕ್ಸಲ್ ನಿಗ್ರಹ ಪಡೆ ತಂಡದ ಕಾರ್ಯಾಚರಣೆ ಸ್ಥಗಿತಗೊಳ್ಳಲಿದೆ ಎನ್ನುವುದು ಎಷ್ಟರಮಟ್ಟಿಗೆ ಸರಿ’ ಎಂದರು.
ನಕ್ಸಲರು ಶಸ್ತ್ರಾಸ್ತಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಬಂದರೆ ಅವರನ್ನು ಸ್ವೀಕರಿಸುವುದು ತಪ್ಪಲ್ಲ. ಸರ್ಕಾರವೇ ನಕ್ಸಲರಿಗೆ ಶರಣಾದಂತಹ ನೀತಿಯಿಂದಇನ್ನುಮುಂದೆ ನಕ್ಸಲರು ಹೆಚ್ಚಾಗುವ ಆತಂಕವೂ ಕಾಡುತ್ತಿದೆ.ಕೋಟ ಶ್ರೀನಿವಾಸ ಪೂಜಾರಿ, ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.