ADVERTISEMENT

ಎಲೆಕ್ಟ್ರಿಕ್‌ ಚಾರ್ಜಿಂಗ್‌ ಸ್ಟೇಷನ್‌ಗಳಿಗಾಗಿ ಸಮೀಕ್ಷೆ

ಪರಿಸರ ಸ್ನೇಹಿ ವಾಹನಗಳಿಗೆ ಉತ್ತೇಜನ ನೀಡುವ ಉದ್ದೇಶ; ಅವಳಿ ನಗರಕ್ಕೆ 50 ಎಲೆಕ್ಟ್ರಿಕ್‌ ಬಸ್‌

ಬಸವರಾಜ ಹವಾಲ್ದಾರ
Published 26 ಜನವರಿ 2021, 2:43 IST
Last Updated 26 ಜನವರಿ 2021, 2:43 IST

ಹುಬ್ಬಳ್ಳಿ: ಪರಿಸರ ಸ್ನೇಹಿ ವಿದ್ಯುತ್ ಚಾಲಿತ (ಎಲೆಕ್ಟ್ರಿಕ್‌) ವಾಹನಗಳ ಬಳಕೆಗೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ರಾಷ್ಟ್ರೀಯ ಹೆದ್ದಾರಿ 4ರಲ್ಲಿ (ಪುಣೆ–ಬೆಂಗಳೂರು) ಚಾರ್ಜಿಂಗ್ ಸ್ಟೇಷನ್‌ಗಳ ಆರಂಭಕ್ಕೆ ಯೋಜಿಸಿದೆ. ಆ ನಿಟ್ಟಿನಲ್ಲಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸಾರಿಗೆ ಇಲಾಖೆಗೆ ಸೂಚಿಸಿದ್ದು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವರದಿ ಸಿದ್ಧಪಡಿಸುತ್ತಿದ್ದಾರೆ.

ಕೇಂದ್ರ ಸರ್ಕಾರ 350 ಎಲೆಕ್ಟ್ರಿಕಲ್ ಬಸ್ ಖರೀದಿಗೆ ಅನುಮೋದಿಸಿ, ಪ್ರತಿ ಬಸ್‌ಗೆ ₹55 ಲಕ್ಷ ಸಬ್ಸಿಡಿ ನೀಡಿದೆ. ಬೆಂಗಳೂರಿಗೆ 300 ಹಾಗೂ ಹುಬ್ಬಳ್ಳಿ–ಧಾರವಾಡ ನಗರಕ್ಕೆ 50 ಎಲೆಕ್ಟ್ರಿಕಲ್ ಬಸ್ ನೀಡಲಾಗುವುದು’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿರುವುದು ಮುಂದಿನ ದಿನಗಳಲ್ಲಿ ಪರಿಸರ ಸ್ನೇಹಿ ವಾಹನಗಳ ಬಳಕೆ ಹೆಚ್ಚಾಗಲಿದೆ ಎಂಬುದನ್ನು ತೋರಿಸುತ್ತದೆ.

ಪೆಟ್ರೋಲ್ ಹಾಗೂ ಡೀಸೆಲ್ ಬಳಕೆಯ ಬಸ್‌, ಕಾರು, ಜೀಪ್ ಮತ್ತಿತರ ವಾಹನಗಳ ಬಳಕೆಯಿಂದ ಪರಿಸರ ಹಾಗೂ ಶಬ್ದ ಮಾಲಿನ್ಯವಾಗುತ್ತಿದೆ. ಜತೆಗೆ ಪೆಟ್ರೋಲ್, ಡೀಸೆಲ್‌ಗಳನ್ನು ಆಮದು ಮಾಡಿಕೊಳ್ಳಬೇಕಾಗಿದೆ. ಅವುಗಳ ಬಳಕೆ ಕಡಿಮೆ ಮಾಡುವುದು ಇಂದಿನ ಅತ್ಯಗತ್ಯ. ಪರ್ಯಾಯವಾಗಿ ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ಉತ್ತೇಜನ ನೀಡಲು ಉದ್ದೇಶಿಸಲಾಗಿದೆ.

ADVERTISEMENT

ಎಲೆಕ್ಟ್ರಿಕ್‌ ವಾಹನಗಳ ಬಳಕೆ ಆರಂಭಿಸಿದರೆ, ವಾಹನಗಳ ಚಾರ್ಜಿಂಗ್‌ ಸ್ಟೇಷನ್‌ಗಳು ಅಗತ್ಯ. ದೂರದ ಊರುಗಳಿಗೆ ತೆರಳುವ ಮಾರ್ಗದಲ್ಲಿ ಅದರಲ್ಲೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂತಹ ಸ್ಟೇಷನ್‌ಗಳನ್ನು ಆರಂಭಿಸಿದರೆ ಬಳಕೆದಾರರ ಸಂಖ್ಯೆ ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ನಿಪ್ಪಾಣಿವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಷ್ಟು ಸ್ಟೇಷನ್ ಮಾಡಬಹುದು? ಆ ಮಾರ್ಗದಲ್ಲಿ ಎಷ್ಟು ಪೆಟ್ರೋಲ್‌ ಬಂಕಗಳಿವೆ? ಅಲ್ಲಿ ಚಾರ್ಜಿಂಗ್‌ ಸ್ಟೇಷನ್‌ ಮಾಡಬಹುದಾ ಎಂಬ ವರದಿ ಕೇಳಲಾಗಿದೆ.

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಈಗಾಗಲೇ ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಹುಬ್ಬಳ್ಳಿಯಲ್ಲಿ ಏಳು ಹಾಗೂ ಧಾರವಾಡದಲ್ಲಿ ಆರು ಚಾರ್ಜಿಂಗ್‌ ಸ್ಟೇಷನ್‌ ಆರಂಭಿಸಬಹುದೆಂಬ ವರದಿ ನೀಡಲಾಗಿದೆ. ಆದರೆ, ಈ ಸ್ಟೇಷನ್‌ಗಳನ್ನು ಸರ್ಕಾರವೇ ಮಾಡಲಿದೆಯಾ? ಅಥವಾ ಬಂಕ್‌ಗಳ ಮಾಲೀಕರಿಗೆ ನೀಡಬೇಕು ಎಂದು ಸರ್ಕಾರದ ಹಂತದಲ್ಲಿ ನಿರ್ಧಾರವಾಗಬೇಕಿದೆ ಎನ್ನುತ್ತಾರೆ ಸಾರಿಗೆ ಇಲಾಖೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.