ADVERTISEMENT

ಸುವರ್ಣಕಾರರ ಸಮಸ್ಯೆ ಪರಿಹರಿಸಿ: ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ

ವಿಶ್ವಕರ್ಮ ಸುವರ್ಣಕಾರರ ಸಂಘ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2023, 4:22 IST
Last Updated 22 ಡಿಸೆಂಬರ್ 2023, 4:22 IST
ಹಳೇ ಹುಬ್ಬಳ್ಳಿಯ ಕಾಳಿಕಾದೇವಿ ದೇವಸ್ಥಾನದ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವಕರ್ಮ ಸುವರ್ಣಕಾರರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಕಟಪಾಡಿಯ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿದರು
ಹಳೇ ಹುಬ್ಬಳ್ಳಿಯ ಕಾಳಿಕಾದೇವಿ ದೇವಸ್ಥಾನದ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವಕರ್ಮ ಸುವರ್ಣಕಾರರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಕಟಪಾಡಿಯ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿದರು   

ಪ್ರಜಾವಾಣಿ ವಾರ್ತೆ

ಹುಬ್ಬಳ್ಳಿ: ‘ಸುವರ್ಣಕಾರರು ವೃತ್ತಿಯಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳನ್ನು ಪರಿಹರಿಸುವ ಕೆಲಸವಾಗಬೇಕು’ ಎಂದು ಉಡುಪಿ ಜಿಲ್ಲೆಯ ಕಟಪಾಡಿಯ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ಹಳೇ ಹುಬ್ಬಳ್ಳಿಯ ಕಾಳಿಕಾದೇವಿ ದೇವಸ್ಥಾನದ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವಕರ್ಮ ಸುವರ್ಣಕಾರರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಸುವರ್ಣಕಾರ ವೃತ್ತಿಯವರು ಕಾನೂನು ಅರಿವು ಹೊಂದಬೇಕು. ಯಾರೇ ತಪ್ಪು ಮಾಡಿದರೂ ವೃತ್ತಿಬಾಂಧವರನ್ನು ದೂಷಿಸುವ ಕೆಲಸವಾಗುತ್ತಿದೆ. ಅದು ನಿಲ್ಲಬೇಕು. ತೊಂದರೆಗೆ ಸಿಲುಕಿದ ವೃತ್ತಿನಿರತರ ನೆರವಿಗೆ ನಿಲ್ಲುವ ಕೆಲಸವಾಗಬೇಕು. ಶಾಸ್ತ್ರೀಯವಾಗಿ ವೃತ್ತಿ ಮುಂದುವರಿಸಿಕೊಂಡು ಹೋಗಬೇಕು’  ಎಂದರು.

‘ವೃತ್ತಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಜತೆಗೆ ವ್ಯಾವಹಾರಿಕ ಜ್ಞಾನ ಬೆಳೆಸಿಕೊಳ್ಳಬೇಕು. ಉಳಿತಾಯಕ್ಕೆ ಹೆಚ್ಚು ಒತ್ತು ನೀಡಬೇಕು. ಯುವ ಪೀಳಿಗೆಗೆ ವೃತ್ತಿಯನ್ನು ಕಲಿಸುವ ನಿಟ್ಟಿನಲ್ಲಿ ಕಾರ್ಯಾಗಾರಗಳನ್ನು ಏರ್ಪಡಿಸಬೇಕು’ ಎಂದು ಸಲಹೆ ನೀಡಿದರು.

ಮಹಾನಗರ ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಮಾತನಾಡಿ, ‘ವಿಶ್ವಕರ್ಮ ಸಮಾಜದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಿ.ಎಂ.ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದಿದ್ದು, ಇದಕ್ಕೆ ನೋಂದಣಿ ಮಾಡಿಕೊಂಡು ಯೋಜನೆಯ ಲಾಭ ಪಡೆದುಕೊಳ್ಳಬೇಕು. ಸಮಾಜದ ಅಭಿವೃದ್ಧಿಗೆ ಅಗತ್ಯ ನೆರವು ನೀಡಲಾಗುವುದು’ ಎಂದರು.

ಪಡಿಕತ್ಯಾರಿನ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಆಸ್ಥಾನ ವಿದ್ವಾಂಸ ಶಂಕರಾಚಾರ್ಯ ಗುರುನಾಥಾಚಾರ್ಯ ಕಡ್ಲಾಸ್ಕರ್, ವಿಶ್ವ ಬ್ರಾಹ್ಮಣ ಪ್ರತಿಷ್ಠಾನದ ಅಧ್ಯಕ್ಷ ಅಶೋಕ ಜತ್ತಿ, ಮಹಾನಗರ ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ ಮಾತನಾಡಿದರು.

ವಿಶ್ವಕರ್ಮ ಸುವರ್ಣಕಾರರ ಸಂಘದ ಅಧ್ಯಕ್ಷ ವಿಜಯಕುಮಾರ ಎಲ್‌.ಧೋತ್ರಗಾವಿ, ಮಹಾನಗರ ಪಾಲಿಕೆ ಸದಸ್ಯೆ ಸುಮಿತ್ರಾ ಗುಂಜಾಳ, ದೈವಜ್ಞ ಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷ ವಿವೇಕ ಅಣವೇಕರ, ಪರಶುರಾಮ ಚಿಲ್ಲಾಳ, ಡಾ.ವೈ.ರವೀಂದ್ರ ಆಚಾರ್ಯ ಇದ್ದರು.
ನಾರಾಯಣ ಬಡಿಗೇರ ಸ್ವಾಗತಿಸಿದರು. ಶ್ರೀಕಾಂತ ಧೋತ್ರಗಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಕಾರ್ಯಕ್ರಮಕ್ಕೂ ಮುನ್ನ ಗುರುಪಾದ ಪೂಜೆ ಕಾರ್ಯಕ್ರಮ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.