ADVERTISEMENT

ಜ.13, 14ಕ್ಕೆ ಕೂಡಲಸಂಗಮದಲ್ಲಿ ಶರಣರ ಮೇಳ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 7:32 IST
Last Updated 8 ಜನವರಿ 2026, 7:32 IST
ಚನ್ನಬಸವಾನಂದ ಸ್ವಾಮೀಜಿ
ಚನ್ನಬಸವಾನಂದ ಸ್ವಾಮೀಜಿ   

ಹುಬ್ಬಳ್ಳಿ: ‘ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲ ಸಂಗಮದಲ್ಲಿ ಜನವರಿ 13 ಮತ್ತು 14 ರಂದು 4ನೇ ಸ್ವಾಭಿಮಾನಿ ಶರಣಮೇಳ ನಡೆಯಲಿದ್ದು, ಸಂಸದ ಪಿ.ಸಿ.ಗದ್ದಿಗೌಡರ ಉದ್ಘಾಟಿಸುವರು’ ಎಂದು ಸ್ವಾಭಿಮಾನಿ ಶರಣಮೇಳ ಉತ್ಸವ ಸಮಿತಿ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮ್ಮೇಳನದಲ್ಲಿ 2026ರ ದಿನದರ್ಶಿಕೆಯನ್ನು ಹುನಗುಂದ ಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡರ ಪಾಟೀಲ ಬಿಡುಗಡೆ ಮಾಡಲಿದ್ದಾರೆ. ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಶೈಲೇಂದ್ರ ಬೆಲ್ದಾಳೆ ಅವರು ಷಟಸ್ಥಲ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮಹಾರಾಷ್ಟ್ರದ ಲಿಂಗಾಯತ ಸಮಾಜದ ಮುಖಂಡ ಮಿಲಿಂದ್ ಸಾಕರ್ಪೆ ಪಾಕೆಟ್‌ ಕ್ಯಾಲೆಂಡರ್‌ ಹಾಗೂ ಬೀದರ್ ವಿ.ವಿ.ಸಿಂಡಿಕೇಟ್ ಸದಸ್ಯ ನಾಗಭೂಷಣ ಕಮಠಾಣೆ ಲಿಂಗಾಯತ ಧರ್ಮ ಸಾರ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ’ ಎಂದರು.

‘ಚನ್ನಬಸವಾನಂದ ಸ್ವಾಮೀಜಿ ಮೇಳದ ಸಾನ್ನಿಧ್ಯ ವಹಿಸುವರು. ಮಾತೆ ಸತ್ಯಾದೇವಿ, ಜಯಬಸವಾನಂದ ಸ್ವಾಮೀಜಿ ಸೇರಿದಂತೆ ನಾಡಿನ ಹಲವು ಸವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ. ಮೊದಲ ದಿನ ಸಂಜೆ 6ಕ್ಕೆ ಅನುಭಾವಗೋಷ್ಠಿಯ ಉದ್ಘಾಟನೆ ಬೀದರ್ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ ನೆರವೇರಿಸಲಿದ್ದು, ಶಾಸಕ ವಿಜಯಾನಂದ ಕಾಶಪ್ಪನವರ್ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದರು.

ADVERTISEMENT

‘ಜ. 14 ರಂದು ಬೆಳಿಗ್ಗೆ 10ಕ್ಕೆ ಲಿಂಗಾಯತ ಧರ್ಮ ಸಂಸ್ಥಾಪನಾ ದಿನಾಚರಣೆ ಜರುಗಲಿದ್ದು, ಪೂಜ್ಯರಿಂದ ಉದ್ಘಾಟನೆ ನೆರವೇರಲಿದೆ. ಸಮುದಾಯ ಪ್ರಾರ್ಥನೆ, ಸಾಮೂಹಿಕ ಇಷ್ಟಲಿಂಗ ಪೂಜೆ, ವಚನ ಪಠಣ, ಶರಣ ವೃತಧಾರಿಗಳಿಗೆ ಆಶೀರ್ವಾದ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಇತರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಶರಣರು ಪಾಲ್ಗೊಳ್ಳಲಿದ್ದಾರೆ. ಭಕ್ತರಿಗೆ ವಸತಿ, ಪ್ರಸಾದ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

ವೈ.ಎಸ್.ನಂದೆಣ್ಣವರ, ಫಕೀರಪ್ಪ ಬೇವಿನಮರದ, ಸಿ.ಎನ್.ಕೂಸಪ್ಪನವರ, ಅಶೋಕ ಶೀಲವಂತರ, ಸುರೇಖಾ ಶೀಲವಂತರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.