ADVERTISEMENT

ಪ್ರಾಣಿಬಲಿ ತಡೆ ಕ್ರಮಕ್ಕೆ ಸ್ವಾಮೀಜಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2022, 8:56 IST
Last Updated 25 ಅಕ್ಟೋಬರ್ 2022, 8:56 IST

ಹುಬ್ಬಳ್ಳಿ: 'ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ತಬಕದ ಹೊನ್ನಳ್ಳಿಯ ಹೊಳೆಯಮ್ಮದೇವಿ ಜಾತ್ರೆ ಇದೇ 28ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ನಡೆಯಲಿರುವ ಪ್ರಾಣಿ ಬಲಿ ತಡೆಯಲು ಸರ್ಕಾರ ಮುಂದಾಗಬೇಕು' ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಆಗ್ರಹಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಹೈಕೋರ್ಟ್ ಆದೇಶದನ್ವಯ ಯಾವುದೇ ಕಾರಣಕ್ಕೂ ದೇವಸ್ಥಾನದ ಪರಿಸರದಲ್ಲಿ ಪ್ರಾಣಿಬಲಿ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಸಾಕ್ಷಿ ಸಮೇತ ಸರ್ಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ವಿರುದ್ಧ ಕೋರ್ಟ್'ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು' ಎಂದು ಎಚ್ಚರಿಸಿದರು.

'ಹೊಳೆಯಮ್ಮದೇವಿ ಜಾತ್ರೆಗೆ ಹಾವೇರಿ, ಉತ್ತರ ಕನ್ನಡ, ಧಾರವಾಡ ಜಿಲ್ಲೆಯಿಂದ ಬರುವ ಭಕ್ತರು, ಸಾವಿರಾರು ಪ್ರಾಣಿಗಳನ್ನು ಬಲಿ ನೀಡುತ್ತಾರೆ. ಈ ಮೌಢ್ಯಾಚರಣೆ ಕುರಿತು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ತಾಲ್ಲೂಕಾಡಳಿತಕ್ಕೆ ಮಾಹಿತಿ ಸಹ ನೀಡಲಾಗಿದೆ. ಆದರೂ, ಈವರೆಗೆ ಯಾವೊಬ್ಬ ಅಧಿಕಾರಿಯೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ' ಎಂದು ಆರೋಪಿಸಿದರು.

ADVERTISEMENT

'ಹಿಂದೂಗಳ ಸಂಘಟನೆ ಹಾಗೂ ಧರ್ಮದ ಕುರಿತು ವಿಶ್ವ ಹಿಂದೂ‌ ಪರಿಷತ್ ಕಾರ್ಯ ಮೆಚ್ಚುವಂತಹದ್ದು. ಆದರೆ, ಅದು ದೇವಸ್ಥಾನದ ಶುದ್ಧೀಕರಣದ ಬಗ್ಗೆ ಗಮನ ನೀಡುತ್ತಿಲ್ಲ. ದಿವ್ಯಾಲಯ, ಜ್ಞಾನಾಲಯ ಆಗಬೇಕಿದ್ದ ದೇವಸ್ಥಾನಗಳು ವಧಾಲಯಗಳಾಗಿ ಮಾರ್ಪಟ್ಟಿವೆ. ರಾಜ್ಯದಲ್ಲಿ ಒಂದು ವರ್ಷಕ್ಕೆ ಒಂದೂವರೆ ಕೋಟಿಗೂ ಹೆಚ್ಚು ಸಂಖ್ಯೆಯಲ್ಲಿ ಪ್ರಾಣಿ ಬಲಿ ನೀಡಲಾಗುತ್ತಿದೆ. ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಟ್ಟಿರುವ 30 ಸಾವಿರ ದೇವಾಲಯಗಳಲ್ಲಿ ಈ ಕೃತ್ಯ ನಡೆಯುತ್ತಿದೆ' ಎಂದು ಹೇಳಿದರು.

ಮಂಡಳಿಯ ಸಂಚಾಲಕಿ ಸುನಂದಾ ದೇವಿ, ಬೈರುಲಾಲ್ ಜೈನ್, ಭರತ್ ಭಂಡಾರಿ, ಭರತ್ ಸಂಗ್ವಿ, ಅಶೋಕ್ ಕಮಾರ, ಪ್ರವೀಣಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.