ADVERTISEMENT

ಅಂಕ ಗಳಿಸುವುದೇ ಜೀವನವಲ್ಲ, ಮಕ್ಕಳನ್ನು ಇತರರೊಂದಿಗೆ ಹೋಲಿಸಬಾರದು: ಸುಧಾಮೂರ್ತಿ

​ಪ್ರಜಾವಾಣಿ ವಾರ್ತೆ
Published 4 ಮೇ 2022, 11:29 IST
Last Updated 4 ಮೇ 2022, 11:29 IST
ಹುಬ್ಬಳ್ಳಿಯ ಸಪ್ನ ಬುಕ್ ಹೌಸ್‌ನಲ್ಲಿ ಮಂಗಳವಾರ ನಡೆದ ಸುಧಾಮೂರ್ತಿ ಅವರಿಂದ ಜೀವನ ಪಾಠ ಮತ್ತು ಹಸ್ತಾಕ್ಷರ ಕಾರ್ಯಕ್ರಮದಲ್ಲಿ, ಮಕ್ಕಳು ಸುಧಾಮೂರ್ತಿ ಅವರೊಂದಿಗೆ ಫೋಟೊ ತೆಗೆಸಿಕೊಂಡರು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಸಪ್ನ ಬುಕ್ ಹೌಸ್‌ನಲ್ಲಿ ಮಂಗಳವಾರ ನಡೆದ ಸುಧಾಮೂರ್ತಿ ಅವರಿಂದ ಜೀವನ ಪಾಠ ಮತ್ತು ಹಸ್ತಾಕ್ಷರ ಕಾರ್ಯಕ್ರಮದಲ್ಲಿ, ಮಕ್ಕಳು ಸುಧಾಮೂರ್ತಿ ಅವರೊಂದಿಗೆ ಫೋಟೊ ತೆಗೆಸಿಕೊಂಡರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಅಂಕ ಗಳಿಸುವುದೇ ಜೀವನವಲ್ಲ. ಪರೀಕ್ಷೆಯಲ್ಲಿ ಶೇ 40ರಷ್ಟು ಅಂಕ ಪಡೆದವರೂ ಜೀವನದಲ್ಲಿ ಶೇ 99ರಷ್ಟು ಯಶಸ್ಸು ಕಾಣುತ್ತಾರೆ. ಮಕ್ಕಳನ್ನು ಇತರರೊಂದಿಗೆ ಹೋಲಿಕೆ ಮಾಡಬಾರದು. ಅವರಿಗೆ ಜೀವನ ಪಾಠ ಕಲಿಸಬೇಕು’ ಎಂದು ಇನ್ಫೊಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಹೇಳಿದರು.

ನಗರದ ಸಪ್ನ ಬುಕ್ ಹೌಸ್‌ ಮಂಗಳವಾರ ಏರ್ಪಡಿಸಿದ್ದ ಸುಧಾಮೂರ್ತಿ ಅವರಿಂದ ಜೀವನ ಪಾಠ ಮತ್ತು ಹಸ್ತಾಕ್ಷರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಮಕ್ಕಳ ಮೇಲೆ ಪೋಷಕರು ಒತ್ತಡ ಹೇರಬಾರದು. ಉತ್ತಮ ಅಂಕ ಗಳಿಸಿದರಷ್ಟೇ ಒಳ್ಳೆಯ ಕೆಲಸ ಸಿಗುತ್ತದೆ ಎಂಬ ಭಾವನೆ ಸರಿಯಲ್ಲ. ಖುಷಿಗೂ ಹಣಕ್ಕೂ ಸಂಬಂಧವಿಲ್ಲ. ಆತ್ಮವಿಶ್ವಾಸ, ಶಿಸ್ತು, ಸಹಬಾಳ್ವೆ, ಹಿರಿಯರನ್ನು ಗೌರವಿಸುವುದು ಸಹ ಹೆಚ್ಚು ಅಂಕ ಗಳಿಸಿದಂತೆ’ ಎಂದರು.

‘ಮಕ್ಕಳು ಕೇಳಿದ್ದೆಲ್ಲವನ್ನೂ ಕೊಡಿಸಬಾರದು. ಹಣ ಗಳಿಸದ ವಯಸ್ಸಿನಲ್ಲಿ ಅದರ ಬೆಲೆಯೂ ತಿಳಿಯುವುದಿಲ್ಲ. ಇದು ಆರಂಭದಲ್ಲಿ ಔಷಧದಂತೆ ಕಹಿ ಎನಿಸಿದರೂ, ಮಕ್ಕಳ ಭವಿಷ್ಯಕ್ಕೆ ಸಿಹಿಯಾಗುತ್ತದೆ. ಸಾಮಾಜಿಕ ಜಾಲತಾಣಗಳಿಂದ ಹೊರಬಂದು, ಹೆಚ್ಚು ಪುಸ್ತಕಗಳನ್ನು ಓದಿ; ಮಕ್ಕಳಿಗೂ ಅದನ್ನೇ ಕಲಿಸಿ. ಮಕ್ಕಳನ್ನೇ ಆಸ್ತಿ ಎಂದು ತಿಳಿಯುವುದು, ಅವರ ಭವಿಷ್ಯವನ್ನು ನಾವೇ ರೂಪಿಸುತ್ತೇವೆ ಎಂಬ ಭಾವನೆ ಇರಲೇಬಾರದು’ ಎಂದು ಪೋಷಕರಿಗೆ ಸಲಹೆ ನೀಡಿದರು.

ADVERTISEMENT

‘ಮಕ್ಕಳಿಗೆ ಹಿರಿಯರ ಮಾತನ್ನು ಗೌರವಿಸಿ, ಪಾಲಿಸುವುದನ್ನು ಕಲಿಸಬೇಕು. ಅವರ ಅಭಿರುಚಿ, ಪರಿಣತಿ ಅರಿತು ಮುಂದಿನ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು. ಕೆಲಸದ ಒತ್ತಡ, ಮಕ್ಕಳನ್ನು ನೋಡಿಕೊಳ್ಳುವುದರ ನಡುವೆಯೂ ಮಹಿಳೆಯರು ಯಶಸ್ವಿಯಾಗಲು ಅವರನ್ನು ಅರ್ಥಮಾಡಿಕೊಳ್ಳುವ ಪುರುಷರೇ ಕಾರಣ’ ಎಂದು ಅಭಿಪ್ರಾಯಪಟ್ಟರು.

ಸಪ್ನ ಬುಕ್ ಹೌಸ್ ಶಾಖಾ ವ್ಯವಸ್ಥಾಪಕ ರಘು ಮಾಧವನ್ ಇದ್ದರು. ಮೇಘನಾ ರಘು ನಿರೂಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.