ADVERTISEMENT

ಧಾರವಾಡ | ಶಿಕ್ಷಕರು ಸಮಸ್ಯೆ ಸವಾಲಾಗಿ ಸ್ವೀಕರಿಸಿ: ಈಶ್ವರ ಉಳ್ಳಾಗಡ್ಡಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 8:11 IST
Last Updated 5 ಆಗಸ್ಟ್ 2025, 8:11 IST
ಧಾರವಾಡದ ಆಲೂರು ವೆಂಕಟರಾವ್ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ಈಶ್ವರ ಉಳ್ಳಾಗಡ್ಡಿ ಉದ್ಘಾಟಿಸಿದರು
ಧಾರವಾಡದ ಆಲೂರು ವೆಂಕಟರಾವ್ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ಈಶ್ವರ ಉಳ್ಳಾಗಡ್ಡಿ ಉದ್ಘಾಟಿಸಿದರು   

ಧಾರವಾಡ: ‘ಪ್ರಸ್ತುತ ಶಿಕ್ಷಣ ಕ್ಷೇತ್ರವು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಶಿಕ್ಷಕರು ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಪ್ರಗತಿ ಸಾಧಿಸಲು ಮುಂದಾಗಬೇಕು’ ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ಈಶ್ವರ ಉಳ್ಳಾಗಡ್ಡಿ ಹೇಳಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ನಗರದ ಆಲೂರು ವೆಂಕಟರಾವ್ ಭವನದಲ್ಲಿ ಈಚೆಗೆ ನಡೆದ ಧಾರವಾಡ ವಿಭಾಗ ಒಂಬತ್ತು ಜಿಲ್ಲೆಗಳ ಶೈಕ್ಷಣಿಕ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಬದಲಾಗುತ್ತಿರುವ ಇಂದಿನ ದಿನಗಳಲ್ಲಿ ಗುಣಮಟ್ಟದ ಶೈಕ್ಷಣಿಕ ಪ್ರಗತಿ ಸಾಧಿಸಲು ಶಿಕ್ಷಕರು ಇರುವ ಅನುಕೂಲತೆಗಳನ್ನು ಸದ್ಬಳಕೆ ಮಾಡಿಕೊಂಡು ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು’ ಎಂದರು.

ADVERTISEMENT

ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ, ‘ರಾಜ್ಯ ಸರ್ಕಾರ ಶಿಕ್ಷಕರ ಪರವಾಗಿಯೇ ಇದೆ. ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಸೌಲಭ್ಯ ನೀಡಿದ ಹೆಗ್ಗಳಿಕೆ ಸರ್ಕಾರಕ್ಕೆ ಇದೆ’ ಎಂದು ತಿಳಿಸಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಮಾತನಾಡಿ, ‘ವೃಂದ ಮತ್ತು ನೇಮಕಾತಿ ನಿಯಮಗಳ ಕುರಿತು ಉದ್ಭವಿಸಿದ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ಶೀಘ್ರ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಶಿಕ್ಷಕರ ಫೆಡರೇಶನ್ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ‘ಸರ್ಕಾರ ಶಿಕ್ಷಕರ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಬಗೆಹರಿಸಿ ಶಿಕ್ಷಕರು ನೆಮ್ಮದಿಯಿಂದ ಬೋಧನೆ ಮಾಡುವ ವಾತಾವರಣ ನಿರ್ಮಿಸಬೇಕು’ ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್, ನಿವೃತ್ತ ಸಹನಿರ್ದೇಶಕ ಮೋಹನ ಕುಮಾರ ಹಂಚಾಟೆ, ಆರ್.ಮಾರುತೇಶ, ವಿ.ಎಚ್.ಬಣವಿ, ಪರಿಮಳಾ ಕಾಮನಹಳ್ಳಿ, ಬಸವರಾಜ ಬಾಗೇನವರ, ಜಯಕುಮಾರ ಹೆಬ್ಬಳ್ಳಿ, ಯು.ಎಂ.ಹಿರೇಮಠ, ಎನ್.ಬಿ. ಗಾಂವಕರ, ಅರ್ಜುನ ಲಮಾಣಿ, ಬಿ.ಪಿ.ಶಿಡೇನೂರ, ಗಿರೀಶ ಪದಕಿ, ವಿ.ಎಚ್.ಚುಳಕಿ, ರಾಜಶೇಖರ ಹೊನ್ನಪ್ಪನವರ, ರಮೇಶ ಲಿಂಗದಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.