ADVERTISEMENT

ಜಗದೀಶ್ ಶೆಟ್ಟರ್‌ ಮನೆಮುಂದೆ ಗುತ್ತಿಗೆ ಪೌರಕಾರ್ಮಿಕರ ಪ್ರತಿಭಟನೆ

ಬೇಡಿಕೆಗಳ ಈಡೇರಿಕೆಗೆ ಗುತ್ತಿಗೆ ಪೌರಕಾರ್ಮಿಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 16:21 IST
Last Updated 9 ಅಕ್ಟೋಬರ್ 2020, 16:21 IST
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ಶುಕ್ರವಾರ ಸಚಿವ ಜಗದೀಶ ಶೆಟ್ಟರ್‌ ಜೊತೆ ಚರ್ಚಿಸಿದ ಪೌರ ಕಾರ್ಮಿಕರು ಹಾಗೂ ಮುಖಂಡರು
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ಶುಕ್ರವಾರ ಸಚಿವ ಜಗದೀಶ ಶೆಟ್ಟರ್‌ ಜೊತೆ ಚರ್ಚಿಸಿದ ಪೌರ ಕಾರ್ಮಿಕರು ಹಾಗೂ ಮುಖಂಡರು   

ಹುಬ್ಬಳ್ಳಿ: ಗುತ್ತಿಗೆ ಪೌರಕಾರ್ಮಿಕರಿಗೆ ನೇರ ವೇತನ ಪದ್ಧತಿ ಸೇರಿದಂತೆ ಇನ್ನಷ್ಟು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಮಹಾನಗರ ಪಾಲಿಕೆ ಪೌರ ಕಾರ್ಮಿಕರು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಮನೆ ಮುಂದೆ ಪ್ರತಿಭಟನೆ ನಡೆಸಿದರು.

ಹೊರಗುತ್ತಿಗೆ ಪೌರ ಕಾರ್ಮಿಕರಿಗೆ ನೇರವಾಗಿ ವೇತನ ಪಾವತಿಸಬೇಕು ಎಂದು ಸರ್ಕಾರ 2017ರಲ್ಲಿ ಆದೇಶ ನೀಡಿದರೂ ಕಾರ್ಯರೂಪಕ್ಕೆ ಬಂದಿಲ್ಲ. ಐಡಿಪಿ ಸಾಲಪ್ಪ ವರದಿ ಪ್ರಕಾರ 500 ಜನರಿಗೆ ಒಬ್ಬ ಪೌರ ಕಾರ್ಮಿಕನನ್ನು ನಿಗದಿ ಮಾಡಬೇಕು ಎಂದು ಹೇಳಿದೆ. ಆದರೆ, ಸರ್ಕಾರ 700 ಜನರಿಗೆ ಒಬ್ಬ ಪೌರ ಕಾರ್ಮಿಕನನ್ನು ನಿಯೋಜಿಸಿದೆ. ಇದನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಕಾಯಂ ಪೌರ ಕಾರ್ಮಿಕರಿಗೆ 320 ಮನೆಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದರೂ, ಕಾಮಗಾರಿ ಅರಂಭವಾಗಿಲ್ಲ. ನವನಗರದಲ್ಲಿ ಹಕ್ಕು ಪತ್ರಗಳನ್ನು ವಿತರಿಸಿದ್ದರೂ, ಫಲಾನುಭವಿಗಳ ಹೆಸರಿನಲ್ಲಿ ದಾಖಲೆಯಾಗಿಲ್ಲ ಎಂದು ದೂರಿದರು.

ADVERTISEMENT

ಶ್ರೀದೇವಿ ನಲ್ಲನಮ್ಮ ಸಮಾಜ ಕಲ್ಯಾಣ ಸೇವಾ ಸಂಘ ಪಂಚ ಸಮಿತಿ ಸದಸ್ಯರು ‘ನಮ್ಮ ಸಮಾಜದ ಗುತ್ತಿಗೆ ಪೌರ ಕಾರ್ಮಿಕರು ಅವಳಿ ನಗರಗಳ ಸ್ವಚ್ಛತೆಗೆ ದುಡಿಯುತ್ತಿದ್ದರೂ ಅವರ ಬದುಕಿಗೆ ಭದ್ರತೆ ಇಲ್ಲದಂತಾಗಿದೆ’ ಎಂದರು.

ಮನವಿ ಸ್ವೀಕರಿಸಿದ ಬಳಿಕ ಪ್ರತಿಕ್ರಿಯಿಸಿದ ಶೆಟ್ಟರ್‌ ‘ಪೌರ ಕಾರ್ಮಿಕರಿಗೆ ಹಿಂದೆಯೂ ಸಮಸ್ಯೆಯಾದಾಗ ಪರಿಹರಿಸಿದ್ದೇನೆ. ಈಗಲೂ ಅವರ ಜೊತೆ ಇರುತ್ತೇನೆ. ಅಧಿಕಾರಿಗಳ ಜೊತೆ ಚರ್ಚಿಸಿ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇನೆ’ ಎಂದು ಭರವಸೆ ನೀಡಿದರು.

ಸಂಘದ ಪ್ರಮುಖರಾದ ದುರಗಪ್ಪ ವೀರಾಪುರ, ಗಂಗಾಧರ ಎಚ್‌. ಟಗರಗುಂಟಿ, ನಿಂಗಪ್ಪ ಮೊರಬದ, ಬಿ.ಬಿ. ಕೆಂಪಣ್ಣವರ, ಗುರುನಾಥ ಉಳ್ಳಿಕಾಶಿ, ಗಣೇಶ ಟಗರಗುಂಟಿ, ಬಸಪ್ಪ ಮಾದರ, ಯಮನೂರ ಗುಡಿಯಾಳ, ವೆಂಕಟೇಶ ನೀರಗಟ್ಟಿ, ಹೊನ್ನೂರಪ್ಪ ದೇವಗಿರಿ, ಶ್ರೀನಿವಾಸ ಬೆಳದಡಿ, ಲೋಹಿತ ಗಾಮನಗಟ್ಟಿ, ಪ್ರಸಾದ ಪೆರೂರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.