ADVERTISEMENT

ಹುಬ್ಬಳ್ಳಿಯಲ್ಲಿ ಬಂದ್ ನೀರಸ: 15ಕ್ಕೂ ಹೆಚ್ಚು ಮಂದಿ ಪೊಲೀಸ್ ವಶ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 6:42 IST
Last Updated 5 ಡಿಸೆಂಬರ್ 2020, 6:42 IST
ಜಯ ಕರ್ನಾಟಕ ಸಂಘಟನೆ ಸದಸ್ಯರು ಶಾಸಕ ಬಸನಗೌಡ ಪಾಟೀಲ ಅವರ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಜಯ ಕರ್ನಾಟಕ ಸಂಘಟನೆ ಸದಸ್ಯರು ಶಾಸಕ ಬಸನಗೌಡ ಪಾಟೀಲ ಅವರ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.   

ಹುಬ್ಬಳ್ಳಿ: ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ವಿವಿಧ ಕನ್ನಡ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್'ಗೆ ವಾಣಿಜ್ಯ ನಗರಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜನಜೀವನ ಎಂದಿನಂತೆಯೇ ಇದೆ. ಬೆಳಿಗ್ಗೆಯಿಂದಲೇ ಆಟೊ ರಿಕ್ಷಾ, ಬಸ್'ಗಳ‌ ಸಂಚಾರ ನಿರಾತಂಕವಾಗಿವೆ. ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ಎಂದಿನಂತೆಯೇ ಇವೆ. ಅಂಗಡಿ, ಮಳಿಗೆಗಳು ತೆರೆದಿವೆ.

ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಚನ್ನಮ್ಮ ವೃತ್ತ, ಅಂಬೇಡ್ಕರ್ ವೃತ್ತ, ಈದ್ಗಾ ಮೈದಾನ, ದುರ್ಗದ ಬೈಲ್, ಬಸ್ ನಿಲ್ದಾಣದ ಸುತ್ತ ಪೊಲೀಸ್ ಬಂದೋಬಸ್ತ್ ಒದಗಿಸಿದೆ.

ADVERTISEMENT

15ಕ್ಕು ಹೆಚ್ಚು ಮಂದಿ ವಶ: ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ವಿವಿಧ ಕನ್ನಡ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಅಲ್ಲಿಯ ಅಂಗಡಿಗಳನ್ನು ಅವರು ಬಲವಂತವಾಗಿ ಮುಚ್ಚಿಸಲು ಮುಂದಾದಾಗ ಪೊಲೀಸರು 15ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ಹಳೆ ಸಿಎಆರ್ ಮೈದಾನಕ್ಕೆ ಕರೆದೊಯ್ದರು.

ಏಕಾಂಗಿ ಹೋರಾಟ: ಕರ್ನಾಟಕ ಸಂಗ್ರಾಮಸೇನೆ ರಾಜ್ಯ ಘಟಕದ ಅಧ್ಯಕ್ಷ ‌ಸಂಜೀವ ಧುಮಕನಾಳರಿಂದ ಚನ್ನಮ್ಮ ವೃತ್ತದಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಿದರು. ಹಳದಿ, ಕೆಂಪು ಬಣ್ಣದ ಬಾವುಟ ಹಿಡಿದು ಧರಣಿ ನಡೆಸಿದರು.

ಯತ್ನಾಳ ವಿರುದ್ಧ ಆಕ್ರೋಶ: ಜಯ ಕರ್ನಾಟಕ ಸಂಘಟನೆ ಸದಸ್ಯರು ಚನ್ನಮ್ಮ ವೃತ್ತದಲ್ಲಿ ‘ನಾವು ಮರಾಠಾ ಸಮಾಜ ವಿರೋಧಿಗಳಲ್’' ಎನ್ನುವ ನಾಮಫಲಕ ಪ್ರದರ್ಶಿಸಿ, ‘ರೋಲ್ ಕಾಲ್ ಹೋರಾಟಗಾರರು’ ಎಂದು ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ ವಿರುದ್ಧ ಹರಿಹಾಯ್ದರು. ನಂತರ ಅವರ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.