ADVERTISEMENT

ವಿ.ವಿಗಳ ಸ್ಥಾಪನೆಯ ಉದ್ದೇಶ ಈಡೇರಲಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಕೃಷಿ ವಿ.ವಿ ಸಂಸ್ಥಾಪನಾ ದಿನಾಚರಣೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಲಹೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 4:57 IST
Last Updated 29 ನವೆಂಬರ್ 2022, 4:57 IST
ಧಾರವಾಡ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಸೋಮವಾರ ನಡೆದ 36ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಪಿ.ಎಲ್.ಪಾಟೀಲ ಅವರು ಪ್ರಲ್ಹಾದ ಜೋಶಿ ಅವರೊಂದಿಗೆ ಸಮಾಲೋಚನೆ ನಡೆಸಿದರು. ಈರೇಶ ಅಂಚಟಗೇರಿ, ಡಾ. ಸುರೇಶ ಕುಮಾರ ಚೌಧರಿ ಇದ್ದಾರೆ
ಧಾರವಾಡ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಸೋಮವಾರ ನಡೆದ 36ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಪಿ.ಎಲ್.ಪಾಟೀಲ ಅವರು ಪ್ರಲ್ಹಾದ ಜೋಶಿ ಅವರೊಂದಿಗೆ ಸಮಾಲೋಚನೆ ನಡೆಸಿದರು. ಈರೇಶ ಅಂಚಟಗೇರಿ, ಡಾ. ಸುರೇಶ ಕುಮಾರ ಚೌಧರಿ ಇದ್ದಾರೆ   

ಧಾರವಾಡ: ‘ವಿಶ್ವವಿದ್ಯಾಲಯಗಳ ಸ್ಥಾಪನೆ ಪದವಿ ನೀಡುವುದಷ್ಟೇ ಅಲ್ಲ, ಅದರ ಸ್ಥಾಪನೆಯ ಮೂಲ ಉದ್ದೇಶ ಈಡೇರಿಕೆಯಾಗಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ 36ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಿಳಾ ವಿಶ್ವವಿದ್ಯಾಲಯ, ಜಾನಪದ ವಿಶ್ವವಿದ್ಯಾಲಯ ಹೀಗೆ ಅನೇಕ ಹೆಸರಿನ ಹಾಗೂ ಉದ್ದೇಶಗಳೊಂದಿಗೆ ಹೊಸ ವಿವಿಗಳು ಸ್ಥಾಪನೆಯಾಗಿವೆ. ಆದರೆ ಸಾಂಪ್ರದಾಯಕ ವಿಶ್ವವಿದ್ಯಾಲಯಗಳಂತೆಯೇ ಪದವಿ ನೀಡುವುದೇ ಆದಲ್ಲಿ, ಅವುಗಳ ಸ್ಥಾಪನೆಯ ಉದ್ದೇಶ ಈಡೇರದು’ ಎಂದರು.

ADVERTISEMENT

‘ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಆಹಾರ ಧಾನ್ಯಗಳಿಗೆ ಹೊರ ದೇಶಗಳಿಗೆ ಕೈಚಾಚುತ್ತಿದ್ದ ಭಾರತದ, ಇಂದು ಅನೇಕ ರಾಷ್ಟ್ರಗಳಿಗೆ ಆಹಾರ ಧಾನ್ಯ ರಫ್ತು ಮಾಡುವಷ್ಟು ಬೆಳೆದಿದೆ. ಯಾವುದೇ ಬೆಳೆಯ ರಫ್ತು ತಡೆಹಿಡಿದರೆ, ಅದು ಜಗತ್ತಿನಲ್ಲಿ ಚರ್ಚಿತ ವಿಷಯವಾಗುತ್ತಿದೆ. ಹೀಗೆ ಕೃಷಿ ಉತ್ಪನ್ನಗಳ ಬೇಡಿಕೆ ಜಾಗತಿಕ ಮಟ್ಟದಲ್ಲಿ ಹೆಚ್ಚಿದ್ದರೂ, ಇಂದು ರೈತನ ಪರಿಸ್ಥಿತಿ ಸುಧಾರಿಸಿಲ್ಲ. ರೈತರ ಮಕ್ಕಳಿಗೆ ವಧು ನೀಡಲು ಇಂದಿಗೂ ಜನರು ಹಿಂದೆಮುಂದೆ ನೋಡುವ ಸ್ಥಿತಿ ಇದೆ. ಇದು ಬದಲಾಗಬೇಕಿದೆ’ ಎಂದರು.

‘ಕೃಷಿ ವಿಶ್ವವಿದ್ಯಾಲಯಗಳು ನೀಡುವ ಪದವಿಯಿಂದ ಉದ್ಯಮಿಗಳಾಗಿ ಹಲವರಿಗೆ ಉದ್ಯೋಗ ನೀಡುವ ಮತ್ತು ರೈತರ ಉತ್ಪಾದನೆಗಳನ್ನು ಮೌಲ್ಯವರ್ಧನೆ ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕಿದೆ. ಆದರೆ ಪದವಿ ಪಡೆಯುವ ವಿದ್ಯಾರ್ಥಿಗಳು ನೌಕರಿಯತ್ತ ಆಕರ್ಷಿತಾಗುತ್ತಿದ್ದಾರೆ. ವಿಶ್ವವಿದ್ಯಾಲಯಗಳು ಮತ್ತು ಬೋಧಕರು ಕೃಷಿ ತಂತ್ರಜ್ಞಾನ ಅರಿತ ವಿದ್ಯಾರ್ಥಿಗಳನ್ನು ಉದ್ಯಮಗಳತ್ತ ಮುಖ ಮಾಡುವಂತೆ ಮಾರ್ಗದರ್ಶನ ಮಾಡಬೇಕು’ ಎಂದು ಹೇಳಿದರು.

‘ಜಾಗತಿ ಮಟ್ಟದಲ್ಲಿ ಅತಿದೊಡ್ಡ ಆರ್ಥಿಕತೆ ಹೊಂದಿದ ರಾಷ್ಟ್ರಗಳಲ್ಲಿ ಭಾರತ 5ನೇ ಸ್ಥಾನದಲ್ಲಿದೆ. ಮುಂದಿನ ಮೂರು ವರ್ಷಗಳಲ್ಲಿ 3ನೇ ಸ್ಥಾನಕ್ಕೇರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ದೇಶ 32 ಟ್ರಿಲಿಯನ್ ಡಾಲರ್‌ ಆರ್ಥಿಕತೆಯೊಂದಿಗೆ ಭಾರತ ವಿಶ್ವದ ಅಗ್ರಸ್ಥಾನಕ್ಕೇರಲಿದೆ’ ಎಂದು ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

‘ದೇಶದಲ್ಲಿ 18ರಿಂದ 35ರ ವಯೋಮಾನದ 66 ಕೋಟಿ ಜನಸಂಖ್ಯೆ ಇದೆ. ಇದನ್ನು ದೇಶದ ಆಸ್ತಿಯನ್ನಾಗಿ ಮಾಡುವ ಪ್ರಕ್ರಿಯೆ ನಡೆದಿದೆ. ದೇಶದ ಜನಸಂಖ್ಯೆ ಏರುತ್ತಿದ್ದರೂ, ಅದನ್ನು ಇಡೀ ಜಗತ್ತಿನ ಸಂಪನ್ಮೂಲವನ್ನಾಗಿಸಲಿದೆ. ತಮ್ಮ ಎಲ್ಲಾ ಅಗತ್ಯಗಳಿಗೆ ಇಡೀ ಜಗತ್ತು ಭಾರತದತ್ತ ನೋಡುವಂತಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ವಿಭಾಗದ ಉಪ ಮಹಾನಿರ್ದೇಶಕ ಡಾ. ಸುರೇಶ ಕುಮಾರ್ ಚೌಧರಿ ಮಾತನಾಡಿದರು. ಕುಲಪತಿ ಡಾ. ಪಿ.ಎಲ್.ಪಾಟೀಲ ಅವರು ವಿಶ್ವವಿದ್ಯಾಲಯದ ಸಾಧನೆಯ ವರದಿಯನ್ನು ಸಭೆಗೆ ತಿಳಿಸಿದರು.

ಪಾಲಿಕೆ ಮೇಯರ್ ಈರೇಶ ಅಂಚಟಗೇರಿ, ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ತ್ ಸದಸ್ಯ ಶಾಂತಾರಾಮ ಸಿದ್ಧಿ, ಬಯಲುಸೀಮೆ ‍ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ, ವಿಶ್ವವಿದ್ಯಾಲಯದ ವ್ಯವಸ್ಥಾಪನ ಮಂಡಳಿ ಸದಸ್ಯ ವೈ.ಎನ್.ಪಾಟೀಲ, ವೈ.ಎನ್.ಪಾಟೀಲ, ಎಲ್‌.ಎಸ್.ಅಜಗಣ್ಣವರ, ಪಿ.ಮಲ್ಲೇಶ, ಎಚ್.ಜಯಕುಮಾರ, ಶ್ರೀನಿವಾಸ ಕೋಟ್ಯಾನ. ಕುಲಸಚಿವ ಶಿವಾನಂದ ಕರಾಳೆ ಇದ್ದರು.

ಇದೇ ಸಂದರ್ಭದಲ್ಲಿ ಸಂಸ್ಥಾಪನಾ ದಿನಾಚರಣೆ ಅಂಘವಾಗಿ ನೀಡುವ 2021–22ನೇ ಸಾಲಿನ ಪ್ರಶಸ್ತಿಗಳನ್ನು ವಿಜ್ಞಾನಿಗಳೂ ಸೇರಿದಂತೆ 61 ಜನರಿಗೆ ವಿತರಿಸಲಾಯಿತು. ಇವುಗಳು ನಗದು ಪುರಸ್ಕಾರ ಹಾಗೂ ಪ್ರಮಾಣಪತ್ರ ಒಳಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.