ADVERTISEMENT

ನಾಟಕ ಪ್ರದರ್ಶನ: ಪ್ರೇಕ್ಷಕರು ವಿರಳ

ಸಂಕಷ್ಟದಲ್ಲಿ ವೃತ್ತಿರಂಗಭೂಮಿ ಕಲಾವಿದರು, ಮಾಲೀಕರು

​ಪ್ರಜಾವಾಣಿ ವಾರ್ತೆ
Published 11 ಜೂನ್ 2022, 15:50 IST
Last Updated 11 ಜೂನ್ 2022, 15:50 IST
ಹುಬ್ಬಳ್ಳಿಯಲ್ಲಿ ಪ್ರದರ್ಶನಗೊಳ್ಳುತ್ತಿರುವ ‘ಮನಸಿದ್ರ ಮಾರಿ ನೋಡು ನೆನಪಾದ್ರ ಫೋನ್ ಮಾಡು’ ನಾಟಕದ ದೃಶ್ಯ
ಹುಬ್ಬಳ್ಳಿಯಲ್ಲಿ ಪ್ರದರ್ಶನಗೊಳ್ಳುತ್ತಿರುವ ‘ಮನಸಿದ್ರ ಮಾರಿ ನೋಡು ನೆನಪಾದ್ರ ಫೋನ್ ಮಾಡು’ ನಾಟಕದ ದೃಶ್ಯ   

ಹುಬ್ಬಳ್ಳಿ: ‘ವೃತ್ತಿ ರಂಗಭೂಮಿ ಕಲಾವಿದರು ಕನ್ನಡದ ಉಳಿವಿಗಾಗಿ ಕೇವಲ ಭಾಷಣ ಮಾಡುವುದಿಲ್ಲ. ಗಡಿ ಭಾಗದಲ್ಲೂ ಕನ್ನಡದ ಕಂಪು ಪಸರಿಸುತ್ತೇವೆ. ಆದರೂ, ನಮ್ಮ ಜೀವನ ನಷ್ಟದಲ್ಲೇ ಸಾಗಿದೆ’ ಎಂದು ನೋವಿನಿಂದ ನುಡಿದವರು ಕಲ್ಲೂರಿನ ಗುರು ಮಲ್ಲಿಕಾರ್ಜುನ ನಾಟ್ಯ ಸಂಘದ ಮಾಲೀಕ ಮಂಟೇಶ್ ಬಿ. ದಂಡಿನ.

ನಗರದ ಹಳೇ ಬಸ್‌ ನಿಲ್ದಾಣದ ಸುಜಾತ ಚಿತ್ರಮಂದಿರದ ಹತ್ತಿರ ನಾಟಕ ಪ್ರದರ್ಶಿಸುತ್ತಿರುವ ಅವರು, ಶುಕ್ರವಾರ ‘ಪ್ರಜಾವಾಣಿ’ಗೆ ವೃತ್ತಿರಂಗಭೂಮಿಯ ಪರಿಸ್ಥಿತಿ ವಿವರಿಸಿದರು.

‘ನಾಟಕ ‍ಪ್ರದರ್ಶನ ನಡೆಯುತ್ತಿರುವ ಜಾಗಕ್ಕೆ ತಿಂಗಳಿಗೆ ₹50,000 ಬಾಡಿಗೆ ನೀಡಬೇಕು. ನಿತ್ಯ ಸ್ವಚ್ಛತೆ, ಪ್ರಚಾರ, ವಿದ್ಯುತ್‌ ಇನ್ನಿತರ ಖರ್ಚುಗಳಿಗೆ ₹20,000 ನೀಡುತ್ತೇನೆ. ಆದರೆ, ಎರಡು ಪ್ರದರ್ಶನಗಳಿಂದ ಬರುವ ಆದಾಯ ₹ 12,000 ಮಾತ್ರ. ನಷ್ಟ–ಸಂಕಷ್ಟದಲ್ಲೇ ನಾವು, ಕಲಾವಿದರು ಜೀವನ ಸಾಗಿಸುತ್ತಿದ್ದೇವೆ’ ಎಂದರು.

ADVERTISEMENT

ಎರಡು ವರ್ಷ ಕೋವಿಡ್‌ ಕಾರಣ ಯಾವುದೇ ನಾಟಕ ಪ್ರದರ್ಶನ ನಡೆಯಲಿಲ್ಲ. ನಾಟಕವನ್ನೇ ನಂಬಿದ್ದ ವೃತ್ತಿರಂಗಭೂಮಿ ಕಲಾವಿದರು, ಮಾಲೀಕರು ತೀವ್ರ ಸಮಸ್ಯೆ ಎದುರಿಸಿದರು. ದುಡಿಮೆಯ ಮೂಲವೇ ಇಲ್ಲದೆ ಪರಿತಪಿಸಿದರು. ಸದ್ಯ ಎಲ್ಲ ರಂಗಗಳು ಚೇತರಿಸಿಕೊಳ್ಳುತ್ತಿದ್ದರೂ ವೃತ್ತಿರಂಗಭೂಮಿಗೆ ನಷ್ಟ ತಪ್ಪಿಲ್ಲ.

‘ಕೋವಿಡ್‌ ಬಳಿಕವೂ ಜಾತ್ರೆಗಳು ನಡೆಯಲಿಲ್ಲ. ಹುಬ್ಬಳ್ಳಿಯಲ್ಲಿ ಹೆಚ್ಚು ಕಲಾಪ್ರೇಮಿಗಳು ಇರುವ ಕಾರಣ ಇಲ್ಲಿಗೆ ಬಂದಿದ್ದೇವೆ. ‘ಮನಸಿದ್ರ ಮಾರಿ ನೋಡು, ನೆನಪಾದ್ರ ಫೋನ್ ಮಾಡು’ ಸಾಮಾಜಿಕ ನಾಟಕ ದಿನಕ್ಕೆ ಎರಡು ಪ್ರದರ್ಶನ ಕಾಣುತ್ತಿದೆ. ಸದ್ಯ ಆದಾಯ ಕಡಿಮೆಯಿದೆ. ಆರು ತಿಂಗಳ ಬಳಿಕ, ಜಾತ್ರೆಗಳು ನಡೆಯುವ ಸ್ಥಳಗಳಿಗೆ ತೆರಳುತ್ತೇವೆ. ಜೀವನಮಾನವಿಡೀ ಅಲೆಯುವುದೇ ನಮ್ಮ ಪಾಡು’ ಎಂದರು.

‘ಕೋಟ್ಯಧೀಶರಾಗುವ ಉದ್ದೇಶ ನಮಗಿಲ್ಲ. ವೃತ್ತಿ ರಂಗಭೂಮಿ ಉಳಿಯಲಿ ಎಂಬ ಆಶಯವಿದೆ. ನಾಟಕ ಅಕಾಡೆಮಿಯಿಂದ ವರ್ಷಕ್ಕೆ ₹3 ಲಕ್ಷ ಅನುದಾನ ಕೊಡುತ್ತಾರೆ. ಅದು ಏನಕ್ಕೂ ಸಾಲುವುದಿಲ್ಲ. ನಾಟಕದವರೆಂದರೆ ಬ್ಯಾಂಕ್‌ನವರು ಸಾಲ ಕೊಡುವುದಿಲ್ಲ. ಮದುವೆಯಾಗಲೂ ಹಿಂಜರಿಯುತ್ತಾರೆ. ಸೌಲಭ್ಯಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಮಂಟೇಶ್ ಬಿ. ದಂಡಿನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.