ADVERTISEMENT

ರಂಗಭೂಮಿ ಕಲಾವಿದೆ ಎಚ್‌.ಬಿ. ಸರೋಜಮ್ಮಗೆ ರಾಜ್ಯೋತ್ಸವ ಪ್ರಶಸ್ತಿ

‘ಇಳಿವಯಸ್ಸಲ್ಲಿ ಆಸರೆಯಾದ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2023, 12:50 IST
Last Updated 31 ಅಕ್ಟೋಬರ್ 2023, 12:50 IST
   

ಹುಬ್ಬಳ್ಳಿ: ರಂಗಭೂಮಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಲ್ಲಿನ ಕುಂಬಾರ ಓಣಿ ನಿವಾಸಿ, 72 ವರ್ಷದ ಕಲಾವಿದೆ ಎಚ್‌.ಬಿ. ಸರೋಜಮ್ಮ ಅವರಿಗೆ ಪ್ರಸ್ತುತ ವರ್ಷದ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.

ಸರೋಜಮ್ಮ ಅವರು ಐದನೇ ತರಗತಿವರೆಗೆ ಓದಿದ್ದಾರೆ. 10ನೇ ವರ್ಷದಿಂದ ರಂಗಭೂಮಿ ಕಲಾವಿದೆಯಾಗಿ ಸೇವೆ ಸಲ್ಲಿಸುತ್ತಿರುವ ಅವರು, ಈಗಲೂ ನಾಟಕದಲ್ಲಿ ಅಭಿನಯಿಸುತ್ತಾರೆ. 62 ವರ್ಷಗಳ ಕಾಲ ರಂಗಭೂಮಿ ಬದುಕು ಸವೆಸಿದ ಅವರಿಗೆ, ಅನೇಕ ಬಿರುದು, ಸನ್ಮಾನ, ಪ್ರಶಸ್ತಿಗಳು ದೊರೆತಿವೆ.

1950ರಲ್ಲಿ ಜನಿಸಿರುವ ಸರೋಜಮ್ಮ, ಮೈಸೂರಿನ ಹೊಳೆ ನರಸಿಪುರ ಸಾಲಿಗ್ರಾಮದಲ್ಲಿ ಮೈಸೂರು ಮಹದೇವಸ್ವಾಮಿ ಕಂಪನಿಯ ‘ಸತ್ಯಹರಿಶ್ಚಂದ್ರ’ ನಾಟಕದ ಮೂಲಕ ರಂಗಭೂಮಿ ಪ್ರವೇಶಿಸಿದರು. ನಂತರ ಲಲಿತಮ್ಮನವರ ಕಂಪನಿ, ನರೇಗಲ್ಲ ಚನ್ನಬಸಪ್ಪನವರ ಕಂಪನಿ, ಶ್ರೀಶೈಲ ಮಲ್ಲಿಕಾರ್ಜುನ ನಾಟ್ಯ ಸಂಘ, ಸುಳ್ಯದ ದೇಸಾವಿಯವರ ಕಂಪನಿ, ಕಡಪಟ್ಟಿ ಪ್ರಕಾಶವರ ಕಂಪನಿ, ಎನ್‌. ಬಸವರಾಜ ಗುಡಗೇರಿ ಕಂಪನಿ, ಕೆ.ಬಿ.ಆರ್‌. ಚಿಂದೋಡಿ ಲೀಲಾ ಕಂಪನಿ, ಹುಚ್ಚೇಶ್ವರ ನಾಟ್ಯ ಸಂಘ, ಕಾಕನೂರು ಶಂಕ್ರಪ್ಪನವರ ಕಂಪನಿ, ಹಾಲಾಪುರ ರಾಮರಾವ ದೇಸಾಯಿ ಕಂಪನಿಯ ನೂರಾರು ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದಾರೆ.

ADVERTISEMENT

ಯಲಿವಾಳ ಸಿದ್ದಯ್ಯಸ್ವಾಮಿ, ದುರ್ಗಾದಾಸ, ಎಸ್‌.ಟಿ. ಅರಸ, ಪಿ.ಬಿ. ದುತ್ತರಗಿ, ಎಚ್‌.ಎನ್‌. ಹೂಗಾರ, ಎ.ಟಿ. ಮಹಾಂತೇಶ ಶಾಸ್ತ್ರಿ, ಸುಭದ್ರಮ್ಮ ಮನಸೂರು, ಗುಡಗೇರಿ ಬಸವರಾಜ, ಬ್ರಹ್ಮಾವರ ಇವರ ನಿರ್ದೇಶನದಲ್ಲಿ ರಾಜ್ಯದಾದ್ಯಂತ ಪ್ರದರ್ಶನವಾದ ನಾಟಕಗಳಲ್ಲಿ ಸರೋಜಮ್ಮ ಅಭಿನಯಿಸಿದ್ದಾರೆ. ರಕ್ತರಾತ್ರಿ, ರೈತನ ಮಕ್ಕಳು, ದುಡ್ಡಿನ ದರ್ಪ, ತಾಯಿ ಕರುಳು, ವ್ಯಾಘ್ರಮುಖ, ಸತ್ಯ ಸತ್ತಿತು, ಚನ್ನಪ್ಪ ಚನ್ನಗೌಡ, ಸುಶಿಕ್ಷಿತರು ಅವರು ಅಭಿನಯಿಸಿದ ಪ್ರಮುಖ ನಾಟಕಗಳು.

‘ಎಚ್ಚರ ತಂಗಿ ಎಚ್ಚರ’ ನಾಟಕದ ಅಭಿನಯಕ್ಕೆ ‘ಕಲಾಚತುರೆ’ ಹಾಗೂ ಡಾ. ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳ ಒಕ್ಕೂಟ ‘ಕಲಾ ಪ್ರವೀಣೆ’ ಬಿರುದು ನೀಡಿ ಸನ್ಮಾನಿಸಿದೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಡಾ. ರಾಜ್‌ಕುಮಾರ್‌ ಅವರಿಂದ ಅಭಿನಂದನಾ ಪತ್ರ ಪಡೆದು ಸನ್ಮಾನಿತರಾಗಿದ್ದಾರೆ.

ರಂಗಭೂಮಿ ಸೇವೆ ಸಾರ್ಥಕ: ಸರೋಜಮ್ಮ

‘ಮುಪ್ಪಿನ ಕಾಲದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದು, ಮರುಜನ್ಮ ಬಂದಂತಾಗಿದೆ. ಇಳಿ ವಯಸ್ಸಲ್ಲಿ ಯಾರೂ ಇಲ್ಲದ ನನಗೆ ಈ ಪ್ರಶಸ್ತಿ ಆಸರೆಯಾಗಿದೆ. ರಂಗಭೂಮಿಯ ಸೇವೆ ಸಾರ್ಥಕತೆ ಎನಿಸಿದೆ. ವಯಸ್ಸಾಗಿದೆ ಎಂದು ಈಗ ನಾಟಕಕ್ಕೆ ಕರೆಯುವುದಿಲ್ಲ. ಆದರೂ, ವಯಸ್ಸಿಗೆ ತಕ್ಕಂಥ ಹೇಮರಡ್ಡಿ ಮಲ್ಲಮ್ಮ, ಒನಕೆ ಓಬವ್ವರಂಥ ಪಾತ್ರಕ್ಕೆ ಬಣ್ಣ ಹಚ್ಚುತ್ತೇನೆ’ ಎಂದು ಸರೋಜಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.