ADVERTISEMENT

ಹುಬ್ಬಳ್ಳಿ: ಜಿಲ್ಲೆಯಲ್ಲಿ ಸದ್ಯಕ್ಕಿಲ್ಲ ಹಕ್ಕಿಜ್ವರ ಭೀತಿ

ಕಲಾವತಿ ಬೈಚಬಾಳ
Published 12 ಜನವರಿ 2021, 3:14 IST
Last Updated 12 ಜನವರಿ 2021, 3:14 IST

ಹುಬ್ಬಳ್ಳಿ: ರಾಜ್ಯದ ವಿವಿಧೆಡೆ ಹಾಗೂ ಹೊರ ರಾಜ್ಯಗಳಲ್ಲಿ ಹಕ್ಕಿಜ್ವರದ ಭೀತಿ ಇದ್ದರೂ ಜಿಲ್ಲೆಯಲ್ಲಿ ಈ ತನಕ ಯಾವುದೇ ಪ್ರಕರಣಗಳು ವರದಿಯಾಗಿಲ್ಲ.

2005ರಿಂದ ಪದೇ ಪದೇ ಹಕ್ಕಿಜ್ವರ ಕಾಣಿಸಿಕೊಳ್ಳುತ್ತಲೇ ಇದೆ. 15 ವರ್ಷಗಳ ಅವಧಿಯಲ್ಲಿ ದೇಶದ 15 ರಾಜ್ಯಗಳಲ್ಲಿ 25ಕ್ಕೂ ಹೆಚ್ಚು ಬಾರಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಆಗಾಗ್ಗೆ ಹಕ್ಕಿಜ್ವರದ ಪ್ರಕರಣಗಳು ವರದಿಯಾಗುತ್ತಿವೆ. ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಆದಾಗಿಯೂ ಪಶು ಸಂಗೋಪನಾ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

‘ಜಿಲ್ಲೆಯ ಎಲ್ಲ ಪಶು ವೈದ್ಯಾಧಿಕಾರಿ, ಸಿಬ್ಬಂದಿಗೆ ತಮ್ಮ ವ್ಯಾಪ್ತಿಯ ಪೌಲ್ಟ್ರಿ ಫಾರಂಗಳ ಮೇಲೆ‌ ನಿಗಾ ಇರಿಸಲು ತಿಳಿಸಲಾಗಿದೆ. ಹೊಲ, ಗದ್ದೆಗಳಲ್ಲಿ ಬರುವ ಹಕ್ಕಿಗಳ ಮೇಲೂ ನಿಗಾ ಇರಿಸಲು ಸೂಚಿಸಲಾಗಿದೆ’ ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಪರಮೇಶ್ವರ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಕೋಳಿಗಳು ಮೃತಪಟ್ಟರೆ ಫಾರಂ ಮಾಲೀಕರು ಅವುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಒಂದು ವೇಳೆ ಹಾಗೆಯೇ ಎಲ್ಲೆಂದರಲ್ಲಿ ಬಿಸಾಡಿದರೆ, ಹದ್ದು ಮತ್ತಿತರ ಹಕ್ಕಿಗಳು ಆ ಮಾಂಸ ತಿನ್ನುತ್ತವೆ. ಇದು ರೋಗ ಹರಡಲು ಕಾರಣವಾಗುತ್ತದೆ’ ಎಂದರು.

‘ಚಳಿಗಾಲದಲ್ಲಿ ಹಕ್ಕಿಗಳು ವಲಸೆ ಬರುತ್ತವೆ. ಆ ಹಕ್ಕಿಗಳಿಂದ ಇಲ್ಲಿನ ಹಕ್ಕಿಗಳಿಗೂ ಬರುವ ಸಾಧ್ಯತೆ ಇದೆ’ ಎಂದು ತಿಳಿಸಿದರು.

ಮಾಂಸ ಸೇವನೆಗೆ ಹಿಂದೇಟು: ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ತೀವ್ರ ನಷ್ಟ ಅನುಭವಿಸಿದ್ದ ಕುಕ್ಕುಟೋದ್ಯಮ ಕೆಲವು ತಿಂಗಳುಗಳಿಂದ ಚೇತರಿಕೆಯತ್ತ ಸಾಗಿತ್ತು. ದಿಢೀರ್‌ ಕಾಣಿಸಿಕೊಂಡ ಹಕ್ಕಿಜ್ವರ ಮತ್ತೆ ಈ ಉದ್ಯಮದಲ್ಲಿರುವವರನ್ನು ಕಂಗಾಲು ಮಾಡಿದೆ. ಪರಿಣಾಮ ಜನರು ಮಾಂಸ ಸೇವನೆಗೆ ಹಿಂದೇಟು ಹಾಕುತ್ತಿದ್ದಾರೆ.

ಸ್ವಚ್ಛತೆ ಕಾಯ್ದುಕೊಂಡು, ಸರಿಯಾಗಿ ಬೇಯಿಸಿದ ಮಾಂಸ ಸೇವಿಸುವುದರಿಂದ ತೊಂದರೆ ಆಗುವುದಿಲ್ಲ ಎಂಬುದನ್ನು ವಿಶ್ವ ಸಂಸ್ಥೆ ದೃಢಪಡಿಸಿದೆ. ಈ ಕುರಿತು ಸರಿಯಾದ ಜಾಗೃತಿ ಮೂಡಿಸುವುದು ಅವಶ್ಯ ಎಂದು ತಜ್ಞರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.