ADVERTISEMENT

‘ಸಂವಿಧಾನ ರಕ್ಷಿಸಿ; ಭಾರತ ಉಳಿಸಿ’ ತಿರಂಗಾ ಯಾತ್ರೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 13:51 IST
Last Updated 26 ಜನವರಿ 2020, 13:51 IST
ಹುಬ್ಬಳ್ಳಿಯಲ್ಲಿ ಕಾಂಗ್ರೆಸ್‌ ಅಲ್ಪಸಂಖ್ಯಾತ ಮುಖಂಡರು ಹಾಗೂ ದಲಿತ ಮತ್ತು ವಿವಿಧ ಸಂಘಟನೆಗಳ ಮುಖಂಡರು ಗಣರಾಜ್ಯೋತ್ಸವದ ಅಂಗವಾಗಿ ತಿರಂಗಾ ಯಾತ್ರೆ ನಡೆಸಿದರು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ಕಾಂಗ್ರೆಸ್‌ ಅಲ್ಪಸಂಖ್ಯಾತ ಮುಖಂಡರು ಹಾಗೂ ದಲಿತ ಮತ್ತು ವಿವಿಧ ಸಂಘಟನೆಗಳ ಮುಖಂಡರು ಗಣರಾಜ್ಯೋತ್ಸವದ ಅಂಗವಾಗಿ ತಿರಂಗಾ ಯಾತ್ರೆ ನಡೆಸಿದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಕಾಂಗ್ರೆಸ್‌ ಅಲ್ಪಸಂಖ್ಯಾತ ಮುಖಂಡರು ಹಾಗೂ ದಲಿತ ಮತ್ತು ವಿವಿಧ ಸಂಘಟನೆಗಳ ಮುಖಂಡರು ಗಣರಾಜ್ಯೋತ್ಸವದ ಅಂಗವಾಗಿ ನಗರದಲ್ಲಿ ತಿರಂಗಾ ಯಾತ್ರೆ ನಡೆಸಿದರು.

ಇಲ್ಲಿನ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮುಖಂಡರು, ‘ಸಂವಿಧಾನ ರಕ್ಷಿಸಿ; ಭಾರತ ಉಳಿಸಿ’ ಎಂಬ ಘೋಷಣೆ ಮೊಳಗಿಸಿದರು. ದೇಶಭಕ್ತಿ ಗೀತೆಗಳನ್ನು ಹಾಡಿದರು.

ಪೊಲೀಸರ ತಡೆ:ನಗರದ ವಿವಿಧ ಮಾರ್ಗಗಳಲ್ಲಿ ಬೈಕ್‌ ರ‍್ಯಾಲಿ ಮಾಡಲು ಮುಂದಾದ ಮುಖಂಡರನ್ನು ತಡೆದ ಪೊಲೀಸರು, ಅವರ ಬಳಿ ಇದ್ದ ಬಾವುಟ ಮತ್ತು ಘೋಷಣಾ ಫಲಕಗಳನ್ನು ವಶಕ್ಕೆ ಪಡೆದರು. ಬೈಕ್‌ ರ‍್ಯಾಲಿಗೆ ಅನುಮತಿ ಪಡೆದಿಲ್ಲದಿರುವುದರಿಂದ ಸಂಚಾರ, ಕಾನೂನು ಸುವ್ಯವಸ್ಥೆಗೆ ತೊಂದರೆ ಆಗುವುದರಿಂದ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ಬಳಿಕ ಪಾದಯಾತ್ರೆಗೆ ಅವಕಾಶ ನೀಡಲಾಯಿತು.

ADVERTISEMENT

ಅಂಬೇಡ್ಕರ್‌ ವೃತ್ತದಿಂದ ಸ್ಟೇಷನ್‌ ರಸ್ತೆ, ಗಣೇಶ ಪೇಟೆ, ಶಾಹ ಬಜಾರ್‌, ದುರ್ಗದಬೈಲ್‌, ಡಾಕಪ್ಪ ಸರ್ಕಲ್‌, ಪಿ.ಬಿ.ರಸ್ತೆ, ನ್ಯೂಇಂಗ್ಲಿಷ್‌ ಸ್ಕೂಲ್‌, ಹಳೇ ಹುಬ್ಬಳ್ಳಿ ಮೂಲಕ ಸಾಗಿ ಕಾರವಾರ ರಸ್ತೆಯಲ್ಲಿರುವ ಫತೇಶಾವಲಿ ದರ್ಗಾದ ಬಳಿ ತಿರಂಗಾ ಯಾತ್ರೆಯನ್ನು ಮುಕ್ತಾಯಗೊಳಿಸಿದರು.

ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಮುಖಂಡರಾದ ಅನ್ವರ್‌ ಮುಧೋಳ, ಶಾಕೀರ್‌ ಸನದಿ, ಬಾಬಾಜಾನ್‌ ಮುಧೋಳ, ಪಿತಾಂಬ್ರಪ್ಪ ಬಿಳಾರ, ಇಲಿಯಾಸ್‌ ಮಣಿಯಾರ, ವಿಜಯ ಗುಂಟ್ರಾಳ ಮತ್ತಿತರರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.