ADVERTISEMENT

ಧಾರವಾಡ| ಅನುವಾದ ಸೃಜನಶೀಲ ಅಭಿವ್ಯಕ್ತಿ: ದೀಪಾ ಭಾಸ್ತಿ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 5:04 IST
Last Updated 12 ನವೆಂಬರ್ 2025, 5:04 IST
ಧಾರವಾಡದ ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ಮಂಗಳವಾರ ನಡೆದ ‘ಧರೆಗೆ ದೊಡ್ಡವರು’ ಮಾಲಿಕೆಯಲ್ಲಿ ದೀಪಾ ಭಾಸ್ತಿ ಅವರನ್ನು ಸನ್ಮಾನಿಸಲಾಯಿತು
ಧಾರವಾಡದ ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ಮಂಗಳವಾರ ನಡೆದ ‘ಧರೆಗೆ ದೊಡ್ಡವರು’ ಮಾಲಿಕೆಯಲ್ಲಿ ದೀಪಾ ಭಾಸ್ತಿ ಅವರನ್ನು ಸನ್ಮಾನಿಸಲಾಯಿತು   

ಧಾರವಾಡ: ‘ಅನುವಾದ ಕ್ರಿಯೆ ಒಂದು ರೀತಿಯ ಬರವಣಿಗೆ. ಅದು ಸೃಜನಶೀಲ ಅಭಿವ್ಯಕ್ತಿ. ಅನುವಾದ ಸುಲಭದ ಕೆಲಸವಲ್ಲ’ ಎಂದು ಬೂಕರ್‌ ಪ್ರಶಸ್ತಿ ಪುರ‌ಸ್ಖೃತ ಅನುವಾದಕಿ ದೀಪಾ ಭಾಸ್ತಿ ಹೇಳಿದರು.

ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಮಂಗಳವಾರ ನಡೆದ ಧರೆಗೆ ದೊಡ್ಡವರು ಮಾಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೃತಕ ಬುದ್ಧಿಮತ್ತೆ (ಎಐ), ಚಾಟ್‌–ಜಿಪಿಟಿ, ಗೂಗಲ್‌ ಅನುವಾದದ ಮೂಲಕ ಒಂದು ಭಾಷೆಯ ಪದವನ್ನು ಇನ್ನೊಂದು ಭಾಷೆಯ ಸರಿಸಮಾನ ಪದಕ್ಕೆ ಕೂರಿಸುವುದ ಸುಲಭದ ಕೆಲಸವಲ್ಲ. ಕೃತಕ ಬುದ್ಧಿಮತ್ತೆ (ಎಐ), ಚಾಟ್‌–ಜಿಪಿಟಿ, ಗೂಗಲ್‌ ಅನುವಾದ ಮೇಲ್ನೋಟದ ಅರ್ಥವನ್ನು ಮಾತ್ರ ಅನುವಾದಿಸುವ ಭಾಷಾ ಕಲಿಕಾ ಮಾದರಿ’ ಎಂದರು.

‘ಅನುವಾದಿತ ಅಥವಾ ಮರುಸೃಷ್ಟಿಸಿದ ಕೃತಿ ಲೇಖಕ ಮತ್ತು ಅನುವಾದಕರ ಸಮಾನ ವಾರಸುದಾರಿಕೆಯ ‘ಥರ್ಡ್‌ ಟೆಕ್ಸ್ಟ್‌’ ಎಂಬುದು ನನ್ನ ವೈಯಕ್ತಿಕ ಅನಿಸಿಕೆ. ಅನುವಾದ ಭಾಷೆಯ ಬೆಳವಣಿಗೆಯಲ್ಲಿ ಉಪಾಂಗ ಮಾತ್ರವಲ್ಲ, ಅದು ಒಂದು ಭಾಷೆಯನ್ನು ಬೇರೊಂದು ಭಾಷೆ ಜತೆ ಮಾತುಕತೆ ಮಾಡುವಂತಹ ನಾಡಿ’ ಎಂದರು.

ADVERTISEMENT

‘ಭಾಷೆ ಸಂವಹನಕ್ಕೆ ಮಾತ್ರ ಇರುವ ಸಾಧನವಲ್ಲ. ಭಾಷೆಯಲ್ಲಿ ನೆಲದ ನೆನಪು, ಸಂಗೀತ, ಕಲೆ, ಆಹಾರ ಪದ್ಧತಿ, ನೆಲದ ಇತಿಹಾಸ, ಸಾಮಾಜಿಕ ಕಟ್ಟುಪಾಡು ತುಂಬಿರುತ್ತವೆ. ಭಾವಾನುವಾದ ಮಾಡುವಾಗ ಅನುವಾದಕರ ಪಾತ್ರ ದೊಡ್ಡದಿರುತ್ತದೆ. ಒಂದು ಭಾಷೆಯನ್ನು ಅದರ ಭಾಷಿಕರಿಂದ ಹೊರಗೆ ತೆಗೆದುಕೊಂಡು ಹೋಗುವುದರಲ್ಲಿ ಅನುವಾದ ಮತ್ತು ಅನುವಾದಕರ ಪ್ರಭಾವ ಜಾಸ್ತಿ ಇರುತ್ತದೆ’ ಎಂದರು.

‘ಅದ್ಭುತ ಕೃತಿಯ ಅನುವಾದ ತೀರಾ ಸಪ್ಪೆಯಾಗಿದ್ದರೆ, ಮೂಲ ಲೇಖಕ ಜಗತ್ತಿಗೆ ಪರಿಚಯ ಆಗಲಿಕ್ಕಿಲ್ಲ. ಕೃತಿ ಒಳ್ಳೆಯ ಅನುವಾದದಲ್ಲಿ ಮೂಡಿಬಂದರೆ ಮೂಲ ಲೇಖಕ ಜಗತ್ತಿಗೆ ಪರಿಚಯವಾಗಲು ಅನುಕೂಲ. ಇಂಗ್ಲಿಷ್‌ನಲ್ಲಿ ಅನುವಾದಕರ ಹಸರನ್ನು ಕೃತಿ ಮುಖಪುಟದಲ್ಲಿ ಈಗ ಹಾಕಲಾಗುತ್ತಿದೆ’ ಎಂದರು.

‘ಉತ್ತರ ಕರ್ನಾಟಕದ ಲೇಖಕರು ಕನ್ನಡ ಭಾಷೆಗೆ ಚೈತನ್ಯ ತುಂಬುವ ಕೆಲಸ ಮಾಡುತ್ತಾರೆ. ಇಲ್ಲಿನ ಭಾಷೆಗೆ ಶ್ರೀಮಂತಿಕೆ ಇದೆ. ಕನ್ನಡೇತರರಿಗೆ ಇಲ್ಲಿನ ಭಾಷೆಯ ಶ್ರೀಮಂತಿಕೆಯನ್ನು ಪರಿಚಯಿಸುವ ಕೆಲಸ ಆಗಬೇಕು. ಅನುವಾದವು ಭಾಷೆ ಬೆಳೆಸುವ ನಿಟ್ಟಿನ ಅಳಿಲು ಸೇವೆ. ಕನ್ನಡತನದ ಬೇರುಗಳನ್ನು ಗಟ್ಟಿಯಾಗಿಸುವ ಕೆಲಸವನ್ನು ಮಾಡಬೇಕು’ ಎಂದು ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸಹಕಾರ್ಯದರ್ಶಿ ಶಂಕರ ಕುಂಬಿ, ಪತ್ರಕರ್ತ ಹೃಷಿಕೇಶ ಬಹದ್ದೂರ್‌ ದೇಸಾಯಿ, ವಿಶೇಶ್ವರಿ ಬ.ಹಿರೇಮಠ, ಸತೀಶ ತುರಮುರಿ, ಶ್ರೀನಿವಾಸ ವಾಡಪ್ಪಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.