ಧಾರವಾಡ: ಸಾರಿಗೆ ನೌಕರರು ಮುಷ್ಕರದಿಂದಾಗಿ ಮಂಗಳವಾರ ಅವಳಿನಗರದ (ಹುಬ್ಬಳ್ಳಿ–ಧಾರವಾಡ) ನಡುವೆ ಬಿಆರ್‌ಟಿಎಸ್ ಚಿಗರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಗ್ರಾಮಾಂತರ ವಿಭಾಗ, ನಗರ ಸಾರಿಗೆ ಹಲವು ಬಸ್‌ಗಳು ಸಂಚರಿಸಿದವು.
ಶಾಲೆ, ಕಾಲೇಜು, ಉದ್ಯೋಗ, ವ್ಯವಹಾರ ಚಟುವಟಿಕೆಗಳಿಗೆ ಹುಬ್ಬಳ್ಳಿ, ಧಾರವಾಡಕ್ಕೆ ಓಡಾಡುವವರಿಗೆ ಬೆಳಿಗ್ಗೆ ಸ್ವಲ್ಪ ಹೊತ್ತು ಪರದಾಟವಾಯಿತು. ಬೆಳಿಗ್ಗೆ 9 ಗಂಟೆ ಹೊತ್ತಿಗೆ ಪರ್ಯಾಯವಾಗಿ ನಗರ ಸಾರಿಗೆ ಬಸ್‌ಗಳನ್ನು ವ್ಯವಸ್ಥೆ ಮಾಡಲಾಯಿತು.
ನಗರ ಸಾರಿಗೆ ಬಸ್‌ಗಳು ಮತ್ತು ಖಾಸಗಿ ಬಸ್‌ಗಳಲ್ಲಿ ಜನರು ಅವಳಿನಗರಕ್ಕೆ ಪ್ರಯಾಣಿಸಿದರು. ಪ್ರಯಾಣಿಕರ ದಟ್ಟಣೆ ಹೆಚ್ಚು ಇತ್ತು. ಬಿಆರ್‌ಟಿಎಸ್ ಕೌಂಟರ್‌ಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದ್ದವು.
‘ಹುಬ್ಬಳ್ಳಿಯ ಕಾಲೇಜಿಗೆ ನಿತ್ಯ ಚಿಗರಿ ಬಸ್‌ನಲ್ಲಿ ನಿತ್ಯ ಓಡಾಡುತ್ತೇನೆ. ಮುಷ್ಕರಿಂದಾಗಿ ಚಿಗರಿ ಬಸ್ ಸಂಚಾರ ಬಂದ್ ಆಗಿದ್ದರಿಂದ ಬೆಳಿಗ್ಗೆ ಬಹಳ ಹೊತ್ತು ಬಸ್‌ಗಾಗಿ ಕಾಯಬೇಕಾಯಿತು. ನಗರ ಸಾರಿಗೆ ಬಸ್ ವ್ಯವಸ್ಥೆ ಮಾಡಿದ್ದರು. ಬಸ್‌ಗಳಲ್ಲಿ ಬೆಳಿಗ್ಗೆ ಕಾಲಿಡಲು ಜಾಗವಿಲ್ಲದಷ್ಟು ಪ್ರಯಾಣಿಕರು ತುಂಬಿದ್ದರು’ ಎಂದು ಡಿಪ್ಲೊಮಾ ವಿದ್ಯಾರ್ಥಿನಿ ಶ್ರೇಯಾ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅವಳಿ ನಗರದ ನಡುವೆ ಬಿಆರ್‌ಟಿಎಸ್ ಮಾರ್ಗದಲ್ಲಿ 35 ಟಿಕೆಟ್ ಕೌಂಟರ್‌ಗಳಿವೆ. ಚಿಗರಿ ಬಸ್ ಸಂಚಾರ ಸ್ಥಗಿತವಾಗಿದ್ದರಿಂದ ಕೌಂಟರ್‌ಗಳು ಬಂದ್ ಆಗಿದ್ದವು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಬೆಳಿಗ್ಗೆ ಬಸ್‌ಗಳ ಓಡಾಟ ಸ್ವಲ್ಪ ಕಡಿಮೆ ಇತ್ತು. ಕಾಲೇಜುಗಳಿಗೆ ನಗರದ ವಿವಿಧೆಡೆಗಳಿಂದ ಓಡಾಡುವ ವಿದ್ಯಾರ್ಥಿಗಳಿಗೂ ತೊಂದರೆಯಾಯಿತು.
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ.ಅವರು ಬೆಳಿಗ್ಗೆ ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಬಸ್‌ಗಳ ಸಂಚಾರ ಪರಿಶೀಲಿಸಿದರು. ಮಾರ್ಗ, ಬಸ್‌ಗಳು ಸಂಚಾರದ ಮಾಹಿತಿ ಪಡೆದರು. ಚಿಗರಿ ಬಸ್ ಸಂಚಾರ ಸ್ಥಗಿತವಾಗಿದ್ದರಿಂದ ಹುಬ್ಬಳ್ಳಿಗೆ ನಗರ ಸಾರಿಗೆ ಬಸ್ ಓಡಾಟಕ್ಕೆ ವ್ಯವಸ್ಥೆ ಮಾಡಲು ಕ್ರಮ ವಹಿಸಿದರು.
ಜಿಲ್ಲಾ ಕೇಂದ್ರದಿಂದ ವಿವಿಧೆಡೆಗೆ (ಮುಗದ, ಹೆಬ್ಬಳ್ಳಿ,..) ಗ್ರಾಮಾಂತರ ಸಾರಿಗೆ ಬಸ್‌ಗಳು ಸಂಚರಿಸಿದವು. ಆದರೆ, ಬಸ್‌ಗಳ ಓಡಾಟ ಸ್ವಲ್ಪ ಕಡಿಮೆ ಇತ್ತು. ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಯೂ ಕಡಿಮೆ ಇತ್ತು. ಮುಷ್ಕರಕ್ಕೆ ಭಾಗಶಃ ಸ್ಪಂದನೆ ಇತ್ತು. ನಿಲ್ದಾಣಗಳಲ್ಲಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು.
ಮುಷ್ಕರ: ಮಿಶ್ರ ಪ್ರತಿಕ್ರಿಯೆ
ಕಲಘಟಗಿ: ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರಕ್ಕೆ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಹುಬ್ಬಳ್ಳಿ-ಧಾರವಾಡ ನಗರಗಳಿಗೆ ಸಂಚರಿಸುವ ಬಸ್ ಹೊರತುಪಡಿಸಿ ಉಳಿದಂತೆ ಗ್ರಾಮೀಣ ಸಾರಿಗೆ ಬಸ್‌ಗಳು ಎಂದಿನಂತೆ ಸಂಚರಿಸಿದವು.
ಪಟ್ಟಣದಲ್ಲಿ ಮಂಗಳವಾರದ ಸಂತೆ ಇದ್ದಿದ್ದರಿಂದ ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆ ಆಗದಂತೆ ಬಸ್‌ಗಳು ಸಂಚರಿಸಿದವು.
ಹುಬ್ಬಳ್ಳಿ-ಧಾರವಾಡ ನಗರಗಳಿಗೆ ಸಂಚರಿಸುವ ಬಸ್ ಸ್ಥಗಿತಗೊಳಿಸಿದ್ದರಿಂದ ನಗರಗಳಿಗೆ ತೆರಳುವ ಪ್ರಯಾಣಿಕರು ಪರದಾಡುವಂತಾಯಿತು. ಮಧ್ಯಾಹ್ನದ ನಂತರ ನೌಕರರು ಕರ್ತವ್ಯಕ್ಕೆ ಹಾಜರಾಗಿ ವಿವಿಧ ಮಾರ್ಗಗಳಾದ ಮುಂಡಗೋಡ, ಹಳಿಯಾಳ, ಹುಬ್ಬಳ್ಳಿ-ಧಾರವಾಡ, ಯಲ್ಲಾಪುರ ನಗರಗಳಿಗೆ ಬಸ್ ಸಂಚಾರ ಆರಂಭಿಸಿದರು.
‘ಕರ್ತವ್ಯಕ್ಕೆ ಗೈರಾಗದಂತೆ ಹಾಗೂ ರಜೆ ತೆಗೆದುಕೊಳ್ಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ಪ್ರಶಾಂತ್ ಪಾನಬುಡೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.