ADVERTISEMENT

ಸಾರಿಗೆ ನೌಕರರ ಮುಷ್ಕರ: 26 ತರಬೇತಿ ಸಿಬ್ಬಂದಿ ಅಮಾನತು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2021, 15:42 IST
Last Updated 13 ಏಪ್ರಿಲ್ 2021, 15:42 IST
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ‌ ಸಂಸ್ಥೆ
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ‌ ಸಂಸ್ಥೆ   

ಹುಬ್ಬಳ್ಳಿ: ಆರನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಮುಷ್ಕರ ನಡೆಸುತ್ತಿರುವ 26 ತರಬೇತಿ ಸಿಬ್ಬಂದಿಯನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ‌ ಸಂಸ್ಥೆ ಸೇವೆಯಿಂದ ವಜಾಗೊಳಿಸಿದೆ.

ಮುಷ್ಕರ ಆರಂಭದ ದಿನದಿಂದ ಮಂಗಳವಾರದವರೆಗೂ ಕರ್ತವ್ಯಕ್ಕೆ ಗೈರು ಹಾಜರಾಗಿರುವ ಗ್ರಾಮಾಂತರ ವಿಭಾಗದ ತರಬೇತಿ ಸಿಬ್ಬಂದಿಯನ್ನು ವಜಾ ಮಾಡಿರುವುದಾಗಿ ನೇಮಕಾತಿ ಪ್ರಾಧಿಕಾರದಸ್ಥರೂ ಆಗಿರುವ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಆದೇಶ ಹೊರಡಿಸಿದ್ದಾರೆ.

ಮುಷ್ಕರ ಕೈ ಬಿಟ್ಟು ಕೊಡಲೇ ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ ಸೇವೆಯಿಂದ ವಜಾ ಮಾಡುವುದಾಗಿ ತರಬೇತಿ ನೌಕರರಿಗೆ ನೋಟಿಸ್ ಮತ್ತು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಲಾಗಿತ್ತು. ಆದರೂ ಕೆಲಸಕ್ಕೆ ಹಾಜರಾಗದೇ ದೂರವೇ ಉಳಿದಿದ್ದರು. 15 ಚಾಲಕರು, ಎಂಟು ಚಾಲಕ/ ನಿರ್ವಾಹಕರು, ಇಬ್ಬರು ತಾಂತ್ರಿಕ ಸಿಬ್ಬಂದಿ ಮತ್ತು ಒಬ್ಬರು ಕಿರಿಯ ಸಹಾಯಕರನ್ನು ಸೇವೆಯಿಂದ ವಜಾ ಮಾಡಲಾಗಿದೆ.

ADVERTISEMENT

ವಜಾಗೊಂಡ ಸಿಬ್ಬಂದಿಯನ್ನು ಆಯ್ಕೆ ಪಟ್ಟಿಯಿಂದ ಕೂಡಲೆ ಜಾರಿಗೆ ಬರುವಂತೆ ತೆಗೆದು ಹಾಕಲಾಗಿದೆ. ಅಲ್ಲದೆ, ಈ ಸಿಬ್ಬಂದಿ ಸಂಸ್ಥೆಯಲ್ಲಿ ಕಾಯಂ ನೇಮಕಾತಿ ಹಕ್ಕನ್ನು ಸಹ ಶಾಶ್ವತವಾಗಿ ಕಳೆದುಕೊಂಡಿದ್ದಾರೆ ಎಂದು ರಾಮನಗೌಡರ ತಿಳಿಸಿದ್ದಾರೆ.

ಕರ್ತವ್ಯಕ್ಕೆ ಅಡ್ಡಿ; ಇಬ್ಬರು ಸಿಬ್ಬಂದಿ ಅಮಾನತು
ಗುರುವಾರ ಗ್ರಾಮಾಂತರ 2ನೇ ಘಟಕದ ಬಸ್ ಡಿಪೊದಿಂದ ಹಳೆ ಬಸ್ ನಿಲ್ದಾಣಕ್ಕೆ ಬಸ್ ಹೋಗುವಾಗ ಗೋಕುಲ ರಸ್ತೆಯಲ್ಲಿರುವ ಸಾರಿಗೆ ಸಂಸ್ಥೆಯ ಸಿಬ್ಬಂದಿ ವಸತಿ ಗೃಹಗಳ ಹತ್ತಿರ ಬಸ್ ತಡೆದು ಕರ್ತವ್ಯನಿರತ ಸಿಬ್ಬಂದಿ ಕೆಲಸಕ್ಕೆ ಅಡ್ಡಿಪಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಇಬ್ಬರು ಸಿಬ್ಬಂದಿಯನ್ನು ಅಮಾನತ್ಳಿ ಮಾಡಲಾಗಿದೆ.

ಪ್ರಕರಣ ದಾಖಲು: ಸೋಮವಾರ ಧಾರವಾಡದಿಂದ ಬಾಗಲಕೋಟೆಗೆ ಹೋಗುತ್ತಿದ್ದ ಬಸ್ ತಡೆದು ಕರ್ತವ್ಯನಿರತ ಚಾಲಕ- ನಿರ್ವಾಹಕರಿಗೆ ನಿಂದಿಸಿ, ಕೆಲಸಕ್ಕೆ ಅಡ್ಡಿಪಡಿಸಿದ ಪ್ರಕರಣ ಹಬ್ಬಳ್ಳಿ ಗ್ರಾಮಾಂತರ ವಿಭಾಗದ ವ್ಯಾಪ್ತಿಯ ಹೆಬಸೂರಿನಲ್ಲಿ ನಡೆದಿದೆ. ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌ ಇದರಲ್ಲಿ ಭಾಗಿಯಾಗಿರುವ ಸಂಸ್ಥೆಯ ಒಬ್ಬ ಸಿಬ್ಬಂದಿಯನ್ನು ಗುರುತಿಸಲಾಗಿದ್ದು, ಇತರರನ್ನು ಗುರುತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು‌ ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಅಗತ್ಯ ಸಾರಿಗೆ ಸೇವೆ ಕಲ್ಪಿಸುವುದಕ್ಕಾಗಿ ಸಂಚರಿಸುತ್ತಿರುವ ಬಸ್'ಗಳನ್ನು ಮಾರ್ಗ ಮಧ್ಯದಲ್ಲಿ ತಡೆಯುವುದಾಗಲಿ, ಕರ್ತವ್ಯನಿರತ ಸಾರಿಗೆ ಸಿಬ್ಬಂದಿ ಕೆಲಸಕ್ಕೆ ಅಡ್ಡಿಪಡಿಸುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ರಾಮನಗೌಡರ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.