ADVERTISEMENT

ಜಾನುವಾರಿಗೆ ಲಸಿಕೆ: ಉತ್ತಮ ಸ್ಪಂದನೆ

2030ರ ವೇಳೆಗೆ ರೋಗಮುಕ್ತಗೊಳಿಸುವ ಗುರಿ: ವರ್ಷಪೂರ್ತಿ ನಿರಂತರ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 5:10 IST
Last Updated 21 ಜೂನ್ 2025, 5:10 IST
ಧಾರವಾಡ ತಾಲ್ಲೂಕಿನ ಗರಗ ಗ್ರಾಮದಲ್ಲಿ ಹಸುವೊಂದಕ್ಕೆ ಲಸಿಕೆ ನೀಡಲಾಯಿತು
ಧಾರವಾಡ ತಾಲ್ಲೂಕಿನ ಗರಗ ಗ್ರಾಮದಲ್ಲಿ ಹಸುವೊಂದಕ್ಕೆ ಲಸಿಕೆ ನೀಡಲಾಯಿತು   

ಹುಬ್ಬಳ್ಳಿ: 2030ರ ವೇಳೆಗೆ ಜಾನುವಾರುಗಳನ್ನು ರೋಗಮುಕ್ತಗೊಳಿಸಲು ವಿವಿಧ ಲಸಿಕಾ ವಿತರಣೆ ಕಾರ್ಯಕ್ರಮ ವರ್ಷಪೂರ್ತಿ ಜರುಗುತ್ತಿದ್ದು, ಜಿಲ್ಲೆಯಲ್ಲಿ ಶೇ 95ರಷ್ಟು ಪೂರ್ಣಗೊಂಡಿದೆ.

ನಿರಂತರವಾಗಿ ಲಸಿಕೆ ನೀಡುವುದರಿಂದ ಜಾನುವಾರುಗಳಲ್ಲಿ ರೋಗ ತಡೆ ಸಾಧ್ಯವಿದೆ ಎಂಬುದು ತಜ್ಞರ ಅಭಿಮತ. ಹವಾಮಾನ ವೈಪರೀತ್ಯ, ರೋಗ–ಕೀಟ ಬಾಧೆ ಮೊದಲಾದ ಕಾರಣಗಳಿಂದ ಬೆಳೆಹಾನಿಯಾಗಿ, ನಷ್ಟಕ್ಕೀಡಾದ ರೈತರಿಗೆ ಜಾನುವಾರು ಸಾಕಣೆ ಜೀವನಾಧಾರವಾಗಿದೆ. ಅವುಗಳನ್ನು ರೋಗಗಳಿಂದ ಸಂರಕ್ಷಿಸಿ, ಆ ಮೂಲಕ ನಿರಂತರ ಆದಾಯ ಗಳಿಸುವುದು ಅತ್ಯವಶ್ಯ ಎಂಬುದು ರೈತರ ನುಡಿ.

‘ಪಶುಗಳಲ್ಲಿ ಕಾಣಿಸಿಕೊಳ್ಳುವ ಕಾಲು ಬಾಯಿ ಬೇನೆ ಸೇರಿದಂತೆ ವಿವಿಧ ರೋಗಗಳ ತಡೆಗೆ ಲಸಿಕೆ ನೀಡಿಕೆ ನಿರಂತರವಾಗಿ ಸಾಗಿದೆ. ಮೊದಲ ಹಂತದಲ್ಲಿ ಲಸಿಕೆ ನೀಡುವ ವೇಳೆ ಪಶುಗಳು ಅನಾರೋಗ್ಯದಿಂದ ಬಳಲುತ್ತಿದ್ದರೆ, ಗರ್ಭ ಧರಿಸಿದ್ದರೆ, 4 ತಿಂಗಳಿಗಿಂತ ಸಣ್ಣ ಕರುಗಳಿದ್ದರೆ, ಎರಡನೇ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ. ಜುಲೈ 6ರಿಂದ 26ರವರೆಗೆ ಈ ಅಭಿಯಾನ ನಡೆಯಲಿದೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿ ತಿಳಿಸಿದರು.

ADVERTISEMENT

ಪಶುಸಖಿ, ಮೈತ್ರಿ ಬಳಕೆ: ‘ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಪಶುವೈದ್ಯರೂ ಸೇರಿದಂತೆ ಸಿಬ್ಬಂದಿ ಕೊರತೆಯಿದೆ. ಇರುವಷ್ಟು ಸಿಬ್ಬಂದಿಯನ್ನೇ ಬಳಕೆ ಮಾಡಿಕೊಳ್ಳುವುದರ ಜೊತೆಗೆ ‘ಪಶುಸಖಿ’ ಮತ್ತು ‘ಮೈತ್ರಿ’ ಹೆಸರಿನಲ್ಲಿ ನಿರುದ್ಯೋಗಿ ಯುವಕರನ್ನು ನೇಮಿಸಿಕೊಂಡು, ಸೂಕ್ತ ತರಬೇತಿ ನೀಡಲಾಗುತ್ತಿದೆ. ಲಸಿಕೆ ನೀಡಿಕೆ ಸೇರಿದಂತೆ ವಿವಿಧ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

ಜಾನುವಾರುಗಳಿಗೆ ಲಸಿಕೆ ಕೊಡಿಸುವಲ್ಲಿ ರೈತರು ಜಾಗೃತರಾಗಿದ್ದಾರೆ. ಜಿಲ್ಲೆಯಲ್ಲಿರುವ ಜಾನುವಾರುಗಳಲ್ಲಿ ಸದ್ಯ ಯಾವುದೇ ರೋಗ ಪತ್ತೆಯಾಗಿಲ್ಲ.
– ಡಾ.ಸದಾಶಿವ ಉಪ್ಪಾರ್‌, ಪಶುಪಾಲನಾ ಇಲಾಖೆ ಉಪನಿರ್ದೇಶಕ
ಐದು ಹಸು ಸಾಕಿರುವೆ. ಹಾಲನ್ನು ಡೇರಿಗೆ ಹಾಕುತ್ತೇನೆ. ಇಲಾಖೆಯು ಲಸಿಕೆ ಹಾಕುವುದರಿಂದ ಹಸುಗಳು ಆರೋಗ್ಯದಿಂದ ಇವೆ.
– ಶೇಖಪ್ಪ ಮನಗುಂಡಿ, ರೈತ ಗಾಮನಗಟ್ಟಿ

‘ರಫ್ತಾದರೆ ಉತ್ತಮ ಆದಾಯ’

‘ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆಯು (ಡಬ್ಲ್ಯುಒಎಎಚ್‌) ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ರೋಗಗಳನ್ನು ಗುರುತು ಮಾಡಿದೆ. ಈ ರೋಗಗಳು ಜಾನುವಾರುಗಳಲ್ಲಿ ಇದ್ದರೆ ಅವುಗಳ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಲು ಸಾಧ್ಯವಿಲ್ಲ. ಜಾನುವಾರುಗಳನ್ನು ರೋಗಮುಕ್ತಗೊಳಿಸಲೆಂದೇ 2030ರ ಗುರಿ ಇಟ್ಟುಕೊಳ್ಳಲಾಗಿದೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿ ತಿಳಿಸಿದರು.

‘ಜಾನುವಾರುಗಳ ರಕ್ತದ ಮಾದರಿ ಪರೀಕ್ಷಿಸಿ ಅವುಗಳಲ್ಲಿನ ರೋಗ ನಿರೋಧಕ ಶಕ್ತಿ ತಪಾಸಣೆ ಮಾಡಲಾಗುತ್ತದೆ. ಅದನ್ನು ಆಧರಿಸಿ ರೋಗಮುಕ್ತವೆಂದು ಘೋಷಿಸಲಾಗುತ್ತದೆ. ಆ ನಂತರ ಹಾಲು ಮಾಂಸ ವಾಣಿಜ್ಯ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಬಹುದು. ಇದರಿಂದ ರೈತರು ಪಶು ಸಾಕಣೆದಾರರು ಡಾಲರ್‌ ಲೆಕ್ಕದಲ್ಲಿ ಹೆಚ್ಚಿನ ಆದಾಯ ಗಳಿಸಬಹುದು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.