ADVERTISEMENT

ಹುಬ್ಬಳ್ಳಿ | ಏಕತಾ ಸಮಾವೇಶ; ಸಕಲ ಸಿದ್ಧತೆ

ಮಧ್ಯಾಹ್ನ 3 ಗಂಟೆಗೆ ಸಮಾವೇಶ ಆರಂಭ: ಅಗತ್ಯ ಭದ್ರತೆ, ವಾಹನಗಳ ನಿಲುಗಡೆಗೆ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 5:08 IST
Last Updated 19 ಸೆಪ್ಟೆಂಬರ್ 2025, 5:08 IST
ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಶುಕ್ರವಾರ ನಡೆಯಲಿರುವ ವೀರಶೈವ ಲಿಂಗಾಯತ ಏಕತಾ ಸಮಾವೇಶಕ್ಕೆ ನಿರ್ಮಿಸಿರುವ ಬೃಹತ್ ವೇದಿಕೆ
ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಶುಕ್ರವಾರ ನಡೆಯಲಿರುವ ವೀರಶೈವ ಲಿಂಗಾಯತ ಏಕತಾ ಸಮಾವೇಶಕ್ಕೆ ನಿರ್ಮಿಸಿರುವ ಬೃಹತ್ ವೇದಿಕೆ   

ಹುಬ್ಬಳ್ಳಿ: ಇಲ್ಲಿನ ನೆಹರೂ ಮೈದಾನದಲ್ಲಿ ಶುಕ್ರವಾರ ನಡೆಯಲಿರುವ ವೀರಶೈವ ಲಿಂಗಾಯತ ಏಕತಾ ಸಮಾವೇಶಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅಂತಿಮ ಹಂತದ ಸಿದ್ಧತೆಗಳನ್ನು ಗುರುವಾರ ಪರಿಶೀಲಿಸಿದರು.

ಸಮಾವೇಶಕ್ಕೆ ಬರುವ ಸಾರ್ವಜನಿಕರಿಗಾಗಿ ಮೈದಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆಗೆ ಸಮಾವೇಶ ಆರಂಭವಾಗಲಿದ್ದು, ಅದಕ್ಕೂ ಮುನ್ನ ಮೂರು ಸಾವಿರ ಮಠದಿಂದ ನೆಹರೂ ಮೈದಾನದವರೆಗೆ ಸ್ವಾಮೀಜಿಗಳ ಪಾದಯಾತ್ರೆ ನಡೆಯಲಿದೆ  ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

‘ಎಲ್ಲ ಪಕ್ಷಗಳಲ್ಲಿರುವ ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳ ನಾಯಕರಿಗೆ ಸಾಮೂಹಿಕವಾಗಿ ಆಹ್ವಾನ ನೀಡಲಾಗಿದೆ. ಸಮಾವೇಶದಲ್ಲಿ ನಾಳೆ ತೆಗೆದುಕೊಳ್ಳುವ ನಿರ್ಣಯ ಸಮಾಜವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ. ರಾಜ್ಯದ ಬಹುದೊಡ್ಡ ಸಮಾಜವನ್ನು ಸಂಘಟನೆ ಮಾಡಲು ಹೊರಟಾಗ ಸಣ್ಣಪುಟ್ಟ ನಿಂದೆ, ಟೀಕೆ, ಅಪವಾದ ಸಹ. ಅದನ್ನು ನಿಭಾಯಿಸುವ ತಾಳ್ಮೆ ನಮಗಿದೆ’ ಎಂದು ಹೇಳಿದರು. 

ADVERTISEMENT

‘ಪಂಚಮಸಾಲಿ ಸಮಾಜದ ಸ್ವಾಮೀಜಿಗಳು ಸಮಾಜವನ್ನು ಒಂದು ಮಾಡುತ್ತಿದ್ದಾರೆ. ನಾವು ಅದನ್ನೇ ಮಾಡುತ್ತಿದ್ದೇವೆ. ಒಂದು ಜಾತಿಯಿಂದ ಏನೂ ಸಾಧಿಸಲು ಸಾಧ್ಯವಿಲ್ಲ. ಪಂಚಮಸಾಲಿ ಸೇರಿ ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡದವರು ಸಮಾವೇಶದ ನಂತರ ಒಂದಾಗುತ್ತೇವೆ. ಸಮಾಜದಲ್ಲಿ ಗಟ್ಟಿತನ ತರುತ್ತೇವೆ. ವಿಚಾರ ಭೇದ ಇದ್ದರೂ ಎಲ್ಲರೂ ಒಂದೇ’ ಎಂದರು.

ಪಾರ್ಕಿಂಗ್ ವ್ಯವಸ್ಥೆ: ಸಮಾವೇಶಕ್ಕೆ ಬರುವವರ ವಾಹನಗಳ ನಿಲುಗಡೆಗೆ ನಗರದ ವಿವಿಧೆಡೆ ವ್ಯವಸ್ಥೆ ಮಾಡಲಾಗಿದೆ. ಜೆ.ಸಿ.ನಗರದ ಮಹಿಳಾ ಕಾಲೇಜು ಬಳಿ, ಜೆಎಸ್‌ಡಬ್ಲ್ಯು ಸಿಮೆಂಟ್ ಗೋಡೌನ್‌ ಬಳಿ ವಿಐಪಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಗದಗ ರಸ್ತೆ, ನವಲಗುಂದ ಕಡೆಯಿಂದ ಬರುವ ವಾಹನಗಳು ಚಿಟಗುಪ್ಪಿ ಆಸ್ಪತ್ರೆ ಸರ್ಕಲ್‌ನಲ್ಲಿ ಜನರನ್ನು ಇಳಿಸಿ ವಿಕಾಸ ನಗರದ ಎಂಟಿಎಸ್ ಕಾಲೊನಿಯ ಮೈದಾನದಲ್ಲಿ ವಾಹನ ನಿಲುಗಡೆ ಮಾಡಬಹುದಾಗಿದೆ. 

ಕಾರವಾರ ರಸ್ತೆ, ಪಿಬಿ ರಸ್ತೆ, ಗೋಕುಲ ರಸ್ತೆ ಮತ್ತು ಧಾರವಾಡದಿಂದ ಕಡೆಯಿಂದ ಬರುವ ವಾಹನಗಳಿಗೆ ಗದಗ ರಸ್ತೆಯ ರೈಲ್ವೆ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.