ಹುಬ್ಬಳ್ಳಿ: ‘ಪಂಚ ಪೀಠಾಧೀಶರ ವಿರುದ್ಧ ಸೇಡು ತೀರಿಸಿಕೊಳ್ಳುವ ಭರದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಎಸ್.ಎಂ.ಜಾಮದಾರ ಅವರು ಸಮಾಜವನ್ನು ಬಲಿ ಕೊಡಬಾರದು’ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
‘ಸಮಾಜಕ್ಕೆ ಸಂಬಂಧಿಸಿ ಜಾಮದಾರ ಅವರು ಪಂಚಾಚಾರ್ಯರಿಗೆ ಸವಾಲು ಹಾಕಬೇಕೆ ಹೊರತು ನಮಗಲ್ಲ. ಸಮಾಜದ ಸಂಘಟನೆಗಷ್ಟೇ ಹುಬ್ಬಳ್ಳಿಯಲ್ಲಿ ವೀರಶೈವ–ಲಿಂಗಾಯತ ಏಕತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
‘ಪಂಚ ಪೀಠದವರಿಗಷ್ಟೇ ಅಲ್ಲ, ಎಲ್ಲ ಮಠಗಳಿಗೆ ಆಮಂತ್ರಿಸಿದಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಕ್ಕೂ ಕೋರಿದ್ದು, ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಎಲ್ಲರೂ ಒಂದಾಗಲು ಕೆಲ ನಿಯಮ ಸಡಿಲಿಸಿಕೊಳ್ಳಬೇಕು. ಪ್ರತ್ಯೇಕ ಲಿಂಗಾಯತ ಧರ್ಮ ಕೇಳುತ್ತಿರುವವರು ಅದಕ್ಕೆ ಸಿದ್ಧರಿಲ್ಲ. ಅವರ ಷರತ್ತುಗಳು ಸಂಘಟನೆಗೆ ಪೂರಕವಾಗಿಲ್ಲ’ ಎಂದು ಅಭಿಪ್ರಾಯಪಟ್ಟರು.
‘ಗುರು–ವಿರಕ್ತ, ಬಸವಣ್ಣ–ರೇಣುಕ ಎಂಬ ಭಿನ್ನಾಭಿಪ್ರಾಯದಿಂದ ಸಮಾಜ ಹಾಳಾಗಿದೆ. ಕೊರಳಲ್ಲಿ ಲಿಂಗ ಕಟ್ಟಿಕೊಂಡು ಪೂಜೆ ಮಾಡುವ ಯಾವುದೇ ಸಮಾಜ, ಯಾವುದೇ ಸಂಪ್ರದಾಯದವರು ಈ ಸಮಾವೇಶದಲ್ಲಿ ಭಾಗವಹಿಸಬಹುದು’ ಎಂದು ಹೇಳಿದರು.
‘ಜಾತಿ ಸಮೀಕ್ಷೆಯಲ್ಲಿ ಏನು ನಮೂದಿಸಬೇಕು ಎಂದು ವೀರಶೈವ ಲಿಂಗಾಯತ ಮಹಾಸಭಾ ನಿರ್ಣಯ ತೆಗೆದುಕೊಳ್ಳಲಿದೆ. ಮಹಾಸಭಾ ಯಾವುದೇ ಪಕ್ಷ, ಮುಖಂಡರ ಅಧೀನದಲ್ಲಿ ಇಲ್ಲ. ಎಲ್ಲರೂ ತಮ್ಮ ಅಭಿಪ್ರಾಯವನ್ನು ಮಹಾಸಭಾಗೆ ನೀಡಬೇಕು’ ಎಂದರು.
‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೊಡಿಸುವಂತೆ ಕೋರಲು ದಿಂಗಾಲೇಶ್ವರ ಸ್ವಾಮೀಜಿ ಮಠಕ್ಕೆ ಬಂದಿದ್ದರು’ ಎಂಬ ವಚನಾನಂದ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಟಿಕೆಟ್‌ಗಳನ್ನು ಅವರ ಮಠದಲ್ಲಿ ಮಾರಾಟಕ್ಕೆ ಇಟ್ಟಿದ್ದಾರೆಯೇ?’ ಎಂದು ಪ್ರಶ್ನಿಸಿದರು.
‘ಪಕ್ಷದ ಟಿಕೆಟ್ ಅನ್ನು ಅವರ ಬಳಿ ಕೇಳುವ ಪ್ರಸಂಗ ಯಾರಿಗೂ ಬರಲಿಕ್ಕಿಲ್ಲ. ಅವರ ವಿನಂತಿಯಂತೆ ಮಠಕ್ಕೆ ಹೋಗಿ ಪೂಜೆ, ಪ್ರಸಾದ ಮಾಡಿ ಬಂದಿದ್ದೆ. ಉಳಿದಿದ್ದು ಅವರ ವಿವೇಚನೆಗೆ ಬಿಟ್ಟಿದ್ದು. ಸದ್ಯಕ್ಕೆ ಆ ವಿಚಾರದ ಚರ್ಚೆ ಬೇಡ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.