
ಧಾರವಾಡ: ‘ಮಹಾಯೋಗಿ ವೇಮನ ಅವರ ಜೀವನ ಸಾಧನೆಯನ್ನು ಜಗತ್ತಿಗೆ ಪರಿಚಯಿಸುವ ಕೆಲಸವನ್ನು ಕರ್ನಾಟಕ ವಿಶ್ವವಿದ್ಯಾಲಯದ ವೇಮನ ಪೀಠದವರು ಮಾಡಬೇಕು’ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾಯೋಗಿ ವೇಮನ ಪಿಠದ ವತಿಯಿಂದ ಸೋಮವಾರ ಆಲೂರು ವೆಂಕಟರಾವ್ ಭವನದಲ್ಲಿ ನಡೆದ ಮಹಾಯೋಗಿ ವೇಮನ ಜಯಂತ್ಯುತ್ಸವದಲ್ಲಿ ಮಾತನಾಡಿದರು.
‘ವೇಮನ ಸಾಹಿತ್ಯ ಸೃಷ್ಟಿ ಮತ್ತು ಪ್ರಚಾರದ ಕೆಲಸ ಆಗಬೇಕು. ವೇಮನ ಪೀಠದಿಂದ ಈಗ 40 ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಇನ್ನು ಎರಡು ವರ್ಷದಲ್ಲಿ ಒಟ್ಟು 100 ಪುಸ್ತಕಗಳನ್ನು ಪ್ರಕಟಿಸಿ, ಸಾರಸ್ವತ ಲೋಕಕ್ಕೆ ಕೊಡುಗೆ ನೀಡಬೇಕು. ವೇಮನ ಅವರ ಜೀವನ ಚರಿತ್ರೆಯ ಸಿನಿಮಾವನ್ನು ಎಲ್ಲರಿಗೂ ತೋರಿಸಬೇಕು’ ಎಂದು ಸಲಹೆ ನೀಡಿದರು.
‘ದಾನಿಗಳ ನೆರವಿನಲ್ಲಿ ವೇಮನ ಪೀಠದಿಂದ ಪ್ರಕಟಿಸಿರುವ ಪುಸ್ತಕಗಳ ಒಟ್ಟು 20 ಸಾವಿರ ಪ್ರತಿಗಳನ್ನು ಮುದ್ರಿಸಿರುವುದು ಶ್ಲಾಘನೀಯ. ಅವುಗಳನ್ನು 20 ಸಾವಿರ ಓದುಗರಿಗೆ ತಲುಪಿಸಬೇಕು. ವೇಮನ ಅವರ ವಿಚಾರಗಳು ಜನರಿಗೆ ತಲುಪಬೇಕು’ ಎಂದರು.
‘ವೇಮನ ಅವರು ಪೌರೋಹಿತ್ಯಶಾಹಿ ವಿರುದ್ಧ ಸಿಡಿದೆದ್ದ ಕ್ರಾಂತಿಕಾರಿ. ಮಾನವೀಯ ಮೌಲ್ಯಗಳ ಮೂಲಕ ಶ್ರೇಷ್ಠತೆಯನ್ನು ಸಾರಿದವರು. ಅವರ ತತ್ವಗಳನ್ನು ಅರ್ಥ ಮಾಡಿಕೊಳ್ಳಬೇಕು. ಸಹಬಾಳ್ವೆ ಅವರ ಸಂದೇಶ. ಅವರ ವಿಚಾರಧಾರೆಗಳನ್ನು ಓದುವುದರಿಂದ ಜ್ಞಾನ ಕ್ಷಿತಿಜ ವಿಸ್ತಾರವಾಗುತ್ತದೆ’ ಎಂದರು.
‘ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಸರ್ವಜ್ಞ ಮುಂತಾದವರ ವಚನಗಳ ಕುರಿತು ಭಾಷಣ ಮಾಡುತ್ತೇವೆ. ಅದರ ಅವುಗಳನ್ನು ಬದುಕಿನಲ್ಲಿ ಪಾಲಿಸುತ್ತಿಲ್ಲ. ಮಹನೀಯರ ಸಂದೇಶ, ವಚನಗಳಂತೆ ನಡೆದುಕೊಳ್ಳಬೇಕು’ ಎಂದರು.
ಮಹಾಯೋಗಿ ವೇಮನ ಪೀಠದ ಸಂಯೋಜಕ ಎಚ್.ಬಿ.ನೀಲಗುಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಡ್ಡಿ ಸಮೂಹ ಶಿಕ್ಷಣ ಸಂಸ್ಥೆ ಪ್ರಾಚಾರ್ಯೆ ಶಶಿಕಕಲಾ ಶಂಕರ ಬಸವರಡ್ಡಿ ಅವರು ಉಪನ್ಯಾಸ ನೀಡಿದರು.
ಮಹಾಯೋಗಿ ವೇಮನ ಪೀಠದ 15 ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಮುಖಂಡರಾದ ವಿ.ಡಿ.ಕಾಮರೆಡ್ಡಿ, ಕೆ.ಎಲ್.ಪಾಟೀಲ, ರಮೇಶ ಜಂಗಲ್, ಅಜ್ಜಣ್ಣ ಅಳಗವಾಡಿ, ವೆಂಕಣ್ಣ ಹನುಮರಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಪಾಲ್ಗೊಂಡಿದ್ದರು.
ವೇಮನ ಪೀಠದ 15 ಪುಸ್ತಕ ಬಿಡುಗಡೆ ಮಹನೀಯರ ವಚನ, ಸಂದೇಶ ಪಾಲಿಸಲು ಸಲಹೆ ಪೀಠದಿಂದ 40 ಪುಸ್ತಕ ಪ್ರಕಟಣೆಗೆ ಶ್ಲಾಘನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.