ಧಾರವಾಡ: ‘ವಿಶ್ವಕರ್ಮ ಸಮಾಜದವರು ಜಾತಿಗಣತಿ ಸಂದರ್ಭದಲ್ಲಿ ಜಾತಿ ಕಾಲಂನಲ್ಲಿ ಉಪಜಾತಿಗಳ ಹೆಸರು ನಮೂದಿಸದೆ ವಿಶ್ವಕರ್ಮ ಎಂದು ಬರೆಸಬೇಕು’ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ವಿಶ್ವಕರ್ಮ ಸಮಾಜದಲ್ಲಿ 40 ಉಪಜಾತಿಗಳು ಇವೆ. ಪಂಚ ಕುಲಕಸುಬುಗಳನ್ನು ಮಾಡುವರೆಲ್ಲರೂ ವಿಶ್ವಕರ್ಮರು. ಗಣತಿಯಲ್ಲಿ ಉಪಜಾತಿಗಳನ್ನು ನಮೂದಿಸಬಾರದು’ ಎಂದರು.
‘ರಾಜ್ಯ ಸರ್ಕಾರವು ಜಾತಿಗಣತಿ ಮರು ಸಮೀಕ್ಷೆ ನಡೆಸಲು ಮುಂದಾಗಿದೆ. ಎಲ್ಲ ಸಮಾಜದವರು ಜಾಗೃತರಾಗಿದ್ದು, ನಮ್ಮ ಸಮಾಜದವರು ಜಾಗೃತರಾಗಬೇಕು. ಅಂಕಿ–ಅಂಶದಲ್ಲಿಯೂ ನಿರ್ಲಕ್ಷ್ಯಕ್ಕೆ ಒಳಗಾದರೆ ಸವಲತ್ತು ಸಿಗುವುದಿಲ್ಲ’ ಎಂದರು.
‘ರಾಜ್ಯದಲ್ಲಿ ವಿಶ್ವಕರ್ಮ ಸಮಾಜದವರ ಜನಸಂಖ್ಯೆ 30 ಲಕ್ಷ ಇದೆ. ಆದರೆ, ಎಚ್.ಕಾಂತರಾಜು ಆಯೋಗವು 9 ಲಕ್ಷ ಇದೆ ಎಂದು ವರದಿ ನೀಡಿದೆ. ಈ ಸಮೀಕ್ಷೆ ಸರಿಯಾಗಿಲ್ಲ. ಇದನ್ನು ಎಲ್ಲ ಸಮಾಜದವರು ವಿರೋಧಿಸಿದ್ದಾರೆ’ ಎಂದರು.
ಏಕದಂಡಗಿಮಠದ ದೊಡ್ಡೇಂದ್ರ ಸ್ವಾಮೀಜಿ, ಪ್ರಣವನಿರಂಜನ ಸ್ವಾಮೀಜಿ, ಗಣೇಶ್ವರ ಸ್ವಾಮೀಜಿ, ಮೌನೇಶ್ವರ ಸ್ವಾಮೀಜಿ, ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಕಾಳಪ್ಪ ಬಡಿಗೇರ, ವಿಠ್ಠಲ ಕಮ್ಮಾರ, ಶ್ರೀಶೈಲ ಸುತಾರ ಇದ್ದರು.
ಜಾತಿ ಗಣತಿ ವೇಳೆ ಅಧಿಕಾರಿಗಳಿಗೆ ಗೊಂದಲವಾಗದಿರಲಿ ಎಂದು ರಾಜ್ಯದಾದ್ಯಂತ ವಿಶ್ವಕರ್ಮ ಸಮಾಜದವರ ಮನೆ ಬಾಗಿಲಗೆ ‘ವಿಶ್ವಕರ್ಮರ ಮನೆ’ ಲೇಬಲ್ ಅಂಟಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆಕೆ.ಪಿ.ನಂಜುಂಡಿ ಅಧ್ಯಕ್ಷ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.