ADVERTISEMENT

ರಾಷ್ಟ್ರದೇವೋಭವ ಸಂದೇಶ ಸಾರಿದ ವಿಶ್ವೇಶತೀರ್ಥರು: ವಿಶ್ವಪ್ರಸನ್ನತೀರ್ಥ ಸಾಮೀಜಿ

ಅಭಿನಂದನಾ ಸಮಾರಂಭದಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸಾಮೀಜಿ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 2:10 IST
Last Updated 25 ನವೆಂಬರ್ 2021, 2:10 IST
ಪೇಜಾವರ ಮಠದ ಹಿಂದಿನ ಶ್ರೀಗಳಾದ ವಿಶ್ವೇಶತೀರ್ಥರಿಗೆ ‘ಪದ್ಮವಿಭೂಷಣ’ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯಲ್ಲಿ ಬುಧವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಗುರೂಜಿ ಕೃಷ್ಣ ಸಂಪಗಾಂವಕರ ಇದ್ದಾರೆ
ಪೇಜಾವರ ಮಠದ ಹಿಂದಿನ ಶ್ರೀಗಳಾದ ವಿಶ್ವೇಶತೀರ್ಥರಿಗೆ ‘ಪದ್ಮವಿಭೂಷಣ’ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯಲ್ಲಿ ಬುಧವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಗುರೂಜಿ ಕೃಷ್ಣ ಸಂಪಗಾಂವಕರ ಇದ್ದಾರೆ   

ಹುಬ್ಬಳ್ಳಿ: ‘ವಿಶ್ವೇಶತೀರ್ಥರು ರಾಷ್ಟ್ರದೇವೋಭವ ಸಂದೇಶ ಸಾರಿದ ಮಹಾನ್ ಸಂತ. ಶ್ರೀಗಳು ಧಾರ್ಮಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯಷ್ಟೇ ಅಲ್ಲದೆ, ಅವರ ಒಟ್ಟಾರೆ ವ್ಯಕ್ತಿಗತ ಗುಣವನ್ನು ಗುರುತಿಸಿ ಕೇಂದ್ರ ಸರ್ಕಾರ ಅವರಿಗೆ ‘ಪದ್ಮವಿಭೂಷಣ’ ಗೌರವ ನೀಡಿರುವುದು ಹೆಮ್ಮೆಯ ವಿಷಯ’ ಎಂದುಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸಾಮೀಜಿ ಹೇಳಿದರು.

ಮಠದ ಹಿಂದಿನ ಶ್ರೀಗಳಾದ ವಿಶ್ವೇಶತೀರ್ಥರಿಗೆ ಮರಣೋತ್ತರ ‘ಪದ್ಮವಿಭೂಷಣ’ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ,ಅಖಿಲ ಭಾರತ ಮಾಧ್ವ ಮಹಾಮಂಡಳ ಹಾಗೂ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಸಹಯೋಗದಲ್ಲಿದೇಶಪಾಂಡೆ ನಗರದ ಕೃಷ್ಣ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಿಶ್ವೇಶತೀರ್ಥರು ವಿಶ್ವಮಾನ್ಯರು. ದೇಶಭಕ್ತಿ ಮತ್ತು ದೈವಭಕ್ತಿ ಬೇರೆಯಲ್ಲ ಎಂದು ಪ್ರತಿಪಾದಿಸಿರುವ ಅವರು ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎಂಬ ಸಂದೇಶದೊಂದಿಗೆ ರಾಷ್ಟ್ರದೇವೋಭವ ಸಂದೇಶವನ್ನು ಕೊಟ್ಟಿದ್ದಾರೆ. ಜನಸೇವೆಯಲ್ಲಿ ಕೃಷ್ಣನನ್ನು ಕಾಣುತ್ತಿದ್ದ ಅವರು, ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು. ಎಲ್ಲರೂ ನಮ್ಮವರು ಎಂದು ಭಾವಿಸಿ ಜೀವಿಸಿದರು. ನಮ್ಮಿಂದ ಯಾರಿಗೂ ನೋವಾಗಬಾರದು. ಆ ರೀತಿ ಬದುಕುವುದೇ ದೇಶಕ್ಕೆ ನಾವು ಮಾಡುವ ದೊಡ್ಡ ಸೇವೆ ಎಂದು ನಂಬಿದ್ದರು’ ಎಂದು ಬಣ್ಣಿಸಿದರು.

ADVERTISEMENT

ಗುರೂಜಿ ಕೃಷ್ಣ ಸಂಪಗಾಂವಕರ ಮಾತನಾಡಿ, ‘ಸರಳ ಮೂರ್ತಿಯಾಗಿದ್ದ ವಿಶ್ವೇಶತೀರ್ಥರು ತಮಗಾಗಿ ಬದುಕದೇ ಇತರರಿಗಾಗಿ ಬದುಕಿದರು. ಇದೇ ಕಾರಣಕ್ಕೆ ಅವರನ್ನು ಇಡೀ ದೇಶ ಗೌರವಿಸಿ, ಸ್ಮರಿಸುತ್ತಿದೆ’ ಎಂದರು.

ಮಹಾಮಂಡಳದ ಕಾರ್ಯದರ್ಶಿ ಶ್ರೀಪಾದ ಸಿಂಗನಮಲ್ಲಿ ಮಾತನಾಡಿ, ‘ಜನವರಿಯಲ್ಲಿ ಅಖಿಲ ಭಾರತ ಮಾಧ್ವ ಸಮ್ಮೇಳನ ಹುಬ್ಬಳ್ಳಿಯಲ್ಲಿ ಜರುಗಲಿದೆ. ಇದರ ಅಂಗವಾಗಿ ಅಖಿಲ ಭಾರತ ಸಂತ ಸಮಾವೇಶ ಹಾಗೂ ವಿಶ್ವೇಶತೀರ್ಥರ ಆರಾಧನ ಮಹೋತ್ಸವ ಆಯೋಜಿಸಲು ನಿರ್ಧರಿಸಲಾಗಿದೆ. ಇದಕ್ಕೆ ಅಂದಾಜು ₹40 ಲಕ್ಷ ವೆಚ್ಚವಾಗಲಿದ್ದು, ಸಾರ್ವಜನಿಕರು ದೇಣಿಗೆ ನೀಡಿ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಶೋಭಾಯಾತ್ರೆ ಮೂಲಕ ಪೇಜಾವರ ಶ್ರೀಗಳಿಗೆ ನೀಡಿದ ‘ಪದ್ಮವಿಭೂಷಣ’ ಪ್ರಶಸ್ತಿಯನ್ನು ಮೆರವಣಿಗೆಯಲ್ಲಿ ಕಲ್ಯಾಣ ಮಂಟಪಕ್ಕೆ ತರಲಾಯಿತು.ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ್, ಬದರಿ ಆಚಾರ್ಯ, ಅನಂತರಾಜ ಭಟ್, ಕೃಷ್ಣರಾಜ ಕೆಮ್ತೂರ, ಶ್ರೀಕಾಂತ ಕೆಮ್ತೂರ, ಎ.ಸಿ. ಗೋಪಾಲ, ಡಾ. ಎಚ್. ನಾಡಗೌಡ, ವಿನಾಯಕ ಆಕಳವಾಡಿ, ಸತ್ಯಮೂರ್ತಿ ಆಚಾರ್ಯ, ವಸಂತ ನಾಡಜೋಶಿ, ರಾಘವೇಂದ್ರ ನಂಜನಗೂಡ, ಗೋಪಾಲ ಕುಲಕರ್ಣಿ, ಶ್ರೀಧರ ವಿ.ಎನ್. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.