ADVERTISEMENT

ಹುಬ್ಬಳ್ಳಿ | ಸಮಸ್ಯೆ ನಿವಾರಣೆ; ಸೌಲಭ್ಯಗಳ ನಿರೀಕ್ಷೆ

ಕೊಳೆಗೇರಿಯಿಂದ ಕೂಡಿದ ಬಡಾವಣೆಯಲ್ಲಿ ಒಳಚರಂಡಿ ಸೌಲಭ್ಯ

ನಾಗರಾಜ ಚಿನಗುಂಡಿ
Published 25 ಜುಲೈ 2025, 5:03 IST
Last Updated 25 ಜುಲೈ 2025, 5:03 IST
ಹುಬ್ಬಳ್ಳಿಯ ವಾರ್ಡ್‌ ಸಂಖ್ಯೆ 80ರ ವ್ಯಾಪ್ತಿಯ ಗಿರಿಯಾಲ ಮಾರ್ಗದ ರಸ್ತೆ ಪಕ್ಕದಲ್ಲಿ ಗುರುವಾರ ಜೆಸಿಬಿಯಿಂದ ಚರಂಡಿ ಸ್ವಚ್ಛತಾ ಕಾರ್ಯ ಮಾಡಲಾಯಿತು
ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿಯ ವಾರ್ಡ್‌ ಸಂಖ್ಯೆ 80ರ ವ್ಯಾಪ್ತಿಯ ಗಿರಿಯಾಲ ಮಾರ್ಗದ ರಸ್ತೆ ಪಕ್ಕದಲ್ಲಿ ಗುರುವಾರ ಜೆಸಿಬಿಯಿಂದ ಚರಂಡಿ ಸ್ವಚ್ಛತಾ ಕಾರ್ಯ ಮಾಡಲಾಯಿತು ಪ್ರಜಾವಾಣಿ ಚಿತ್ರ: ಗುರು ಹಬೀಬ   

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಭಾಗವಾಗಿರುವ ನೇಕಾರ ನಗರವು 2021ರಲ್ಲಿ ಪ್ರತ್ಯೇಕ ವಾರ್ಡ್‌ (ಸಂಖ್ಯೆ 80) ಎಂದು ರಚನೆಯಾಗಿದೆ. ಶೇ 80ರಷ್ಟು ಕೊಳೆಗೇರಿಯಿಂದ ಕೂಡಿರುವ ಈ ವಾರ್ಡ್‌ನಲ್ಲಿ ಸೌಲಭ್ಯಗಳ ಕೊರತೆ ಇತ್ತು. ಸದ್ಯಕ್ಕೆ ಅವು ಹಂತಹಂತವಾಗಿ ನಿವಾರಣೆ ಆಗುತ್ತಿವೆ.

ಹುಬ್ಬಳ್ಳಿ–ಧಾರವಾಡ ಬೈಪಾಸ್‌ ಹೆದ್ದಾರಿಯ ಹೊರಗಿರುವ ಈ ವಾರ್ಡ್‌ನಲ್ಲಿ 5 ವರ್ಷಗಳ ಹಿಂದೆ ಬರೀ ಕಚ್ಚಾ ರಸ್ತೆಗಳಿದ್ದವು. ಮಳೆಗಾಲದಲ್ಲಿ ಇಡೀ ಬಡಾವಣೆ ಗದ್ದೆಯಂತಿತ್ತು. ಜನರು ಮತ್ತು ವಾಹನಗಳ ಸಂಚಾರ ದುಸ್ತರ ಆಗಿತ್ತು. ಇದೀಗ ವಾರ್ಡ್‌ನ ನೋಟ ಬದಲಾಗುತ್ತಿದೆ. 

ಛಬ್ಬಿ ಪ್ಲಾಟ್‌, ಚವಾಣ ಪ್ಲಾಟ್‌ ಹಾಗೂ ಹೊಸದಾಗಿ ತಲೆ ಎತ್ತಿರುವ ಬಾಲಾಜಿ ಕಾಲೊನಿಯಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಬಾಕಿ ಇದೆ. ಪಾಲಿಕೆ ಅನುದಾನದಡಿ ವಾರ್ಡ್‌ ವ್ಯಾಪ್ತಿಯ ಎಲ್ಲ ಕಡೆಗಳಲ್ಲೂ ಒಳಚರಂಡಿ ಸೌಲಭ್ಯ ಕಲ್ಪಿಸಲಾಗಿದೆ. 

ADVERTISEMENT

ಮಹಾನಗರ ಪಾಲಿಕೆ ಸದಸ್ಯೆ ಶಾಂತಾ ಹಿರೇಮಠ ಅವರು ಹೇಳುವ ಪ್ರಕಾರ, ‘ವಾರ್ಡ್‌ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳು ಬಹಳಷ್ಟಿವೆ. ಹುಬ್ಬಳ್ಳಿ ಹೊರವಲಯದ ವಾರ್ಡ್‌ ಆಗಿರುವುದರಿಂದ ಹೊಸ ಮನೆಗಳು ತಲೆ ಎತ್ತುತ್ತಿವೆ. ದಿನಗೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜನರು ಉದ್ಯೋಗಕ್ಕಾಗಿ ವಲಸೆ ಹೋಗುವುದು ಮತ್ತು ಹೊರಗಿನಿಂದ ವಲಸೆ ಬರುವುದು ಸಾಮಾನ್ಯವಾಗಿದೆ. ಎಲ್ಲ ಕಡೆಯಲ್ಲೂ ರಸ್ತೆ, ಚರಂಡಿ, ವಿದ್ಯುತ್‌ ಹಾಗೂ ಒಳಚರಂಡಿ ಸೌಲಭ್ಯ ಕಲ್ಪಿಸುವುದಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದೇವೆ’ ಎಂದರು.

ವಾರ್ಡ್‌ ವ್ಯಾಪ್ತಿಯಲ್ಲಿ ಸುಮಾರು 4 ಕಿ.ಮೀ.ನಷ್ಟು ರಾಜಕಾಲುವೆ ಇದೆ. ರಾಜಕಾಲುವೆ ಸಮರ್ಪಕವಾಗಿ ನಿರ್ಮಿಸಲು ₹42 ಲಕ್ಷ ಮೊತ್ತದ ಕಾಮಗಾರಿ ಪ್ರಗತಿಯಲ್ಲಿದೆ. ತಲಾ ₹42 ಲಕ್ಷ ಮೊತ್ತದ ಇನ್ನೂ ಎರಡು ನಾಲಾ ಕಾಮಗಾರಿಗಳಿಗೆ ಟೆಂಡರ್‌ ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಿದರು.

ವಾರ್ಡ್‌ ಸಮಸ್ಯೆಗಳು: ಸರ್ಕಾರಿ ಪ್ರಾಥಮಿಕ ಶಾಲೆಗಳು, ಅಂಗನವಾಡಿಗಳು ಮತ್ತು ಪ್ರೌಢಶಾಲೆ ಹೊರತುಪಡಿಸಿದರೆ ಸರ್ಕಾರದ ಇನ್ನಿತರೆ ಸಾಂಸ್ಥಿಕ ಸೌಲಭ್ಯಗಳು ಈ ವಾರ್ಡ್‌ನಲ್ಲಿ ಇಲ್ಲ. ಮುಖ್ಯವಾಗಿ, ಯಾವುದೇ ಸರ್ಕಾರಿ ಆಸ್ಪತ್ರೆ ಇಲ್ಲ. ನೇಕಾರ ನಗರ ತಲುಪಲು ಸರ್ಕಾರಿ ನಗರ ಸಾರಿಗೆ ಬಸ್‌ ಸೌಲಭ್ಯವಿದೆ. ಆದರೆ, ಒಂದು ಸುಸಜ್ಜಿತ ಬಸ್‌ ನಿಲ್ದಾಣವಿಲ್ಲ. ವಾರ್ಡ್‌ನಲ್ಲಿ ಸಂತೆ ಕಟ್ಟೆ ಹಾಗೂ ವಾಣಿಜ್ಯ ಮಳಿಗೆಗಳ ನಿರ್ಮಾಣ ಆಗಬೇಕಿದೆ. 

ಬಹುತೇಕ ಕೊಳೆಗೇರಿಯಿಂದ ಕೂಡಿದ ನೇಕಾರ ನಗರ ವಾರ್ಡ್‌ನಲ್ಲಿ ಮೌಲ ಸೌಕರ್ಯ ಅಭಿವೃದ್ಧಿ ಮಾಡುವುದು ಪ್ರಥಮ ಆಧ್ಯತೆ ಆಗಿ ಪರಿಗಣಿಸಿದ್ದೇವೆ. ಶೇ 80ರಷ್ಟು ಭಾಗದಲ್ಲಿ ಸಿ.ಸಿ.ರಸ್ತೆಗಳಾಗಿವೆ
ಶಾಂತಾ ಹಿರೇಮಠ ಹು.ಧಾ.ಮಹಾನಗರ ಪಾಲಿಕೆ 80ನೇ ವಾರ್ಡ್‌ ಸದಸ್ಯ
ವಾರ್ಡ್‌ನಲ್ಲಿ ಈಚೆಗೆ ಸಿ.ಸಿ. ರಸ್ತೆಗಳು ನಿರ್ಮಾಣ ಆಗಿವೆ. ಮುಖ್ಯವಾಗಿ ಗಿರಿಯಾಲ ರಸ್ತೆ ನಿರ್ಮಾಣ ಮಾಡಿದ್ದು ಜನರಿಗೆ ಅನುಕೂಲ ಆಗಿದೆ. ಮೂಲ ಸೌಕರ್ಯ ಇನ್ನು ಸಾಕಷ್ಟು ಆಗಬೇಕಿದೆ
ಪ್ರವೀಣ ಚಾಗಿ (ಕೈಗಾರಿಕಾ ಯಂತ್ರ ವಿನ್ಯಾಸಕಾರ ವಾರ್ಡ್‌) ನಿವಾಸಿ

ಐತಿಹಾಸಿಕ ದೇವಸ್ಥಾನ:

ನೇಕಾರ ನಗರ ವಾರ್ಡ್‌ ವ್ಯಾಪ್ತಿಯಲ್ಲಿ ಎರಡು ಐತಿಹಾಸಿಕ ದೇವಸ್ಥಾನಗಳಿವೆ. ಬಾವುಸಾರ ಮರಾಠಾ ಸಮಾಜದವರು ಪೂಜಿಸುವ ಶಕ್ತಿದೇವತೆ ಹಿಂಗುಲಾಂಬಿಕೆ ದೇವಸ್ಥಾನ ಇದೆ. ಇನ್ನೊಂದು ಹಳೇ ಗಬ್ಬೂರ ಭಾಗದಲ್ಲಿ ಪುರಾತನವಾದ ಬಸವೇಶ್ವರ ದೇವಸ್ಥಾನ ಇದೆ. ಈ ಎರಡೂ ದೇವಸ್ಥಾನಗಳಿಗೆ ವಿವಿಧೆಡೆಯಿಂದ ಭಕ್ತರು ದರ್ಶನಕ್ಕಾಗಿ ಬರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.