ADVERTISEMENT

ಹುಬ್ಬಳ್ಳಿ ನಗರದ ವಿವಿಧೆಡೆ ನೀರಿಗೆ ಜನರ ಪರದಾಟ

ಪಾಲಿಕೆ– ಹೊರಗುತ್ತಿಗೆ ಸಿಬ್ಬಂದಿ ಮುಸುಕಿನ ಗುದ್ದಾಟ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 15:47 IST
Last Updated 30 ಏಪ್ರಿಲ್ 2022, 15:47 IST

ಹುಬ್ಬಳ್ಳಿ: ಜಲಮಂಡಳಿಯ ಹೊರಗುತ್ತಿಗೆ ನೌಕರರ ಅನಿರ್ದಿಷ್ಟಾವಧಿ ಪ್ರತಿಭಟನೆಯಿಂದಾಗಿ ಪಾಲಿಕೆ ವ್ಯಾಪ್ತಿಯ ಹಳೇ ಹುಬ್ಬಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಾಸವಾಗಿದ್ದು, ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ 24*7 ನೀರು ಪೂರೈಕೆ ಯೋಜನೆ ಜಾರಿಯನ್ನು ಎಲ್‌ ಆ್ಯಂಡ್‌ ಟಿ ಸಂಸ್ಥೆಗೆ ವಹಿಸಿದ್ದು, ಜಲಮಂಡಳಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ 580 ಜನ ಸಿಬ್ಬಂದಿಗೆ ಆ ಕಂಪನಿಯಲ್ಲಿ ವರದಿ ಮಾಡಿಕೊಳ್ಳುವಂತೆ ಪಾಲಿಕೆ ಸೂಚಿಸಿದೆ. ಆದರೆ, ಸಿಬ್ಬಂದಿ ಕೆಲವು ನಿರ್ದಿಷ್ಟ ಬೇಡಿಕೆಗಳನ್ನು ಪೂರೈಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವುದರಿಂದ ನೀರು ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ.

‘ಜಲಮಂಡಳಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರನ್ನು ಪಾಲಿಕೆಗೆ ಹಸ್ತಾಂತರ ಮಾಡಿಕೊಂಡು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಯೋಜನೆ ಪೂರ್ಣಗೊಳ್ಳುವವರೆಗೂ ನಿಯೋಜನೆ ಮೇರೆಗೆ ಎಲ್‌ ಆ್ಯಂಡ್‌ ಟಿ ಯಲ್ಲಿ ಕೆಲಸ ನಿರ್ವಹಿಸುವಂತೆ ಆದೇಶಿಸಬೇಕು. ಈ ಬೇಡಿಕೆಗಳನ್ನು ಈಡೇರಿಸಿದರೆ, ಎಲ್‌ ಆ್ಯಂಡ್‌ ಟಿಯಲ್ಲಿ ವರದಿ ಮಾಡಿಕೊಳ್ಳಲಿದ್ದೇವೆ’ ಎಂದು ಜಲಮಂಡಳಿ ಹಂಗಾಮಿ ನೌಕರರ ಸಂಘದ ಅಧ್ಯಕ್ಷ ವಿ.ಎನ್. ಹಳ್ಳಕಟ್ಟಿ ತಿಳಿಸಿದರು.

ADVERTISEMENT

ಪಾಲಿಕೆ ಸಿಬ್ಬಂದಿಗೆ ತಾತ್ಕಾಲಿಕೆ ಕೆಲಸ: ಎಲ್‌ ಆ್ಯಂಡ್‌ ಟಿಗೆ ಹೊರಗುತ್ತಿಗೆ ಸಿಬ್ಬಂದಿ ವರದಿ ಮಾಡಿಕೊಳ್ಳದಿರುವುದರಿಂದ ಪಾಲಿಕೆಯ ಅಂದಾಜು 100 ಜನ ಸಿಬ್ಬಂದಿಯನ್ನು ನೀರು ಪೂರೈಕೆ ಕೆಲಸಕ್ಕೆ ತಾತ್ಕಾಲಿಕವಾಗಿ ನಿಯೋಜನೆ ಮಾಡಲಾಗಿದೆ.

ನೀರು ಪೂರೈಕೆ ಸಮಸ್ಯೆಯ ಬಗ್ಗೆ ದೂರುಗಳು ಬರುತ್ತಿರುವ ಪ್ರದೇಶಕ್ಕೆ ಎಲ್‌ ಆ್ಯಂಡ್‌ ಟಿ ಸಂಸ್ಥೆಯ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸುತ್ತಿದ್ದಾರೆ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.

ಪಾಲಿಕೆ ಕಂಟ್ರೋಲ್‌ ರೂಂಗೆ ದೂರು: ವಾರದಿಂದ ನಗರದ ವಿವಿಧೆಡೆ ನೀರು ಪೂರೈಕೆ ಸಮಸ್ಯೆ ಎದುರಾಗಿದೆ. ಪಾಲಿಕೆಯ ಕಂಟ್ರೋಲ್‌ ರೂಂಗೆ 70ಕ್ಕೂ ಹೆಚ್ಚು ಜನ ದೂರು ದಾಖಲಿಸಿದ್ದಾರೆ. ಹಳೇ ಹುಬ್ಬಳ್ಳಿ, ವಿದ್ಯಾನಗರ, ಕೇಶ್ವಾಪುರ, ಗೋಕುಲ ರಸ್ತೆ ಸೇರಿದಂತೆ ವಿವಿಧೆಡೆ ನೀರು ಪೂರೈಕೆಯಲ್ಲಿ ವ್ಯತ್ಯವಾಗಿದ್ದು, ಕೆಲವೆಡೆ ಜನರು ಪ್ರತಿಭಟನೆ ಮಾಡಿದ್ದಾರೆ.

ನೀರು ಬರುವುದು ಯಾವಾಗ?

‘ಮೊದಲು ಐದು ದಿನಕ್ಕೊಮ್ಮೆ ನೀರು ಬರುತ್ತಿತ್ತು. ಈ ವಾರ ಬಂದಿಲ್ಲ. ಯಾವಾಗ ಬರುತ್ತದೆ ಎಂದು ಅಧಿಕಾರಿಗಳನ್ನು ಕೇಳಿದರೆ ಇಂದು, ನಾಳೆ’ ಎನ್ನುತ್ತಿದ್ದಾರೆ ಎಂದುವಿದ್ಯಾನಗರ ತಿಮ್ಮಸಾಗರ ಗುಡಿ ಹಿಂಭಾಗದ ನಿವಾಸಿಸಾವಿತ್ರಿ ನಾಯಕ್ ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ನೀರು ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರೆ ಟ್ಯಾಂಕರ್‌ ನೀರಿಗಾದರೂ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಟ್ಯಾಂಕರ್‌ ನೀರು ಕೂಡ ಬೇಗನೆ ಸಿಗುತ್ತಿಲ್ಲ. ನೀರಿನ ಸಮಸ್ಯೆ ಕೇಳಿದರೆ ಯಾವ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ. ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿದರೆ ಸಂಪರ್ಕ ಸಿಗುತ್ತಿಲ್ಲ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.