ADVERTISEMENT

ಅವಳಿ ನಗರಕ್ಕೆ ನೀರು ಪೂರೈಕೆ ಯೋಜನೆ | ನಿರಂತರ ನೀರು; ಮುಂದಿನ ವರ್ಷ ಲಭ್ಯ

ಶ್ರೀಕಾಂತ ಕಲ್ಲಮ್ಮನವರ
Published 16 ಜನವರಿ 2025, 4:56 IST
Last Updated 16 ಜನವರಿ 2025, 4:56 IST
<div class="paragraphs"><p>ಸವದತ್ತಿ ಬಳಿಯ ಮಲಪ್ರಭಾ ನದಿಯ ದಡದಲ್ಲಿರುವ ಜಾಕ್‌ವೆಲ್‌</p></div>

ಸವದತ್ತಿ ಬಳಿಯ ಮಲಪ್ರಭಾ ನದಿಯ ದಡದಲ್ಲಿರುವ ಜಾಕ್‌ವೆಲ್‌

   

ಹುಬ್ಬಳ್ಳಿ: ಎಲ್ಲವೂ ನಿರೀಕ್ಷೆಯಂತೆ ನೆರವೇರಿದರೆ, ಮುಂದಿನ ವರ್ಷದ ಡಿಸೆಂಬರ್‌ ವೇಳೆಗೆ ಹುಬ್ಬಳ್ಳಿ–ಧಾರವಾಡ ಅವಳಿ ನಗರದ ಪ್ರತಿ ಮನೆಗೆ ದಿನದ 24 ಗಂಟೆ ನಿರಂತರ ಕುಡಿಯುವ ನೀರು ಸಿಗಲಿದೆ. 24x7 ನಿರಂತರ ಕುಡಿಯುವ ನೀರು ದೊರೆಯುವ ರಾಜ್ಯದ ಮೊದಲ ಮಹಾನಗರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುವ ಸಾಧ್ಯತೆ ಇದೆ.

ಯೋಜನೆ ಈಗಾಗಲೇ ಆರಂಭವಾಗಿದ್ದು, ಹಂತ ಹಂತವಾಗಿ ಅನುಷ್ಠಾನಗೊಳ್ಳುತ್ತಿದೆ. ಆರಂಭಿಕ ಹಂತದಲ್ಲಿ ಅವಳಿ ನಗರದ 11 ವಾರ್ಡ್‌ಗಳಿಗೆ ದಿನದ 24 ತಾಸೂ ನೀರು ಸಿಗುತ್ತಿದೆ. ಇತ್ತೀಚೆಗೆ ನವಲೂರು, ಮೊರಾರ್ಜಿ ನಗರ, ನೃಪತುಂಗ ಬೆಟ್ಟ ಸುತ್ತಮುತ್ತಲಿನ ಮನೆಗಳಿಗೆ ಪ್ರಾಯೋಗಿಕವಾಗಿ 24x7 ನಿರಂತರ ಕುಡಿಯುವ ನೀರು ಒದಗಿಸಲಾಗುತ್ತಿದೆ. ಇದನ್ನು ಇನ್ನುಳಿದ 62 ವಾರ್ಡ್‌ಗಳಿಗೆ ವಿಸ್ತರಿಸಲು ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ, ವಿಶ್ವಬ್ಯಾಂಕ್‌, ಕರ್ನಾಟಕ ನಗರಾಭಿವೃದ್ಧಿ ಇಲಾಖೆ (ಕೆಯುಐಡಿಎಫ್‌ಸಿ), ಎಸ್‌ಎಂಇಸಿ ಹಾಗೂ ಎಲ್‌–ಟಿ ಕಂಪನಿ ಶ್ರಮಿಸುತ್ತಿವೆ.

ADVERTISEMENT

ಏನಿದು ಯೋಜನೆ:

ಜನರಿಗೆ ಉತ್ತಮ ಗುಣಮಟ್ಟದ ಹಾಗೂ ಸ್ವಚ್ಛ ಕುಡಿಯುವ ನೀರು ಪೂರೈಸಬೇಕೆಂದು ರಾಜ್ಯ ಸರ್ಕಾರ ಈ ಯೋಜನೆ ರೂಪಿಸಿದೆ. ಇದೇ ಉದ್ದೇಶಕ್ಕಾಗಿ ಕರ್ನಾಟಕ ಸರ್ಕಾರವು ವಿಶ್ವ ಬ್ಯಾಂಕ್‌ ನೆರವಿನ ಕರ್ನಾಟಕ ನಗರ ನೀರು ವಲಯ ಸುಧಾರಣಾ ಯೋಜನೆಯಡಿ (ಕೆಯುಡಬ್ಲುಎಎಸ್‌ಐಪಿ) ಹುಬ್ಬಳ್ಳಿ–ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ ನಗರಗಳಲ್ಲಿ 24x7 ನಿರಂತರ ಕುಡಿಯುವ ನೀರು ಸರಬರಾಜು ಯೋಜನೆ ರೂಪಿಸಿತು. ಇನ್ನುಳಿದ ಎರಡು ನಗರಗಳಿಗೆ ಹೋಲಿಸಿದರೆ ಹು–ಧಾ ಅವಳಿ ನಗರದಲ್ಲಿ ಯೋಜನೆಯು ತೀವ್ರ ಗತಿಯಲ್ಲಿ ಅನುಷ್ಠಾನಗೊಳ್ಳುತ್ತಿದೆ.

ಹುಬ್ಬಳ್ಳಿ–ಧಾರವಾಡ ಅವಳಿ ನಗರದ ಅಂದಾಜು 202 ಚದರ ಕಿ.ಮೀ ವಿಸ್ತೀರ್ಣವನ್ನು ಗುರುತಿಸಲಾಗಿದೆ. ಒಟ್ಟು 82 ವಾರ್ಡ್‌ಗಳಿವೆ. ಅಂದಾಜು ₹ 1,206.97 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಇದರಲ್ಲಿ ₹ 623.78 ಕೋಟಿ ಅನುದಾನವನ್ನು ವಿಶ್ವಬ್ಯಾಂಕ್‌ ನೀಡಿದೆ. ಇನ್ನುಳಿದ ಹಣವನ್ನು ರಾಜ್ಯ ಸರ್ಕಾರ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಭರಿಸಿವೆ. 

2007–08ರಲ್ಲಿ ಮೊಟ್ಟ ಮೊದಲ ಬಾರಿಗೆ ದಿನದ ಇಪ್ಪತ್ತನಾಲ್ಕು ತಾಸೂ ನೀರು ಒದಗಿಸುವ ಪರಿಕಲ್ಪನೆ ಅಡಿ ಹುಬ್ಬಳ್ಳಿ ಹಾಗೂ ಧಾರವಾಡದ ತಲಾ 4 ವಾರ್ಡ್‌ಗಳನ್ನು (ಈಗ 11 ವಾರ್ಡ್‌ಗಳಾಗಿವೆ) ಡೆಮೊ ಜೋನ್‌ ಎಂದು ಆಯ್ಕೆ ಮಾಡಿ, ಯೋಜನೆ ಅನುಷ್ಠಾನ ಗೊಳಿಸಲಾಯಿತು. ಪ್ರಾಯೋಗಿಕ ಹಂತದಲ್ಲಿ 16,786 ಮನೆಗಳಿಗೆ ನಳ ಸಂಪರ್ಕ ನೀಡಲಾಗಿದ್ದು, ಸುಮಾರು 1.06 ಲಕ್ಷ ಜನರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಈ ವಾರ್ಡ್‌ಗಳಲ್ಲಿ ಇವತ್ತಿಗೂ ನಿರಂತರವಾಗಿ ನೀರು ಹರಿಯುತ್ತಿದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತ ನಂತರ ರಾಜ್ಯ ಸರ್ಕಾರ ಅವಳಿನಗರದ ತುಂಬ ವಿಸ್ತರಿಸಲು ತೀರ್ಮಾನಿಸಿತು. 2020ರಲ್ಲಿ ಎಲ್‌ ಆ್ಯಂಡ್‌ ಟಿ ಕಂಪನಿಗೆ ಕಾಮಗಾರಿ ಟೆಂಡರ್‌ ನೀಡಿತು.

ಯೋಜನೆಯ ಅಧ್ಯಯನ, ನೀರು ಸಂಗ್ರಹಿಸಲು ಟ್ಯಾಂಕ್‌ಗಳ ನಿರ್ಮಾಣ, ಪೈಪ್‌ಲೈನ್‌ ಅಳವಡಿಕೆಗೆ ಎಲ್‌ ಆ್ಯಂಡ್‌ ಟಿಗೆ 5 ವರ್ಷದ ಸಮಯ (2026 ಡಿಸೆಂಬರ್‌) ನೀಡಲಾಗಿದೆ. ನಂತರ ಮುಂದಿನ 7 ವರ್ಷಗಳವರೆಗೆ ಕಾರ್ಯಾಚರಣೆ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು ಸಹ ನೀಡಲಾಗಿದೆ. ಒಟ್ಟು 12 ವರ್ಷಗಳ ಗುತ್ತಿಗೆ ಇದಾಗಿದ್ದು, 2032ಕ್ಕೆ ಮುಗಿಯಲಿದೆ. ತದನಂತರ ಯೋಜನೆಯನ್ನು ಪಾಲಿಕೆಗೆ ಹಸ್ತಾಂತರಿಸಬೇಕಾಗಿದೆ.

24x7 ಯೋಜನೆಯ ಡೆಮೊ ಜೋನ್‌ನ 11 ವಾರ್ಡ್‌ಗಳು ಹಾಗೂ ಜಲಮಂಡಳಿಯವರು ಪೈಪ್‌ಲೈನ್‌ ಅಳವಡಿಸಿರುವ 25 ವಾರ್ಡ್‌ಗಳು ಸೇರಿದಂತೆ ಒಟ್ಟು 36 ವಾರ್ಡ್‌ಗಳಲ್ಲಿ ನಿರಂತರ ನೀರು ಹರಿಸಲು ಬೇಕಾದ ಮೂಲಸೌಕರ್ಯಗಳು ಸಿದ್ಧವಾಗಿವೆ. ಇನ್ನುಳಿದ 46 ವಾರ್ಡ್‌ಗಳಲ್ಲಿ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ನಡೆದಿದೆ.ಭರದಿಂದ ಸಾಗಿದ ಪೈಪ್‌ಲೈನ್‌ ಅಳವಡಿಕೆ: ಮುಖ್ಯ ಜಲಮೂಲವಾಗಿರುವ ನೀರಸಾಗರ ಹಾಗೂ ಸವದತ್ತಿಯ ಮಲಪ್ರಭಾ ನದಿಯಿಂದ ನೀರೆತ್ತಿ ಮನೆಮನೆಗೆ ತಲುಪಿಸಲು ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ಭರದಿಂದ ಸಾಗಿದೆ. ಹಲವು ಕಡೆ 20–30 ವರ್ಷಗಳ ಹಿಂದಿನ ಪೈಪ್‌ಗಳನ್ನು ಬದಲಾಯಿಸಿ, ಹೊಸ ಪೈಪ್‌ ಅಳವಡಿಸಲಾಗುತ್ತಿದೆ. 

ಸವದತ್ತಿಯ ಜಾಕ್‌ವೆಲ್‌ನಿಂದ ಅಮ್ಮಿನಭಾವಿ ಜಲಶುದ್ಧೀಕರಣ ಘಟಕದವರೆಗಿನ 29 ಕಿ.ಮೀ.ವರೆಗೆ ಪೈಪ್‌ಲೈನ್‌ ಅಳವಡಿಕೆ ಪೂರ್ಣಗೊಂಡಿದೆ. ಅಮ್ಮಿನಭಾವಿಯಿಂದ ರಾಯಪೂರದವರೆಗಿನ 17 ಕಿ.ಮೀ ಪೈಕಿ 10 ಕಿ.ಮೀ ವರೆಗೆ ಪೈಪ್‌ಲೈನ್‌ ಅಳವಡಿಕೆ ಪೂರ್ಣಗೊಂಡಿದೆ. ಇನ್ನುಳಿದ 7 ಕಿ.ಮೀ ವರೆಗೆ ಪೈಪ್‌ ಅಳವಡಿಸಲು ಅಲ್ಲಲ್ಲಿ ಕೆಲವು ರೈತರು ವಿರೋಧಿಸುತ್ತಿದ್ದಾರೆ. ಹೀಗಾಗಿ ಕಾಮಗಾರಿ ವಿಳಂಬವಾಗಿದೆ. ರೈತರ ಮನವೊಲಿಸಿ, ಕಾಮಗಾರಿ ಮುಂದುವರಿಸಲು ಅಧಿಕಾರಿಗಳು ಹಾಗೂ ಎಲ್‌ ಆ್ಯಂಡ್‌ ಟಿ ಪ್ರತಿನಿಧಿಗಳು ಪ್ರಯತ್ನ ನಡೆಸಿದ್ದಾರೆ.ಮನೆಮನೆಗಳಿಗೆ ಸಂಪರ್ಕ ಸವಾಲು: ‘ಸವದತ್ತಿ ಜಾಕ್‌ವೆಲ್‌ನಿಂದ ನೀರನ್ನು ಸಂಗ್ರಹಗಾರದವರೆಗೆ ತರುವ ಕೆಲಸ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ನೀರು ಸಂಗ್ರಹಗಾರದಿಂದ ಮನೆ ಮನೆಗಳಿಗೆ ನೀರು ತಲುಪಿಸಲು ಕೊಳವೆ ಮಾರ್ಗ ಅಳವಡಿಸುವ (ಡಿಸ್ಟ್ರಿಬ್ಯೂಷನ್‌ ಲೈನ್‌) ಕಾಮಗಾರಿ ತುಂಬ ವಿಳಂಬವಾಗಿದೆ. 1,688 ಕಿ.ಮೀ ಪೈಕಿ 442.4 ಕಿ.ಮೀ (ಶೇ 26) ದೂರ ಪೈಪ್‌ಲೈನ್‌ ಅಳವಡಿಸಲಾಗಿದೆ. ಇದನ್ನು ತ್ವರಿತಗೊಳಿಸಲು ಸ್ಥಳೀಯ ಗುತ್ತಿಗೆದಾರರಿಗೆ ತುಂಡು ಗುತ್ತಿಗೆ ನೀಡಲು ಚಿಂತನೆ ನಡೆಸಲಾಗಿದೆ’ ಎಂದು ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಹೇಳಿದರು.

‘ಪಾಲಿಕೆ ಸದಸ್ಯರು ತಮ್ಮ ವ್ಯಾಪ್ತಿ ಪ್ರದೇಶದ ಜವಾಬ್ದಾರಿ ತೆಗೆದುಕೊಂಡು, ಕೊಳವೆ ಮಾರ್ಗ ಅಳವಡಿಸಲು ಸಹಕರಿಸಿದರೆ ನಿಗದಿತ ಸಮಯಕ್ಕಿಂತ ಬೇಗ ಕಾಮಗಾರಿ ಅನುಷ್ಠಾನಗೊಳ್ಳಲಿದೆ. ಪ್ರತಿಯೊಂದು ಮನೆಗೆ ದಿನದ 24 ಗಂಟೆ ನೀರು ಸಿಗಲಿದೆ’ ಎಂದು ತಿಳಿಸಿದರು.

ಆನ್‌ಲೈನ್‌ ಪಾವತಿ
ನೀರಿನ ಶುಲ್ಕ ಪಾವತಿಸುವ ವ್ಯವಸ್ಥೆಯನ್ನು ಸುಲಭವಾಗಿಸಲು ಹಲವು ಮಾರ್ಗಗಳನ್ನು ಆರಂಭಿಸಲಾಗಿದೆ. ಯುಪಿಐ ಆ್ಯಪ್‌ (ಫೋನ್‌ ಪೇ, ಗೂಗಲ್‌ ಪೇ...), ಡೆಬಿಟ್‌ ಕಾರ್ಡ್‌/ ಕ್ರೆಡಿಟ್‌ ಕಾರ್ಡ್‌ ಬಳಸಲು ಸ್ವೈಪಿಂಗ್‌ ಮೆಷಿನ್‌, ಫೋನ್‌ ಬಿಲ್‌ನಲ್ಲಿಯೇ ಕ್ಯೂಆರ್‌ ಕೋಡ್‌ ಕೊಡಲಾಗಿ ಸ್ಕ್ಯಾನ್‌ ಮೂಲಕ ಹಣ ಪಾವತಿಸಬಹುದು. ಗ್ರಾಹಕರಿಗೆ ಎಸ್‌.ಎಂ.ಎಸ್‌ ಸೇವೆ ಕೂಡ ನೀಡಲಾಗುತ್ತಿದೆ. ನೀರು ಪೂರೈಕೆ ಮಾಹಿತಿ, ಬಿಲ್ಲಿಂಗ್‌– ಪಾವತಿ, ದೂರು ಪರಿಹಾರದ ಸ್ಥಿತಿ–ಗತಿ ಸೇರಿದಂತೆ 11 ರೀತಿಯ ಎಸ್‌ಎಂಎಸ್‌ ಸೇವೆ ನೀಡಲಾಗುತ್ತಿದೆ. ಮಾಹಿತಿಗೆ ಸಂಪರ್ಕಿಸಬೇಕಾದ ವೆಬ್‌ಸೈಟ್‌: www.hdmcwater.in
ಸಹಾಯವಾಣಿ
ಜನರು ಎದುರಿಸುತ್ತಿರುವ ನೀರಿನ ಸಮಸ್ಯೆ ಆಲಿಸಲು 24x7 ಕುಡಿಯುವ ನೀರು ಯೋಜನೆಯು ಸಹಾಯವಾಣಿ ಆರಂಭಿಸಲಾಗಿದೆ. ಜನರು ನೀಡುವ ದೂರನ್ನು ಆಲಿಸಿ, ತಕ್ಷಣ ಪರಿಹರಿಸಲು ಪ್ರಯತ್ನ ಮಾಡಲಾಗುತ್ತಿದೆ. ಈವರೆಗೆ 60,000 ದೂರುಗಳು ದಾಖಲಾಗಿವೆ. ಇವುಗಳಲ್ಲಿ ಶೇ 99 ಪರಿಹರಿಸಲಾಗಿದೆ. ಸಹಾಯವಾಣಿ ಸಂಖ್ಯೆ: 7996666247.
ನೀರು ಸಂರಕ್ಷಣೆಗೆ ಜಾಗೃತಿ
ಯೋಜನೆ ಅನುಷ್ಠಾನಗೊಳ್ಳುವ ವಾರ್ಡ್‌ಗಳಲ್ಲಿ ರೂರಲ್‌ ಡೆವಲಪ್‌ಮೆಂಟ್‌ ಸೊಸೈಟಿ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಪ್ರತಿನಿಧಿಗಳು ಭೇಟಿ ಕೊಟ್ಟು, ಸ್ಥಳೀಯರಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಾರೆ. ನೀರು ಬಳಕೆ, ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಈ ಯೋಜನೆಯ ಗ್ರಾಹಕರ (ನೀರು ಬಳಕೆದಾರರ) ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಜಿಐಎಸ್‌ ಮೂಲಕ ಮ್ಯಾಪಿಂಗ್‌ ಮಾಡಿ, ಎಲ್ಲ ಮಾಹಿತಿಯನ್ನು ಕಂಪ್ಯೂಟರ್‌ಗೆ ಅಳವಡಿಸಲಾಗುತ್ತಿದೆ. ಎಲ್‌ ಆ್ಯಂಡ್‌ ಟಿ ಗುತ್ತಿಗೆ ಮುಗಿದ ತಕ್ಷಣ ಕಾಮಗಾರಿ ಪಾಲಿಕೆಗೆ ಹಸ್ತಾಂತರವಾದಾಗ ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುತ್ತಿದೆ.

ಯೋಜನೆಯ ಲಾಭಗಳು

ಯೋಜನೆಯ ಲಾಭಗಳು

ಮನೆಗಳಲ್ಲಿ ನೀರು ಸಂಗ್ರಹ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ

ನೀರಿನ ಸೋರಿಕೆಯಲ್ಲಿ ಇಳಿಕೆ

ನೀರು ಸಂಗ್ರಹಿಸಲು ಸಂಪು/ ಟ್ಯಾಂಕ್‌ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ

ನೀರನ್ನು ಪಂಪ್‌ ಮಾಡುವ ಅವಶ್ಯಕತೆ ಇರುವುದಿಲ್ಲ. ಇದರಿಂದ ವಿದ್ಯುತ್‌ ದರಗಳಲ್ಲಿ ಉಳಿತಾಯ

ಸಾರ್ವಜನಿಕರ ಆರೋಗ್ಯ ಮತ್ತು ನೈರ್ಮಲ್ಯದಲ್ಲಿ ಸುಧಾರಣೆ

ನೀರಸಾಗರದಿಂದ ಪೂರೈಕೆ
ನೀರಸಾಗರ ಜಲಾಶಯದಲ್ಲಿ 1 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯವಿದೆ. ಇಲ್ಲಿಂದ ಪ್ರತಿದಿನ 20 ದಶಲಕ್ಷ ಲೀಟರ್‌ ನೀರನ್ನು ಲಿಫ್ಟ್‌ ಮಾಡಿ, ಕಣವಿ ಹೊನ್ನಾಪುರ ಜಲಶುದ್ಧೀಕರಣ ಘಟಕಕ್ಕೆ ತರಲಾಗುತ್ತದೆ. ಇಲ್ಲಿ ಶುದ್ಧೀ ಕರಣ ಮಾಡಿದ ನಂತರ ಹಳೇ ಹುಬ್ಬಳ್ಳಿ, ನೆಹರು ನಗರ, ಎಸ್‌.ಎಂ. ಕೃಷ್ಣ ನಗರ, ಗೋಕುಲ್‌ ರಸ್ತೆ ಸೇರಿದಂತೆ 22 ವಾರ್ಡ್‌ಗಳಿಗೆ ನೀರು ಪೂರೈಸಲಾಗುತ್ತಿದೆ. ಇದಲ್ಲದೇ, ಕುಂದಗೋಳಕ್ಕೂ ಇಲ್ಲಿಂದಲೇ ಪ್ರತಿದಿನ ನೀರು ಸರಬರಾಜು ಮಾಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.