ADVERTISEMENT

ಶಿಕ್ಷಕರ ಬೇಡಿಕೆ ಈಡೇರಿಕೆಗೆ ಕ್ರಮ: ಬಸವರಾಜ ಹೊರಟ್ಟಿ ಭರವಸೆ

ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಸಭೆ: ಬಸವರಾಜ ಹೊರಟ್ಟಿ ಭರವಸೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 5:38 IST
Last Updated 27 ಜೂನ್ 2022, 5:38 IST
ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ‌ ನೌಕರರ ಸಂಘದ ಕೇಂದ್ರ ಸಮಿತಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿದರು – ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ‌ ನೌಕರರ ಸಂಘದ ಕೇಂದ್ರ ಸಮಿತಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿದರು – ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರಲಾಗುವುದು. ಬೇಡಿಕೆಗಳ ಕುರಿತು ಬೆಂಗಳೂರಿನಲ್ಲಿ ಪರಿಷತ್‌ನ ಇತರ ಸದಸ್ಯರ ಜೊತೆ ಚರ್ಚಿಸಲಾಗುವುದು’ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ನಗರದ ಲ್ಯಾಮಿಂಗ್ಟನ್ ಶಾಲೆಯಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ‌ ನೌಕರರ ಸಂಘದ ಕೇಂದ್ರ ಸಮಿತಿ ಸಭೆಯಲ್ಲಿ ಮಾತನಾಡಿದಅವರು, ‘ಸರ್ಕಾರ ವಿಳಂಬ ಮಾಡದೆ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಬೇಕು’ ಎಂದರು.

‘ಅನುದಾನಿತ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ, ಶಾಲೆಗಳ ಕಟ್ಟಡಗಳ ಪರಿಶೀಲನೆ ನೆಪದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಶಿಕ್ಷಣ ಸಂಸ್ಥೆಗಳಿಂದ ಲಂಚ ಕೇಳುತ್ತಿರುವ ದೂರುಗಳಿವೆ. ಭ್ರಷ್ಟಾಚಾರ ತಡೆಯಲು ನವೀಕರಣ ಪ್ರಕ್ರಿಯೆ ಸರಳಗೊಳಿಸಬೇಕು.ಅಧಿಕಾರಿಗಳು ಸರ್ಕಾರಿ ಮತ್ತು ಖಾಸಗಿ ಶಾಲೆಗಳೆಂಬ ತಾರತಮ್ಯ ಬಿಟ್ಟು ಕೆಲಸ ಮಾಡಬೇಕು’ ಎಂದರು.

ADVERTISEMENT

ಪವಿತ್ರತೆ ಕಾಪಾಡಬೇಕು: ‘ರಾಜ್ಯದಲ್ಲ ಪಶ್ಚಿಮ ಶಿಕ್ಷಕರ ಕ್ಷೇತ್ರವು ಪವಿತ್ರವಾದುದು. ಆದರೆ, ಈ ಸಲದ ಚುನಾವಣೆಯಲ್ಲಿ ಕೆಲವರು ಶಿಕ್ಷಕರಿಗೆ ಪಾರ್ಟಿ ಆಯೋಜಿಸಿ, ವಸತಿ ವ್ಯವಸ್ಥೆ ಮಾಡಿದ್ದು ಮನಸ್ಸಿಗೆ ನೋವುಂಟು ಮಾಡಿದೆ. ಅನರ್ಹ ಮತಗಳು ಸಾವಿರ ದಾಟಿದ್ದು ದಿಗ್ಬ್ರಮೆ ಹುಟ್ಟಿಸಿತು. ನಾನು ಸೋತಿದ್ದರೂ ಪರವಾಗಿಲ್ಲ. ಇಂತಹದ್ದು ನಡೆಯಬಾರದಿತ್ತು. ಶಿಕ್ಷಕರು ಪ್ರಬುದ್ಧ ಮತದಾರರು ಎಂಬ ಮಾತನ್ನು ಉಳಿಸಿಕೊಳ್ಳಬೇಕು. ಕ್ಷೇತ್ರದ ಪವಿತ್ರತೆಯನ್ನು ಕಾಪಾಡಿಕೊಳ್ಳಬೇಕು’ ಎಂದು ಹೇಳಿದರು.

‘ಸದಾ ನನ್ನ ಬೆನ್ನಿಗಿರುವ ಕ್ಷೇತ್ರದ ಶಿಕ್ಷಕರಷ್ಟೇ ಅಲ್ಲದೆ, ವಿವಿಧ ಭಾಗಗಳ ಶಿಕ್ಷಕರು ಸಹ ನನ್ನ ಗೆಲುವಿಗೆ ಶ್ರಮಿಸಿದ್ದಾರೆ. ಬಿಜೆಪಿ ನಾಯಕರು, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಕೊಡುಗೆಯೂ ಹೆಚ್ಚು. ಅವರೆಲ್ಲರಿಗೂ ನಾನು ಚಿರಋಣಿಯಾಗಿರುವೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್. ಭಟ್, ‘ಸಂಘವು 45 ವರ್ಷಗಳನ್ನು ಪೂರೈಸಿದೆ. ಸಂಘವನ್ನು ಕಟ್ಟಿದ ಬಸವರಾಜ ಹೊರಟ್ಟಿ ಅವರು ಎಂಟನೇ ಬಾರಿ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ‌. ಆರಂಭದಿಂದಲೂ ಶಿಕ್ಷಕರ ಸಮಸ್ಯೆಗಳಿಗೆ ದನಿಯಾಗಿ ಪರಿಹರಿಸುತ್ತಾ ಬಂದಿದ್ದಾರೆ. ಅತಿ ಹೆಚ್ಚು ಸಲ ಆಯ್ಕೆಯಾದ ದಾಖಲೆ ಬರೆದಿರುವ ಹೊರಟ್ಟಿ ಅವರು, ಇಂದು ಶಕ್ತಿಯಾಗಿ ಬೆಳೆದಿದ್ದಾರೆ’ ಎಂದು ಬಣ್ಣಿಸಿದರು.

ಸಂಘದ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.