ಹರಲಾಪುರ (ಗುಡಗೇರಿ): ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಹರಲಾಪುರದ ಅನನ್ಯ ಹಿರೇಮಠ ಯೋಗಾಸನ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ, ಗಮನ ಸೆಳೆದಿದ್ಧಾರೆ.
ಅನನ್ಯ ಐದನೇ ವಯಸ್ಸಿನಲ್ಲಿದ್ದಾಗಲೇ ತಂದೆ ಶಂಭಯ್ಯ ಅವರಿಂದ ಮಲ್ಲಕಂಬ, ಯೋಗ ಕಲಿತರು. ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಾಲ್ಕರಿಂದ ಎಂಟನೇ ತರಗತಿವರೆಗೆ ಓದಿದ ಅವರು, ಶಿಕ್ಷಕರಾದ ರಂಜಿತ್ ಹಾಗೂ ಬಸವರಾಜ ಬಂಡಿವಾಡ ಅವರಿಂದ ಯೋಗ, ಮಲ್ಲಕಂಬದಲ್ಲಿ ಹೆಚ್ಚಿನ ತರಬೇತಿ ಪಡೆದರು. ಸದ್ಯ ಅವರು ಗುಡಗೇರಿ ಗ್ರಾಮದ ಸರ್ಕಾರಿ ಪದವಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಎ. ಓದುತ್ತಿದ್ದಾರೆ.
ಛತ್ತೀಸಗಢದ ದುರ್ಗದಲ್ಲಿ ಸೆ.12ರಿಂದ 14ರವರೆಗೆ ನಡೆದ ಆರನೇ ರಾಷ್ಟ್ರೀಯ ಯೋಗ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ, ಕಳೆದ ತಿಂಗಳು ಉತ್ತರಾಖಂಡದಲ್ಲಿ ನಡೆದ 38ನೇ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ.
2022ರಲ್ಲಿ ಖೇಲೊ ಇಂಡಿಯಾ ಯೂತ್ ಗೇಮ್ಸ್‌ನ ಮಲ್ಲಕಂಬ ಸ್ಪರ್ಧೆಯಲ್ಲಿ 8ನೇ ಸ್ಥಾನ, 2023ರಲ್ಲಿ ದೆಹಲಿಯಲ್ಲಿ ಸ್ಕೂಲ್ ಗೇಮ್ ಫೆಡರೇಷನ್ ಆಫ್ ಇಂಡಿಯಾದಿಂದ ನಡೆದ ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 2024ರಲ್ಲಿ ಪುದುಚೇರಿ ಸರ್ಕಾರ ಮತ್ತು ಭಾರತೀಯ ಪ್ರವಾಸೋದ್ಯಮ ಇಲಾಖೆ ನಡೆಸಿದ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.
2024–25ರಲ್ಲಿ ಒಡಿಶಾ, ಮಧ್ಯಪ್ರದೇಶದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಯೋಗಾಸನ, ಮಲ್ಲಕಂಬ ಸ್ಪರ್ಧೆಯಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ಕ್ರೀಡೆಯ ಜತೆಗೆ ಓದಿನಲ್ಲೂ ಮುಂಚೂಣಿಯಲ್ಲಿರುವ ಅವರು ಎಸ್‌ಎಸ್‌ಎಲ್‌ಸಿಯಲ್ಲಿ ಶೇ 96, ಪಿಯುಸಿಯಲ್ಲಿ ಶೇ 95ರಷ್ಟು ಅಂಕ ಗಳಿಸಿದ್ದಾರೆ. ಕರ್ನಾಟಕ ಬಾಲ ವಿಕಾಸ ಅಕಾಡೆಮಿಯಿಂದ ‘ಬಾಲ ಗೌರವ ಪ್ರಶಸ್ತಿ’, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ‘ಅಸಾಧಾರಣ ಪ್ರತಿಭೆ ಪುರಸ್ಕಾರ’ ಲಭಿಸಿದೆ. ಅನನ್ಯ ಅವರು ಓದಿನ ಜತೆಗೆ ‘ಜಾನಪದ ಕ್ರೀಡಾ ರಂಗ ಕುಟೀರ’ದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಯೋಗ ಮತ್ತು ಮಲ್ಲಕಂಬ ತರಬೇತಿ ನೀಡುತ್ತಿದ್ದಾರೆ.
2028ರಲ್ಲಿ ಜಪಾನ್‌ನಲ್ಲಿ ಏಷ್ಯನ್ ಯೋಗಾಸನ ಚಾಂಪಿಯನ್‌ಷಿಪ್ ನಡೆಯಲಿದ್ದು ಅದಕ್ಕಾಗಿ ಅನನ್ಯ ತರಬೇತಿ ಪಡೆಯುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಸಾಮರ್ಥ್ಯ ಅವರಲ್ಲಿದೆರಂಜಿತ್ ತರಬೇತುದಾರ
ನನ್ನ ತಂದೆ ಸಾಂಬಯ್ಯ ಹಿರೇಮಠ ಜಾನಪದ ಕಲಾವಿದರು. ನನ್ನ ಸಾಧನೆಗೆ ತಂದೆ ಸಹೋದರ ಸ್ಫೂರ್ತಿ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲಬೇಕು ಎಂಬ ಗುರಿ ಹೊಂದಿದ್ದೇನೆಅನನ್ಯ ಹಿರೇಮಠ ಯೋಗ ಪಟು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.