ADVERTISEMENT

ಬೇಂದ್ರೆ ನಾಟ್ಯ, ಕಲಾ ಯೋಗಶಾಲೆ ಆರಂಭ: ಪ್ರೊ. ಕೆ.ಎಸ್‌.ಶರ್ಮಾ

ದ.ರಾ.ಬೇಂದ್ರೆ ಜನ್ಮ ದಿನಾಚರಣೆ ಹಾಗೂ ಕೃತಿಗಳ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 10:30 IST
Last Updated 11 ಫೆಬ್ರುವರಿ 2020, 10:30 IST
ದ.ರಾ ಬೇಂದ್ರೆ ಅವರ 125ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮೂರು ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಪ್ರೊ.ಕೆ.ಎಸ್‌.ಕೌಜಲಗಿ, ಡಾ.ಕೆ.ಎಸ್‌.ಶರ್ಮಾ, ಡಾ.ಕೆ.ಸಿ.ಶಿವಾರೆಡ್ಡಿ, ಡಾ.ಶಶಿಧರ ನರೇಂದ್ರ ಇದ್ದಾರೆ
ದ.ರಾ ಬೇಂದ್ರೆ ಅವರ 125ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮೂರು ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಪ್ರೊ.ಕೆ.ಎಸ್‌.ಕೌಜಲಗಿ, ಡಾ.ಕೆ.ಎಸ್‌.ಶರ್ಮಾ, ಡಾ.ಕೆ.ಸಿ.ಶಿವಾರೆಡ್ಡಿ, ಡಾ.ಶಶಿಧರ ನರೇಂದ್ರ ಇದ್ದಾರೆ   

ಹುಬ್ಬಳ್ಳಿ: ಬೇಂದ್ರೆ ಸಂಶೋಧನಾ ಸಂಸ್ಥೆ ವತಿಯಿಂದ ನಾಟ್ಯ ಯೋಗಶಾಲೆ, ಕಲಾ ಯೋಗ ಶಾಲೆ ಆರಂಭಿಸುವ ಯೋಜನೆ ಇದೆ ಎಂದು ಸಂಸ್ಥೆ ನಿರ್ದೇಶಕ ಡಾ. ಕೆ.ಎಸ್‌.ಶರ್ಮಾ ತಿಳಿಸಿದರು.

ಬೇಂದ್ರೆ ಸಂಶೋಧನಾ ಸಂಸ್ಥೆ ವತಿಯಿಂದ ಸೋಮವಾರ ಇಲ್ಲಿನ ಕೆ.ಎಸ್‌.ಶರ್ಮಾ ನೂತನ ಸಭಾಂಗಣದಲ್ಲಿ ಏರ್ಪಡಿಸಿದ್ದ ದ.ರಾ.ಬೇಂದ್ರೆ ಅವರ 125ನೇ ಜನ್ಮದಿನಾಚರಣೆ ಹಾಗೂ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಭಾರತ ಹುಣ್ಣಿಮೆಯ ಮರುದಿನ ಪ್ರತಿ ವರ್ಷ ಬೇಂದ್ರೆ ಅವರ ಜನ್ಮ ದಿನ ಆಚರಿಸಲಾಗುತ್ತಿದೆ. ಈ ಬಾರಿ ಸಾಹಿತಿಗಳ ಕೃತಿಗಳನ್ನು ಬಿಡುಗಡೆ ಮಾಡುತ್ತಿರುವುದು ವಿಶೇಷ ಎಂದರು.

‘ಹಕ್ಕಿಗೆ ಗರಿ, ಕವಿಗೆ ಕವನ’ ಕುರಿತು ಮಾತನಾಡಿದ ಹಂಪಿ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಕೆ.ಸಿ. ಶಿವಾರೆಡ್ಡಿ, ‘ಬೇಂದ್ರೆ ಅವರ ಗರಿ ಕವನ ಸಂಕಲನದ ಪ್ರತಿ ಸಾಲು ಇಂದಿನ ಜ್ವಲಂತ ಸಮಸ್ಯೆ, ರಾಜಕೀಯವನ್ನು ವಿಡಂಬಿಸುವಂತಿದೆ. ಭೂಮಂಡಲದ ಮೇಲಿನ ದುಃಖ, ಅಸ್ಪೃಶ್ಯತೆ ನಿವಾರಣೆಯಾಗಬೇಕೆಂಬ ಬೇಂದ್ರೆಯವರ ಕಾವ್ಯದ ಆಶಯ ಇಂದಿಗೂ ಈಡೇರಿಲ್ಲ’ ಎಂದು ವಿಷಾದಿಸಿದರು.

ADVERTISEMENT

‘ಅಂಬಿಕಾತನಯ ದತ್ತ’ ನಾಟಕದ ಕುರಿತು ಮಾತನಾಡಿದ ಸಾಹಿತಿ, ನಾಟಕಕಾರ ಡಾ.ಶಶಿಧರ ನರೇಂದ್ರ, ‘ಬೇಂದ್ರೆ ಹೆಸರಿನ ಮೂಲಕವೇ ಅಸ್ಮಿತೆ ಕಂಡುಕೊಂಡಿರುವುದು ನಮ್ಮೆಲ್ಲರ ಹೆಮ್ಮೆ’ ಎಂದು ಅಭಿಪ್ರಾಯಪಟ್ಟರು.

‘ಅಂಬಿಕಾತನಯ ದತ್ತ ನಾಟಕ 1999ರಲ್ಲಿ ರಚನೆಯಾದರೂ ಈಗ ಕೃತಿರೂಪಕ್ಕೆ ತರಲಾಗಿದೆ. ಬೇಂದ್ರೆ ಅವರ ಜೀವನದ ಘಟ್ಟಗಳನ್ನು ಕೃತಿಯಲ್ಲಿ ಕಟ್ಟಿಕೊಡಲಾಗಿದೆ. ಗಮಕ, ಯಕ್ಷಗಾನ, ನಿರೂಪಣೆ, ಭಾವಗೀತೆ, ಭಕ್ತಿಗೀತೆ ಎಲ್ಲವೂ ಇದರಲ್ಲಿವೆ. ಅನುಭಾವಿ ಕವಿಯ ಜೀವನಾಧರಿತ ನಾಟಕ ಬರೆದಿರುವುದು ನನ್ನ ಪುಣ್ಯ’ ಎಂದರು.

‘ಭೂಪಟದಲ್ಲಿ ಧಾರವಾಡ ತನ್ನದೇ ವೈಶಿಷ್ಟ್ಯ ಹೊಂದಿದೆ. ಹಲವು ಸಂಗೀತ ದಿಗ್ಗಜರು ಹಾಗೂ ಸಾಹಿತಿಗಳನ್ನು ಸಂಗೀತ, ಸಾರಸ್ವತ ಲೋಕಕ್ಕೆ ನೀಡಿದೆ. ಸಂಗೀತದಲ್ಲಿ ಭೀಮಸೇನ ಜೋಶಿ, ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು ಹಾಗೂ ಗಂಗೂಬಾಯಿ ಹಾನಗಲ್‌ ಅವರಂತೆ ಸಾಹಿತ್ಯದಲ್ಲಿ ಬೇಂದ್ರೆ ಅವರೇ ಅಗ್ಯಗಣ್ಯರು ಎಂದು ಹೇಳಿದರು.

ಬಿಡುಗಡೆಯಾದ ಕೃತಿಗಳು

ನಾಟಕಕಾರ ಡಾ.ಶಶಿಧರ ನರೇಂದ್ರ ಅವರ ‘ಅಂಬಿಕಾತನಯ ದತ್ತ’, ಡಾ. ಕೆ.ಸಿ.ಶಿವಾರೆಡ್ಡಿ ಅವರ ‘ಹಕ್ಕಿಗೆ ಗರಿ, ಕವಿಗೆ ಕವನ’ ಹಾಗೂ ಡಾ.ಕೆ.ಎಸ್‌.ಶರ್ಮಾ ವಿರಚಿತ ‘ಶಬ್ದಬ್ರಹ್ಮ ಬೇಂದ್ರೆಯವರ ಇಂಗ್ಲಿಷ್‌–ಕನ್ನಡ ಶಬ್ದಕೋಶ’ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ.ಕೆ.ಎಸ್‌.ಕೌಜಲಗಿ, ಶ್ಯಾಮಸುಂದರ ಬಿದರಕುಂದಿ, ಪುನರ್ವಸು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.