ADVERTISEMENT

ಯೋಗೀಶಗೌಡ ಕೊಲೆ ಪ್ರಕರಣ: ಸಿಬಿಐ ಅಧಿಕಾರಿಗಳಿಂದ ಹಲವರ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 13:27 IST
Last Updated 17 ಸೆಪ್ಟೆಂಬರ್ 2020, 13:27 IST
ಧಾರವಾಡ ಉಪನಗರ ಪೊಲೀಸ್‌ ಠಾಣೆಗೆ ವಿಚಾರಣೆಗೆ ತೆರಳುತ್ತಿರುವ ಯೋಗೀಶಗೌಡ ಗೌಡರ್‌ ಅವರ ಪತ್ನಿ ಮಲ್ಲಮ್ಮ 
ಧಾರವಾಡ ಉಪನಗರ ಪೊಲೀಸ್‌ ಠಾಣೆಗೆ ವಿಚಾರಣೆಗೆ ತೆರಳುತ್ತಿರುವ ಯೋಗೀಶಗೌಡ ಗೌಡರ್‌ ಅವರ ಪತ್ನಿ ಮಲ್ಲಮ್ಮ    

ಧಾರವಾಡ: ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಯೋಗೀಶಗೌಡ ಗೌಡರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಅಧಿಕಾರಿಗಳು ಗುರುವಾರ ಒಂದೇ ದಿನ ಹಲವರ ವಿಚಾರಣೆ ನಡೆಸಿದ್ದಾರೆ.

ನಗರದ ಉಪನಗರ ಪೊಲೀಸ್‌ ಠಾಣೆಯಲ್ಲಿ ಬೆಳಿಗ್ಗೆಯಿಂದ ವಿಚಾರಣೆ ಆರಂಭಿಸಿದ ಸಿಬಿಐ ಅಧಿಕಾರಿಗಳು, ಯೋಗೀಶಗೌಡ ಅವರ ಪತ್ನಿ ಮಲ್ಲಮ್ಮ ಗೌಡರ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಮಲ್ಲಮ್ಮ ಅವರ ಸಹೋದರಿ ಸುಮಾ, ಹೋಟೆಲ್‌ ಉದ್ಯಮಿ ಮಹೇಶ ಶೆಟ್ಟಿ, ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ, ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಆಪ್ತ ಪ್ರಶಾಂತ ಕೇಕರೆ ಹಾಗೂ ಮಲ್ಲಮ್ಮ ಗೌಡರ ಕಾರು ಚಾಲಕನನ್ನು ತೀವ್ರವಾಗಿ ವಿಚಾರಿಸಿದ್ದಾರೆ.

ರಾಜಿ ಸಂಧಾನದಲ್ಲಿ ಭಾಗಿಯಾದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯಮಿ ಮಹೇಶ ಶೆಟ್ಟಿ ಅವರನ್ನೂ ಸಂಜೆಯವರೆಗೂ ವಿಚಾರಣೆಗೆ ಒಳಪಡಿಸಿದರು. ಅಲ್ಲದೇ ಮಲ್ಲಮ್ಮ ಅವರು ಕಾಂಗ್ರೆಸ್ ಪಕ್ಷ ಸೇರಿದ್ದರ ಹಿನ್ನೆಲೆ ಕುರಿತು ಶಿವಾನಂದ ಕರಿಗಾರ ಮತ್ತು ನಾಗರಾಜ ಗೌರಿ ಅವರನ್ನು ತನಿಖೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಬೆಳಿಗ್ಗೆ 10 ರಿಂದ ಸಂಜೆ 4ರವರೆಗೆ ಮಲ್ಲಮ್ಮ ಅವರು ಕಾಂಗ್ರೆಸ್ ಪಕ್ಷ ಸೇರಿದ್ದರ ಬಗ್ಗೆ, ಅವರ ಕುಟುಂಬದ ಹಿನ್ನೆಲೆ ಕುರಿತು ಹಲವರಿಂದ ಮಾಹಿತಿ ಕಲೆ ಹಾಕಿದರು. ಮಲ್ಲಮ್ಮ ಅವರನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ, ‘ತನಗೆ ಶಸ್ತ್ರಚಿಕಿತ್ಸೆ ಆಗಿದ್ದು, ಹೊಡೆಯಬೇಡಿ’ ಎಂದು ಅಧಿಕಾರಿಗಳನ್ನು ಬೇಡಿಕೊಂಡರು ಎಂದು ತಿಳಿದುಬಂದಿದೆ.

ಲಾಕ್‌ಡೌನ್ ಪೂರ್ವದಲ್ಲಿ ಇವರೆಲ್ಲರನ್ನೂ ವಿಚಾರಣೆಗೊಳಪಡಿಸಿದ್ದ ಸಿಬಿಐ ಅಧಿಕಾರಿಗಳು,ಗುರುವಾರ ಮರು ವಿಚಾರಣೆ ನಡೆಸಿದ್ದಾರೆ. ಎಂಟು ಜನರಿದ್ದ ಸಿಬಿಐ ತಂಡ ಇವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.