ಹುಬ್ಬಳ್ಳಿ: ಯೂಟ್ಯೂಬರ್ ಖ್ವಾಜಾ ಶಿರಹಟ್ಟಿ ಅಲಿಯಾಸ್ ಮುಕುಳೆಪ್ಪ ವಿರುದ್ಧ ದಾಖಲಾಗಿದ್ದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ, ಅವರ ಪತ್ನಿ ಗಾಯತ್ರಿ ಅವರನ್ನು ಸೋಮವಾರ ವಿದ್ಯಾನಗರ ಠಾಣೆಯಲ್ಲಿ ವಿಚಾರಣೆ ನಡೆಸಲಾಯಿತು.
‘ಖ್ವಾಜಾ ಅವರು ಮಗಳಿಗೆ ಮೋಸ ಮಾಡಿ ಅಪಹರಿಸಿಕೊಂಡು ಹೋಗಿ ಮದುವೆಯಾಗಿದ್ದಾರೆ’ ಎಂದು ಗಾಯತ್ರಿ ಅವರ ತಾಯಿ ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಹಳೇ ಹುಬ್ಬಳ್ಳಿ ಠಾಣೆ ಬದಲು, ವಿದ್ಯಾನಗರ ಠಾಣೆಗೆ ಅವರನ್ನು ಕರೆತಂದಿದ್ದರು.
ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಗಾಯತ್ರಿ, ‘ಎರಡು ವರ್ಷಗಳಿಂದ ನಾವು ಪ್ರೀತಿಸುತ್ತಿದ್ದು, ಎರಡು ತಿಂಗಳ ಹಿಂದೆ ಸ್ವ ಇಚ್ಛೆಯಿಂದ ಅವರನ್ನು ಮದುವೆಯಾಗಿದ್ದೇನೆ. ಅಪ್ಪ–ಅಮ್ಮನಿಗೂ ಇದು ತಿಳಿದಿದ್ದು, ಅವರ ಒಪ್ಪಿಗೆಯೂ ಇತ್ತು’ ಎಂದರು.
‘ಯುವತಿ ವಯಸ್ಕಳಾಗಿದ್ದು, ಸ್ವಇಚ್ಛೆಯಿಂದ ಮದುವೆಯಾಗಿರುವುದಾಗಿ ಹೇಳಿದ್ದಾರೆ. ಒತ್ತಾಯಪೂರ್ವವಾಗಿ ಬೆದರಿಕೆ ಹಾಕಿ ಮದುವೆ ಮಾಡಿಕೊಂಡಿದ್ದಾನೆ ಎಂದು ಅವರು ಹೇಳಿಕೆ ನೀಡಿದ್ದರೆ ಕ್ರಮ ಕೈಗೊಳ್ಳಬಹುದಿತ್ತು. ಹೀಗಾಗಿ ಅಪಹರಣದ ಆರೋಪದಲ್ಲಿ ಹುರುಳಿಲ್ಲ’ ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.