ADVERTISEMENT

ಅಭಿವೃದ್ಧಿ ಕಡೆಗಣಿಸಿದ ಬಿಜೆಪಿ, ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 7:07 IST
Last Updated 1 ಡಿಸೆಂಬರ್ 2017, 7:07 IST

ರೋಣ: ಜ್ಞಾನದೇವ ದೊಡ್ಡಮೇಟಿ ಅವರ ನಂತರ ಹಲವರು ರೋಣ ಮತಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ, ಯಾರೊಬ್ಬರೂ ಬಡವರ, ದೀನದಲಿತರ ಪರವಾಗಿ ಕೆಲಸ ಮಾಡಿಲ್ಲ. ರೈತರ ಕಷ್ಟಗಳಿಗೆ ಸ್ಪಂದಿಸಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಬುಧವಾರ ‘ಮನೆ ಮನೆಗೆ ಕುಮಾರಣ್ಣ’ ಮತ್ತು ‘ಕುಮಾರಪರ್ವ–2018’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 10 ವರ್ಷಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಸರ್ಕಾರಗಳು ಆಡಳಿತ ನಡೆಸಿದ್ದು, ರೈತರ ಆತ್ಮಹತ್ಯೆಗಳು ನಿಂತಿಲ್ಲ. ರೈತರು ಬೆಳೆದ ಬೆಳೆಗೆ ಸಮರ್ಪಕ ಬೆಂಬಲ ಬೆಲೆ ಸಿಗದೇ ರೈತ ಸಮುದಾಯ ಸಾಲದ ಸುಳಿಯಲ್ಲಿ ಸಿಲುಕಿದೆ ಎಂದು ದೂರಿದರು.

ಡಿ. 31ರಂದು ಅಭ್ಯರ್ಥಿ ಆಯ್ಕೆ: ಜೆಡಿಎಸ್ ವರಿಷ್ಠ ದೇವೆಗೌಡ ಹಾಗೂ ಕುಮಾರಸ್ವಾಮಿ ಸೇರಿ ಡಿ. 31ರಂದು ರೋಣ ಮತಕ್ಷೇತ್ರದ ಅಭ್ಯರ್ಥಿ ಯಾರು ಎಂದು ಪ್ರಕಟಿಸಲಿದ್ದಾರೆ. ರವೀಂದ್ರನಾಥ ದೊಡ್ಡಮೇಟಿ, ಮಕ್ತುಂಸಾಬ್ ಸಾಗರ, ನಿಂಗನಗೌಡ ಪಾಟೀಲ, ಎಚ್.ಎಸ್.ಸೊಂಪುರ, ಮುತ್ತಣ್ಣ ಮ್ಯಾಗೇರಿ ಸೇರಿ ಐದು ಜನ ಆಕಾಂಕ್ಷಿಗಳು ಇದ್ದು, ಇದರಲ್ಲಿ ಒಬ್ಬರನ್ನು ಪಕ್ಷ ಅಧಿಕೃತವಾಗಿ ಅಭ್ಯರ್ಥಿಯಾಗಿ ಆಯ್ಕೆ ಮಾಡುತ್ತದೆ. ಎಲ್ಲರೂ ಒಗ್ಗಟ್ಟಿನಿಂದ ಪಕ್ಷ ಸಂಘಟಿಸಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದರು.

ADVERTISEMENT

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಮಕ್ತುಂಸಾಬ್ ಸಾಗರ ಮಾತನಾಡಿ, ‘ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಎಲ್ಲ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ’ ಎಂದರು.

ಮುಖಂಡ ಎಚ್.ಎಸ್.ಸೊಂಪುರ ಮಾತನಾಡಿ, ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವರಿಂದ ರೋಣ ಮತಕ್ಷೇತ್ರದ ಅಭಿವೃದ್ಧಿ ಅಸಾಧ್ಯ’ ಎಂದರು ರವೀಂದ್ರ ದೊಡ್ಡಮೇಟಿ, ಶ್ರೀಪಾದಪ್ಪ ಹರಕೇರಿ, ನಿಂಗನಗೌಡ ಪಾಟೀಲ, ಶೇಕಮ್ಮ ಹೊಸಮನಿ, ಬಸವರಾಜ ಮಾಳೋತ್ತರ, ಗುರುರಾಜ ಕುಲಕರ್ಣಿ, ಎಂ.ಎಸ್.ಪಾಟೀಲ, ರಮೇಶ ಕಲಬುರ್ಗಿ, ಎಸ್. ನಾರಾಯಣಸ್ವಾಮಿ, ಉಮೇಶ ಮಲ್ಲಾಪುರ, ಷಣ್ಮುಖಪ್ಪ ಕಮ್ಮಾರ, ಸಂಜಯ ಜೋಶಿ, ಭಾಗ್ಯಶ್ರೀ ಲಮಾಣಿ, ಅಂಬಿಕಾ ಕಬಾಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.