ADVERTISEMENT

ಡಕೋಟಾ ಬಸ್‌ಗಳ ದರ್ಬಾರ್...!

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 7:45 IST
Last Updated 20 ಫೆಬ್ರುವರಿ 2012, 7:45 IST
ಡಕೋಟಾ ಬಸ್‌ಗಳ ದರ್ಬಾರ್...!
ಡಕೋಟಾ ಬಸ್‌ಗಳ ದರ್ಬಾರ್...!   

ಲಕ್ಷ್ಮೇಶ್ವರ: ಸ್ಥಳೀಯ ಎನ್‌ಡಬ್ಲೂಕೆಎಸ್‌ಆರ್‌ಟಿಸಿ ಘಟಕದಲ್ಲಿ ಡಕೋಟಾ ಬಸ್‌ಗಳೇ ತುಂಬಿದ್ದು ಈಗ ಘಟಕ `ಡಕೋಟಾ~ ಬಸ್‌ಗಳ ದರ್ಬಾರ್ ಆಗಿ ಮಾರ್ಪಾಟುಗೊಂಡಿದೆ. 

ಇಲ್ಲಿನ ಬಹಳಷ್ಟು ಬಸ್‌ಗಳಿಗೆ ಬಾಗಿಲು ಇಲ್ಲ, ಕಿಟಕಿ ಇಲ್ಲ, ಕಿಟಕಿ ಇದ್ದರೂ ಗ್ಲಾಸ್ ಇಲ್ಲ, ಸ್ಟಾರ್ಟ್‌ರ್ ಇಲ್ಲ ಹೋಗಲಿ ಕೊನೆಗೆ ಲೈಟ್ ಕೂಡ ಇಲ್ಲ. ಹೀಗೆ ಈ ಎಲ್ಲ `ಇಲ್ಲಗಳ~ ನಡುವೆ ಇನ್ನೂ ಘಟಕದ ಬಸ್‌ಗಳು ಓಡಾಡುತ್ತಿರುವುದೇ ಒಂದು ಪವಾಡವಾಗಿದೆ.

ಅಂದಾಜು ನೂರಕ್ಕೂ ಹೆಚ್ಚು ಬಸ್‌ಗಳು ನಿತ್ಯವೂ ಎಂಭತ್ತೆಂಟು ಶೆಡ್ಯೂಲ್‌ಗಳಲ್ಲಿ ಸಂಚರಿಸುತ್ತಿವೆ. ವಿಚಿತ್ರ ಎಂದರೆ ಹುಬ್ಬಳ್ಳಿಗೆ ಸಂಚರಿಸುವ ಬಸ್‌ಗಳನ್ನು ಹೊರತುಪಡಿಸಿದರೆ ಇನ್ನಿತರ ಊರುಗಳಿಗೆ ಓಡಾಡುವ ಬಸ್‌ಗಳ ಸ್ಥಿತಿ ಬಹಳ ಶೋಚನೀಯವಾಗಿವೆ.

ಒಮ್ಮೆ ಬಸ್‌ನಲ್ಲಿ ಹತ್ತಿದ ಪ್ರಯಾಣಿಕ ಅದರ ಸ್ಥಿತಿ ಕಂಡು `ಬಸ್‌ನಲ್ಲಿ ಯಾಕಾದರೂ ಹತ್ತಿದೆ~ ಎಂದು ಬೇಸರಪಟ್ಟುಕೊಳ್ಳುವುದು ಗ್ಯಾರಂಟಿ!. ಇಷ್ಟರ ಮಟ್ಟಿಗೆ ಘಟಕದ ಬಸ್‌ಗಳು ದುರವಸ್ಥೆ ಹಂತ ತಲುಪಿವೆ.

ಕೆಲವೊಂದು ಬಸ್‌ಗಳ ಕಿಟಕಿ ಗಾಜುಗಳು ಒಡೆದಿದ್ದರೆ ಇನ್ನು ಕೆಲವು ಬಸ್‌ಗಳ ಒಳಗಿನ ಲಗೇಜ್ ಇಡುವ ಸೆಲ್ಪ್ ಸಂಪೂರ್ಣ ಗಿಗ್ಗಳವಾಗಿ ಅಲುಗಾ ಡುತ್ತಿದ್ದು ಯಾವಾಗಬೇಕಾದರೂ ಪ್ರಯಾಣಿಕರ ಮೇಲೆ ಕತ್ತಿರಿಸಿ ಬಿದ್ದು ಅವರ ಪ್ರಾಣಕ್ಕೆ ಸಂಚಕಾರ ಬಂದೊದಗಿದರೆ ಅದರಲ್ಲಿ ಅಚ್ಚರಿ ಇಲ್ಲ.

ಕಿಟಕಿಗಳಿಗೆ ಗಾಜು ಇಲ್ಲದ್ದರಿಂದ ಮಳೆಗಾಲದಲ್ಲಿ ಮಳೆ ನೀರು ಬಸ್ ಒಳಗೆ ನುಗ್ಗಿ ಪ್ರಯಾಣಿಕರಿಗೆ ಬಹಳ ತೊಂದರೆ ನೀಡುತ್ತದೆ. ಬಸ್ ಓಡಲು ಶುರುವಾದೊಡನೆ `ಡಗಾ...ಡಗಾ...~ ಎಂಬ ಕರ್ಕಶ ಶಬ್ದಕ್ಕೆ ಕೆಲವು ಪ್ರಯಾಣಿಕರಿಗೆ ಹೆದರಿಕೆ ಆದರೆ ಮತ್ತೆ ಕೆಲವರಿಗೆ ತೀವ್ರ ಕಿರಿಕಿರಿ ಆಗುತ್ತದೆ. 

ಪ್ರಯಾಣಿಕರು ಅವುಗಳ ಮೇಲೆ ಕುಳಿತುಕೊಳ್ಳಲು ಮೀನ-ಮೇಷ ಎಣಿಸುತ್ತಾರೆ. ಅಷ್ಟೊಂದು ಆಸನಗಳು ಮೂರಾಬಟ್ಟೆಯಾಗಿವೆ. ವರ್ಷದಿಂದ ವರ್ಷಕ್ಕೆ ಸಂಸ್ಥೆ ಬಸ್ ದರ ಹೆಚ್ಚಿಸುತ್ತಿದ್ದರೂ ಗುಣಮಟ್ಟದ ಸೇವೆ ಮಾತ್ರ ಕನಸಿನ ಮಾತಾಗಿದೆ.

ಒಂದು ಕಾಲದಲ್ಲಿ ಲಕ್ಷ್ಮೇಶ್ವರ ಘಟಕ ಇಡೀ ಗದಗ ಜಿಲ್ಲೆಯಲ್ಲಿಯೇ ಹೆಚ್ಚಿನ ಆದಾಯ ತರುವ ಘಟಕ ಎಂಬ ಕೀರ್ತಿಗೆ ಪಾತ್ರವಾಗಿತ್ತು. ಆದರೆ ಡಕೋಟಾ ಬಸ್‌ಗಳಿಂದಾಗಿ ಇಂದು ಘಟಕದ ಆದಾಯದಲ್ಲಿ ತೀವ್ರ ಕುಸಿತವಾಗಿದೆ. ಇಲ್ಲಿಗೆ ಕೆಲವೊಂದಿಷ್ಟು ಹೊಸ ಬಸ್‌ಗಳು ಬಂದಿವೆ. ಆದರೆ ಅವುಗಳನ್ನು ಕೇವಲ ಹುಬ್ಬಳ್ಳಿಗೆ ಓಡಾಡುವ ವ್ಯವಸ್ಥೆ ಮಾಡಲಾಗಿದೆ.

ಇನ್ನುಳಿದ ಕಡೆ ಅವೇ ಡಕೋಟಾ ಬಸ್‌ಗಳೇ ಓಡಾಡಬೇಕು. ಹದಗೆಟ್ಟ ಬಸ್‌ಗಳಿಂದಾಗಿ ಸರಿಯಾದ ವೇಳೆಗೆ ಬಸ್ ಸಂಚರಿಸುವುದಿಲ್ಲ. ಹೀಗಾಗಿ ನಿಲ್ದಾಣದಲ್ಲಿ ಬಸ್‌ಗಾಗಿ ದಿನಾಲೂ ಪ್ರಯಾಣಿಕರ ಒಂದಾದರೂ ರಗಳೆ ಇದ್ದೇ ಇರುತ್ತದೆ.

ಡಕೋಟಾ ಬಸ್ ಓಡಿಸಿಯೇ ಚಾಲಕರು ಸಂಸ್ಥೆಗೆ ನಿಗದಿತ ಆದಾಯ ತರಬೇಕು ಎಂದು ಅಧಿಕಾರಿಗಳು ಒತ್ತಾಯಿಸುತ್ತಾರೆ. ಆದರೆ ಒಮ್ಮೆ ನಿಂತ ಬಸ್ ಪುನಃ ಚಾಲೂ ಆದರೆ ಅದು ಚಾಲಕನ ಪುಣ್ಯ. ಇಂಥ ಪರಿಸ್ಥಿತಿಯಲ್ಲಿ ಚಾಲಕರು ನಿಗದಿತ ವೇಳೆಗೆ ಬಸ್ ಓಡಿಸಿ ಆದಾಯ ತರುವುದು ಕಷ್ಟ. ಒಟ್ಟಿನಲ್ಲಿ ಇಲ್ಲಿನ ಎನ್‌ಡಬ್ಲೂಕೆಎಸ್‌ಆರ್‌ಟಿಸಿ ಘಟಕ ಕಾಯಕಲ್ಪಕ್ಕೆ ಕಾದಿದ್ದು ಹೊಸ ಬಸ್‌ಗಳನ್ನು ಎದಿರು ನೋಡುತ್ತಿದೆ. 

ಸಂಸ್ಥೆಯ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಘಟಕದ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಒಂದು ದಿನ ಘಟಕದ ಕದ ಮುಚ್ಚಿದರೆ ಅದರಲ್ಲಿ ಯಾವುದೇ ಆಶ್ಚರ್ಯ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.