ADVERTISEMENT

ನೀರಿಗಾಗಿ ಖಾಲಿ ಕೊಡ ಪ್ರದರ್ಶನ, ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2013, 11:02 IST
Last Updated 30 ಜುಲೈ 2013, 11:02 IST
ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿ ಗದುಗಿನ ಮುಳಗುಂದ ನಾಕಾ ವೃತ್ತದಲ್ಲಿ  ದಾಸರ ಓಣಿಯ ನಿವಾಸಿಗಳು ಸೋಮವಾರ ಖಾಲಿ ಕೊಡ ಪ್ರದರ್ಶಿಸಿ ರಸ್ತೆತಡೆ ನಡೆಸಿದರು.
ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿ ಗದುಗಿನ ಮುಳಗುಂದ ನಾಕಾ ವೃತ್ತದಲ್ಲಿ ದಾಸರ ಓಣಿಯ ನಿವಾಸಿಗಳು ಸೋಮವಾರ ಖಾಲಿ ಕೊಡ ಪ್ರದರ್ಶಿಸಿ ರಸ್ತೆತಡೆ ನಡೆಸಿದರು.   

ಗದಗ: ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿ ನಗರದ ದಾಸರ ಓಣಿಯ ನಿವಾಸಿಗಳು ಸೋಮವಾರ ಖಾಲಿ ಕೊಡ ಪ್ರದರ್ಶಿಸಿ ರಸ್ತೆ ತಡೆ ನಡೆಸಿದರು. 

ವಾರ್ಡ್ ನಂ 32 ಸೇರಿದಂತೆ ಸುತ್ತಮುತ್ತಲ ವಾರ್ಡ್ ನಿವಾಸಿಗಳು ಮುಳಗುಂದ ನಾಕಾ ವೃತ್ತದ ಬಳಿ ಖಾಲಿ ಕೊಡಗಳನ್ನು ಪ್ರದರ್ಶಿಸಿ `ನೀರು ಕೊಡಿ' ಎಂದು ಕೂಗಿದರು. ನಗರಸಭೆ ಹಾಗೂ ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿದರು. ಒಂದು ಗಂಟೆಗೂ ಹೆಚ್ಚು ರಸ್ತೆ ತಡೆ ನಡೆಸಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತು. ಕಿ.ಮೀ. ಉದ್ದಕ್ಕೂ ವಾಹನ ನಿಂತ ಪರಿಣಾಮ ಪ್ರಯಾಣಿಕರು ಪರದಾಡಿದರು. ಜಿಲ್ಲಾಧಿಕಾರಿ ಹಾಗೂ ನಗರಸಭೆ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಪಟ್ಟು ಹಿಡಿದರು.

`25 ದಿನಗಳಿಂದ ನೀರು ಪೂರೈಕೆ ಮಾಡಿಲ್ಲ. ಕೇಳಿದರೆ ಪೈಪ್‌ಲೈನ್ ರಿಪೇರಿ ಎನ್ನುತ್ತಾರೆ. ಅಪರೂಪಕ್ಕೆ ಬಿಟ್ಟ ನೀರು ಸಹ ಅಶುದ್ಧವಾಗಿರುತ್ತದೆ. ಹಿರಿಯ ಅಧಿಕಾರಿಗಳು ಬರುವವರೆಗೂ ಸ್ಥಳ ಬಿಟ್ಟು ಹೋಗುವುದಿಲ್ಲ. ಏಳು ದಿನಕ್ಕೆ ನೀರು ಪೂರೈಕೆ ಮಾಡಲಾಗುವುದು ಎಂದವರು ತಿಂಗಳು ಕಳೆದರೂ ನೀರು ಬಿಟ್ಟಿಲ್ಲ. ವಾರಕ್ಕೊಮ್ಮೆಯಾದರೂ ನೀರು ಪೂರೈಕೆ ಮಾಡುವ ಲಿಖಿತ ಭರವಸೆ ನೀಡಬೇಕು' ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಮನವೊಲಿಸಲು ಬಂದ ಪೊಲೀಸರು ಮತ್ತು ಅಧಿಕಾರಿಗಳನ್ನು ಪ್ರತಿಭಟನಾಕಾರರು ತರಾಟೆ ತೆಗೆದುಕೊಂಡರು. ವಾಹನಗಳ ಸಾಲುಗಟ್ಟಿ ನಿಂತ ಪರಿಣಾಮ ಸಂಚಾರ ಸಮಸ್ಯೆ ಮತ್ತಷ್ಟು ಹೆಚ್ಚಾಯಿತು. ಲಿಖಿತ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡುವುದಾಗಿ ಪ್ರತಿಭಟನಾಕಾರರು ಪಟ್ಟು ಹಿಡಿದ ಕಾರಣ ನಗರಸಭೆಯ ಅಧಿಕಾರಿಗಳು ಲಿಖಿತ ಭರವಸೆ ನೀಡಿದರು. ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆಯಲ್ಲಿ ಮುಖಂಡರಾದ ಗಣಪತಿ ಜಿತೂರಿ, ಶಂಕರ ಶಿದ್ಲಿಂಗ್, ದತ್ತು ಬಾಕಳೆ, ಸಾಹಿಲ್ ನರಗುಂದ, ಶಾಂತಾ ಬಾಕಳೆ, ಸುಮಾ, ಅನ್ನಕ್ಕ ಸೇರಿದಂತೆ ದಾಸರ ಓಣಿ ಮಹಿಳೆಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.