ADVERTISEMENT

ಬರ ಕಾರ್ಯವೈಖರಿಗೆ ಸಿಎಂ ತೃಪ್ತಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 8:05 IST
Last Updated 19 ಏಪ್ರಿಲ್ 2012, 8:05 IST

ಗಜೇಂದ್ರಗಡ: ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಬುಧವಾರ ತಾಲ್ಲೂಕಿನ ಇಟಗಿ, ನಾಗೇಂದ್ರಗಡ ಹಾಗೂ ಗಜೇಂದ್ರಗಡಕ್ಕೆ ಭೇಟಿ ನೀಡಿ ವಿವಿಧ ಕಾಮಗಾರಿ ಹಾಗೂ ಗೋಶಾಲೆ ಪರಿಶೀಲನೆ ನಡೆಸಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಾರ್ಯವೈಖರಿಗೆ ತೃಪ್ತಿ ವ್ಯಕ್ತಪಡಿಸಿದರು.

ಬೆಳಿಗ್ಗೆ ಸಮೀಪದ ಇಟಗಿ ಗ್ರಾಮದ ಹೊರ ವಲಯದಲ್ಲಿನ  ಹತ್ತು ಎಕರೆ ಪ್ರದೇಶದಲ್ಲಿ ನಡೆಯುತ್ತಿರುವ ರಾಜೀವ್‌ಗಾಂಧಿ ಸಬ್‌ಮಿಷನ್ ಕುಡಿಯುವ ನೀರಿನ ಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸಿದ ಅವರು ಕೆರೆಯ ಒಳಭಾಗದಲ್ಲಿನ ಕಲ್ಲು ಜೋಡಣೆ ಹಾಗೂ ಅಚ್ಚು ಕಟ್ಟಾದ ಕಾಮಗಾರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಾಗೇಂದ್ರಗಡದ ಗೋಶಾಲೆಗೆ ಭೇಟಿ ನೀಡಿ, ಗೋವುಗಳ ವಾಸ್ತವ್ಯಕ್ಕಾಗಿ ಸ್ಥಾಪಿಸಲಾಗಿರುವ  ಟೆಂಟ್, ಹೊಟ್ಟು, ಮೇವು ಹಾಗೂ ಪಶು ಚಿಕಿತ್ಸಾಲಯ ದಲ್ಲಿನ ಔಷಧಾಲಯ ಪರಿಶೀಲಿಸಿದರು. ಗೋಶಾಲೆ ಪಕ್ಕದಲ್ಲಿನ ಸಣ್ಣ ನೀರಾವರಿ ಇಲಾಖೆಯ ಬೃಹತ್ ಪ್ರಾಚೀನ ಕೆರೆಯನ್ನು ವೀಕ್ಷಿಸಿ ಕೆರೆ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ, ಅಗತ್ಯ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದರು. ನಂತರ ಗೋಶಾಲೆ ಬಳಿ ನೆರದಿದ್ದ ರೈತರಿಗೆ ಬೀಜದ ಕಿಟ್ ವಿತರಿಸಿದರು.

ಗಜೇಂದ್ರಗಡದ ಐತಿಹಾಸಿಕ ಬೆಟ್ಟ ಸಮೀಪಿದ 63 ಎಕರೆ ಪ್ರದೇಶದಲ್ಲಿ ಅಂದಾಜು 6.48 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕೆರೆ ಕಾಮಗಾರಿ ಪರಿಶೀಲಿಸಿದರು.

ಕೆರೆ ಸಂಪತ್ತು ಅಮೂಲ್ಯ. ಈ ಹಿನ್ನೆಲೆಯಲ್ಲಿ ಕೆರೆ ನಿರ್ಮಾಣ ಕಾಮಗಾರಿ ವ್ಯವಸ್ಥಿತ ರೀತಿಯಲ್ಲಿ ನಡೆಯಬೇಕು. ಮುಂದಿನ ಪೀಳಿಗೆಗೆ ಕೆರೆಗಳು ನೆರವಾಗಬೇಕು ಎಂದರು. ಕಾಮಗಾರಿ ಗಳಿಗೆ ಅನುದಾನದ ಕೊರತೆ ಎದುರಾ ದರೆ ಪ್ರಸ್ತಾವ ಸಲ್ಲಿಸಿ ಎಂದು ಹೇಳಿದರು. 

ತರಕಾರಿ ಮಾರುಕಟ್ಟೆಗೆ ಪ್ರಸ್ತಾವ: ಗಜೇಂದ್ರಗಡದ ಹೊರ ವಲಯದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಾಣಗೊಳ್ಳುತ್ತಿರುವ ಬೃಹತ್ ಇಂಗು ಕೆರೆ ಕಾಮಗಾರಿ ಪರಿಶೀಲನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರಿಗೆ ಸ್ಥಳೀಯ ಪುರಸಭೆ ಆಡಳಿತ ಶರವೇಗದಲ್ಲಿ ಬೆಳೆಯುತ್ತಿರುವ ಪಟ್ಟಣಕ್ಕೆ ಸುಸಜ್ಜಿತ ತರಕಾರಿ ಮಾರುಕಟ್ಟೆ ವ್ಯವಸ್ಥೆ ಇಲ್ಲ.
 
ಹೀಗಾಗಿ ರೋಣ ರಸ್ತೆಯಲ್ಲಿರುವ ಪುರಸಭೆಯ ವಿಶಾಲ 10 ಎಕರೆ ಜಮೀನಿನಲ್ಲಿ ಸಂತೆ ಮಾರುಕಟ್ಟೆ ನಿರ್ಮಿಸಲು 10 ಕೋಟಿ ಅನುದಾನ ಬಿಡುಗಡೆಗೊಳಿಸುವಂತೆ ಪ್ರಸ್ತಾವ ಸಲ್ಲಿಸಲಾಯಿತು.

ಎರಡನೇ ಬಾರಿ ಪ್ರಸ್ತಾವ
ಕಳೆದ ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿ ಸದಾನಂದಗೌಡ ತಾಲ್ಲೂಕಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗಜೇಂದ್ರಗಡದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆಗೊಳಿಸುವಂತೆ ಪುರಸಭೆ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಮುಖ್ಯ ಮಂತ್ರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹಾಗಾಗಿ ಮತ್ತೊಮ್ಮೆ ಪ್ರಸ್ತಾವ ಸಲ್ಲಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾಜೋಳ, ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಕಳಕಪ್ಪ ಬಂಡಿ, ಮಾಜಿ ಸಚಿವ ಸಿ.ಸಿ.ಪಾಟೀಲ, ಜಿ.ಪಂ ಅಧ್ಯಕ್ಷೆ ಬಸವರಾಜೇಶ್ವರಿ ಪಾಟೀಲ, ಬಿಜೆಪಿ ಮುಖಂಡ ಸಿದ್ದಪ್ಪ ಬಂಡಿ, ಜಿಲ್ಲಾಧಿಕಾರಿ ಪಾಂಡುರಂಗ ನಾಯಕ, ಜಿಲ್ಲಾ ಪೂಲೀಸ್ ವರಿಷ್ಠಾಧಿಕಾರಿ ರವಿಕುಮಾರ ನಾಯಕ, ಜಿ.ಪಂ ಮುಖ್ಯ ಕಾರ್ಯಕನಿರ್ವಾಹಕ ಅಧಿಕಾರಿ ವೀರಣ್ಣ ತುರಮರಿ, ಅಪರ ಜಿಲ್ಲಾಧಿಕಾರಿ ಪಿ.ಟಿ.ರುದ್ರೇಗೌಡ ಹಾಗೂ ಜಿಲ್ಲಾ ಮಟ್ಟದ ಎಲ್ಲಾ  ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.