ADVERTISEMENT

ಯೋಧ ಶಂಕ್ರಯ್ಯ ಪುತ್ಥಳಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಜುಲೈ 2013, 6:50 IST
Last Updated 25 ಜುಲೈ 2013, 6:50 IST
ಗದುಗಿನ ಹುತಾತ್ಮ ಯೋಧ ಶಂಕ್ರಯ್ಯ ಹಿರೇಮಠ ಅವರ ಪುತ್ಥಳಿ ನಿರ್ಮಿಸುವಂತೆ ಆಗ್ರಹಿಸಿ ಬುಧವಾರ ಸ್ನೇಹ ಲೋಕ ವಿವಿಧೋದ್ದೇಶ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
ಗದುಗಿನ ಹುತಾತ್ಮ ಯೋಧ ಶಂಕ್ರಯ್ಯ ಹಿರೇಮಠ ಅವರ ಪುತ್ಥಳಿ ನಿರ್ಮಿಸುವಂತೆ ಆಗ್ರಹಿಸಿ ಬುಧವಾರ ಸ್ನೇಹ ಲೋಕ ವಿವಿಧೋದ್ದೇಶ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.   

ಗದಗ: ದೇಶಕ್ಕಾಗಿ ಜೀವದ ಹಂಗು ತೊರೆದು ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಮರಣ ಹೊಂದಿದ ವೀರಯೋಧ ಶಂಕ್ರಯ್ಯ ಹಿರೇಮಠ ಪುತ್ಥಳಿಯನ್ನು ನಗರದಲ್ಲಿ ಸ್ಥಾಪಿಸಬೇಕು ಎಂದು ಆಗ್ರಹಿಸಿ ಸ್ನೇಹ ಲೋಕ ವಿವಿಧೋದ್ದೇಶ ಸಂಘದ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.

ಮಹಾತ್ಮಾಗಾಂಧಿ ವೃತ್ತದಲ್ಲಿ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಬಸವರಾಜ ಆರಟ್ಟಿ, ಕಾರ್ಗಿಲ್ ಯುದ್ಧದಲ್ಲಿ ಶಂಕ್ರಯ್ಯ ವೀರಮರಣ ಹೊಂದಿ 13 ವರ್ಷ ಕಳೆದರೂ ಅವರ ಹೆಸರನ್ನು ಸ್ಮರಿಸುವ ನಿಟ್ಟಿನಲ್ಲಿ ಮತ್ತು ಮುಂದಿನ ಪೀಳಿಗೆಗೆ ದೇಶಾಭಿಮಾನದ ಸ್ಫೂರ್ತಿ ಚೇತವಾದ ಶಂಕ್ರಯ್ಯ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡದೇ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದರು.

ರಾಜೀವ ದೀಕ್ಷಿತ್ ಪ್ರತಿಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ನೀಲಪ್ಪಗೌಡ ದಾನಪ್ಪಗೌಡ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ದೇಶಪ್ರೇಮ ಮೆರೆದ ಶಂಕ್ರಯ್ಯ ಹಿರೇಮಠ ಅವರ ಸಾಧನೆ ಇತರರಿಗೆ ಮಾದರಿಯಾಗಬೇಕು ಅದಕ್ಕಾಗಿ ನಗರದಲ್ಲಿ ಇದೇ 26ರ ಒಳಗಾಗಿ ಮೂರ್ತಿ ಸ್ಥಾಪನೆ ಆಗಬೇಕು. ಇಲ್ಲದಿದ್ದರೆ ಕಾರ್ಗಿಲ್ ವಿಜಯೋತ್ಸವದ ದಿನವನ್ನು ಕರಾಳ ದಿನವನ್ನಾಗಿ ಆಚರಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ರವಿ ಶಿದ್ಲಿಂಗ, ಬಸಯ್ಯ ನಂದಿಕೋಲಮಠ, ವಿಶ್ವನಾಥ ಶೀರಿ, ಎಚ್.ಎಫ್. ಆಲೂರ, ಸಿದ್ದಪ್ಪ ಚಳ್ಳಮರದ, ದಾನು ದಾನಪ್ಪಗೌಡರ, ಶರಣಪ್ಪ ಮಂಗಳಗುಡ್ಡ, ನಾಗರಾಜ ಹಂಡಿ, ವೀರೇಶ ಹೂಗಾರ, ಕಳಕಪ್ಪ ಬಂಡಿಹಾಳ, ಮಹೇಶ ಮೂಗನೂರ ಭಾಗವಹಿಸಿದ್ದರು.

ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.