ADVERTISEMENT

ಸುರಕ್ಷತಾ ಸಂಚಾರಕ್ಕೆ ಹೀಗೊಂದು ಅಭಿಯಾನ

​ಪ್ರಜಾವಾಣಿ ವಾರ್ತೆ
Published 3 ಜನವರಿ 2011, 6:55 IST
Last Updated 3 ಜನವರಿ 2011, 6:55 IST


ಗದಗ: ಸುರಕ್ಷಿತ ವಾಹನ ಸಂಚಾರದ ಕುರಿತು ನಾವು ಎಷ್ಟೇ ತಿಳಿದಿದ್ದರೂ ಕಡಿಮೆ. ಅಪಘಾತಗಳು ಸಂಭವಿಸಿದಂತೆ ಹೆಚ್ಚು ಜಾಗರೂಕತೆಯಿಂದ ವಾಹನ ಓಡಿಸುವುದು ಎಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ರಸ್ತೆ ನಿಯಮ, ಕಾನೂನು ಪಾಲಿಸುವುದು ಅಗತ್ಯ. ವಾಹನ ಚಾಲಕರಲ್ಲಿ ಆತುರ ಇರಬಾರದು. ಸರ್ಕಾರ ಸುರಕ್ಷಿತ ಸಂಚಾರಕ್ಕೆ ಎಷ್ಟೇ ಜಾಗೃತಿ ಅಭಿಯಾನ ಹಮ್ಮಿಕೊಂಡರೂ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಆದರೂ ಸರ್ಕಾರ ರಸ್ತೆ ಅಪಘಾತಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ತಿಂಗಳ ಮೊದಲವಾರದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಹಮ್ಮಿಕೊಂಡಿದೆ.

ಸಪ್ತಾಹ ಸಮಿತಿಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷರು, ಪ್ರಾದೇಶಿಕ ಸಾರಿಗೆ ಅಧಿಕಾರಿ ಕಾರ್ಯದರ್ಶಿಯಾಗಿದ್ದು, ಕೆಎಸ್‌ಆರ್‌ಟಿಸಿ, ವಿವಿಧ ಸಂಘ ಸಂಸ್ಥೆಗಳು ಸದಸ್ಯತ್ವದಲ್ಲಿ ನಡೆಸಲಾಗುತ್ತದೆ. ಮೇಲ್ನೋಟಕ್ಕೆ ಸಾರಿಗೆ ಇಲಾಖೆಯ ಕಾರ್ಯವಾದರೂ, ರಸ್ತೆ ಸುರಕ್ಷತೆಯಲ್ಲಿ ಪೊಲೀಸ್ ಇಲಾಖೆ, ಕೆಎಸ್‌ಆರ್‌ಟಿಸಿ, ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ನಗರಾಭಿವೃದ್ಧಿ ಪ್ರಾಧಿಕಾರ, ಪಿಡಬ್ಲ್ಯುಡಿ ಇಲಾಖೆಯೂ ಸಹ ಸಹಕಾರ ನೀಡುತ್ತಿವೆ.

ಗದುಗಿನಲ್ಲಿ ಆಜು-ಬಾಜು 20 ಸಾವಿರ ವಾಹನವಿದ್ದು, ಇದರಲ್ಲಿ ಅರ್ಧಕ್ಕಿಂತ ಹೆಚ್ಚು ದ್ವಿಚಕ್ರ ವಾಹನಗಳಿವೆ. ಟಂಟಂ, ಆಟೋ ರಿಕ್ಷಾ, ಟಾಟಾ ಏಸ್‌ಗಳಲ್ಲಿ ಜನರನ್ನು ಅಗತ್ಯ ಸೀಟುಗಳಿಗಿಂತ ಹೆಚ್ಚಿಗೆ ಅಕ್ಕ-ಪಕ್ಕ ನಿಲ್ಲಿಸಿಕೊಂಡು ತೆರಳುವುದು ಸಾಮಾನ್ಯವಾಗಿದ್ದು, ಇದೊಂದು ರೂಢಿಯಾಗಿ ಬಿಟ್ಟಿದೆ. ಚಾಲನಾ ಪರವಾನಿಗೆ ಇಲ್ಲದೆ ವಾಹನ ಓಡಿಸುವುದು ತಪ್ಪು.

‘ನಗರದಲ್ಲಿ ಮುಖ್ಯ ರಸ್ತೆಗಳಲ್ಲಿ ಕೆಲವೊಬ್ಬರು ರಸ್ತೆ ನಿಯಮ ಪಾಲಿಸದೆ ಜೋರಾಗಿ ವಾಹನ ಓಡಿಸುವುದು, ಯಾವುದೇ ಸಂಜ್ಞೆ ಬಳಸುವುದೇ ಇಲ್ಲ.  ನಗರದಲ್ಲಿ ಅಷ್ಟಾಗಿ ಟ್ರಾಫಿಕ್ ಇಲ್ಲವಾದರೂ ಅಪಘಾತಗಳಿಗೆ ಅವಕಾಶ ಕೊಡದೆ ಸುರಕ್ಷಿತ ರಸ್ತೆ ಸಂಚಾರಕ್ಕೆ ಗಮನಹರಿಸಬೇಕು’ ಎಂದು ಆರ್‌ಟಿಓ ಕುಬೇರಪ್ಪ ನಗರದ ಸಂಚಾರ ವ್ಯವಸ್ಥೆ ಬಗ್ಗೆ ತಿಳಿಸಿದರು.

ಸಪ್ತಾಹದ ಅಂಗವಾಗಿ ಜ. 3ರಂದು ನಗರದ ಮೈಲಾರಪ್ಪ ಮೆಣಸಗಿ ಮಹಾವಿದ್ಯಾಲಯದಲ್ಲಿ ರಸ್ತೆ ಸುರಕ್ಷತೆ ಕುರಿತಾಗಿ ಉಪನ್ಯಾಸ, ಜಾಗೃತಿ ಕಾರ್ಯಕ್ರಮ ಜರುಗಲಿದೆ. ಜ. 4ರಂದು ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆ ಫಲಿತಾಂಶ ಇರುವ ಹಿನ್ನೆಲೆಯಲ್ಲಿ ಜನರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ರಸ್ತೆ ಸುರಕ್ಷತೆಯ ಕೆಲವು ನಿಯಮಗಳ ಕುರಿತ ಬಿತ್ತಿಪತ್ರಗಳನ್ನು ಹಂಚಲಾಗುವುದು. ಜ. 6ರಂದು ವಾಹನ ಚಾಲಕರಿಗೆ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ. ಆಟೋ ರಿಕ್ಷಾ ಸಂಘ, ಕಾರು ಚಾಲಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ವಾಹನ ಚಾಲಕರ ಪಟ್ಟಿ ಪಡೆದು ಉಚಿತ ನೇತ್ರ ತಪಾಸಣೆ ಮಾಡಲಾಗುತ್ತದೆ. ಅಗತ್ಯವಿದ್ದಲ್ಲಿ ಶಸ್ತ್ರ ಚಿಕಿತ್ಸೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಜ. 7ರಂದು ಕೆಎಸ್‌ಆರ್‌ಟಿಸಿ ಬಸ್ ಚಾಲಕರಿಗೆ ರಸ್ತೆ ಸುರಕ್ಷತಾ ಬಗ್ಗೆ ಜಾಗೃತಿ ಶಿಬಿರ ನಡೆಯಲಿದ್ದು, ಶಿಕ್ಷಣ ಇಲಾಖೆ ಸಹಕಾರದೊಂದಿಗೆ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗಾಗಿ ನಿಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದೆ. ನಗರದ ಜನರಲ್ಲಿ ರಸ್ತೆ ಸುರಕ್ಷತೆಗೆ ಬಗ್ಗೆ ಮಾಹಿತಿ ಇದೆ. ಕೆಲವೇ ಜನರಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಬಿ. ಕುಬೇರಪ್ಪ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.