ADVERTISEMENT

ಹಿರಿಯರನ್ನು ಗೌರವದಿಂದ ಕಾಣಿರಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 6:35 IST
Last Updated 4 ಅಕ್ಟೋಬರ್ 2011, 6:35 IST

ಗದಗ: ಯುವಕರು ಹಿರಿಯ ನಾಗರಿಕರನ್ನು ಗೌರವ ಮನೋಭಾವದಿಂದ ಕಾಣುವ ಮೂಲಕ ಅವರ ಹಿತೋಪದೇಶಗಳನ್ನು ಆಲಿಸಬೇಕು ಎಂದು ಹೈಕೋರ್ಟ್ ನ್ಯಾಯಾಧೀಶ ಸುಭಾಷ ಆದಿ ಸಲಹೆ ನೀಡಿದರು.

ಸ್ಥಳೀಯ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶನಿವಾರ ನಡೆದ ಹಿರಿಯ ನಾಗರಿಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅಧುನಿಕತೆಯ ಭರಾಟೆಯಲ್ಲಿ ಹಿರಿಯರನ್ನು ಹೊರೆಯಾಗಿ ಕಾಣಬಾರದು. ಅವರ ಮಾರ್ಗದರ್ಶನದಲ್ಲಿ ನಡೆದರೆ ಜೀವನದಲ್ಲಿ ಯಶಸ್ಸು ಖಂಡಿತ ದೊರೆಯುತ್ತದೆ ಎಂದರು.

ಹಿರಿಯರಲ್ಲಿರುವ ಅಗಾಧವಾದ ಶಕ್ತಿ ಚೈತನ್ಯವನ್ನು ನೀಡುತ್ತದೆ. ಹಿರಿಯ ನಾಗರಿಕರ ದಿನವನ್ನು ಆಚರಿಸುವ ಮೂಲಕ ಅವರ ಕುಂದು ಕೊರತೆ ಪರಿಹರಿಸಲು ಚರ್ಚಿಸಬೇಕು. ಅವರ ಹಕ್ಕುಗಳನ್ನು ಈಡೇರಿಸುವ ಕಾರ್ಯವಾಗಬೇಕು ಎಂದರು.

ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶ ಆರ್.ಜೆ. ಸತೀಶಸಿಂಗ್ ಮಾತನಾಡಿ, ವೃದ್ಧ ವಯೋಮಾನದವರಲ್ಲಿ ಅಪಾರವಾದ ಜ್ಞಾನ ಮತ್ತು ಅನುಭವ ಇರುತ್ತದೆ. ಅವರು ನೀಡುವ ಸಲಹೆ ಮತ್ತು ತಿಳಿವಳಿಕೆಯನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಇದರಿಂದ ಸುಗಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಶಾಸಕ ಶ್ರೀಶೈಲಪ್ಪ ಬಿದರೂರ ಅಧ್ಯಕ್ಷತೆ ವಹಿಸಿ, ವೃದ್ಧರು ಸೇವಾ ನಿವೃತ್ತರಾಗಿರುತ್ತಾರೆ ಹೊರತು ಅವರಲ್ಲಿ ಇರುವ ಅನುಭವ, ವಿಚಾರಗಳು, ಸಕಾರಾತ್ಮಕ ಭಾವನೆಗಳು, ಅಪಾರವಾದ ಜ್ಞಾನಕ್ಕೆ ನಿವೃತ್ತಿ ಇಲ್ಲ. ಯುವ ಪಿಳಿಗೆಯನ್ನು ಸನ್ಮಾರ್ಗದಂತ ತೆಗೆದುಕೊಂಡು ಹೋಗಲು ಹಿರಿಯರ ಮಾರ್ಗದರ್ಶನ ಅವಶ್ಯ ಎಂದರು.ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರಿಗಾಗಿ ಏರ್ಪಡಿಸಿದ್ದ ವಿವಿಧ ಕ್ರೀಡೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪ್ರೊ. ಕೆ.ಎಚ್. ಬೇಲೂರು, ಐ.ಕೆ. ಪಟ್ಟಣಶೆಟ್ಟಿ, ಜಿಲ್ಲಾಧಿಕಾರಿ ಎಸ್. ಶಂಕರನಾರಯಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ ನಾಯಕ,  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರಣ್ಣ ತುರಮರಿ,  ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ಕೆ. ಗುಡೂರು, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಕೆ. ರಮೇಶ, ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಎಚ್. ರೆಡ್ಡಿ, ಜಿಲ್ಲಾ ನಿವೃತ್ತ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಸಿ. ಗಾಣಿಗೇರ ಮತ್ತಿತರರು ಹಾಜರಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಚಂದ್ರಶೇಖರಯ್ಯ ಸ್ವಾಗತಿಸಿದರು. ಬಿ.ವಿ. ನಿರಲೋಟಿ ಹಾಗೂ ಎ.ಎಸ್. ಮಕಾನದಾರ ಕಾರ್ಯಕ್ರಮ ನಿರೂಪಿಸಿದರು. ಡಿ.ಎನ್. ಮೂಲಿಮನಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.