ADVERTISEMENT

ಬಸ್ ಚಾಲಕ ವೀರಣ್ಣನ ಕನ್ನಡಾಭಿಮಾನ

ಸ್ವಂತ ಖರ್ಚಿನಲ್ಲಿ ಬಸ್‌ಗೆ ವಿಶೇಷ ಅಲಂಕಾರ

ಕಾಶಿನಾಥ ಬಿಳಿಮಗ್ಗದ
Published 2 ನವೆಂಬರ್ 2021, 7:17 IST
Last Updated 2 ನವೆಂಬರ್ 2021, 7:17 IST
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿಶೇಷವಾಗಿ ಅಲಂಕರಿಸಿರುವ ಬಸ್‌ನ ಮುಂದೆ ನಿಂತಿರುವ ಚಾಲಕ ವೀರಣ್ಣ ಮೇಟಿ ಹಾಗೂ ನಿರ್ವಾಹಕ ಶರಣಪ್ಪ ಬಿದರಳ್ಳಿ
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿಶೇಷವಾಗಿ ಅಲಂಕರಿಸಿರುವ ಬಸ್‌ನ ಮುಂದೆ ನಿಂತಿರುವ ಚಾಲಕ ವೀರಣ್ಣ ಮೇಟಿ ಹಾಗೂ ನಿರ್ವಾಹಕ ಶರಣಪ್ಪ ಬಿದರಳ್ಳಿ   

ಮುಂಡರಗಿ: ಸ್ಥಳೀಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಬಸ್ ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕಿನ ಹಿರೇವಡ್ಡಟ್ಟಿ ಗ್ರಾಮದ ವೀರಣ್ಣ ಸಂಗಪ್ಪ ಮೇಟಿ ಅವರು ಒಂಬತ್ತು ವರ್ಷಗಳಿಂದ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ.

ತಾವು ನಿತ್ಯ ಓಡಿಸುವ ಬಸ್‌ ಅನ್ನು ರಾಜ್ಯೋತ್ಸವದಂದು ಸಾವಿರಾರು ರೂಪಾಯಿ ಸ್ವಂತ ಹಣ ಖರ್ಚು ಮಾಡಿ ವಿಶೇಷವಾಗಿ ಅಲಂಕರಿಸುತ್ತಾರೆ. ಆ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.

ರಾಣೆಬೆನ್ನೂರು ತಾಲ್ಲೂಕಿನ ಕುಪ್ಪಲೂರು ಗ್ರಾಮದ ರಾಜು ಸುಂಕಾಪೂರ ಅವರಿಗೆ ₹60 ಸಾವಿರ ಹಣ ನೀಡಿ ಸುಮಾರು ಐದು ಅಡಿ ಎತ್ತರದ ಸಿಂಹದ ಮೇಲೆ ಕುಳಿತ ಭಂಗಿಯಲ್ಲಿರುವ ಸುಂದರ ಭುವನೇಶ್ವರಿ ಮೂರ್ತಿಯನ್ನು ತಯಾರಿಸಿದ್ದಾರೆ. ಭುವನೇಶ್ವರಿ ಮೂರ್ತಿಯನ್ನು ಬಸ್‌ನ ಮುಂಭಾಗದಲ್ಲಿ ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಲಾಗಿದ್ದು, ಬಸ್‌ ಚಲಿಸುತ್ತಿದ್ದರೆ ಸುಂದರವಾದ ದೇವಸ್ಥಾನವೇ ಸಾಗುತ್ತಿದೆ ಎನ್ನುವ ಭಾವ ಮೂಡುತ್ತದೆ.

ADVERTISEMENT

ಸಾವಿರಾರು ರೂಪಾಯಿ ಮೌಲ್ಯದ ಸೇವಂತಿ, ಗುಲಾಬಿ, ಮಲ್ಲಿಗೆ, ಚೆಂಡು ಹೂವು, ಕನಕಾಂಬರ ಹೂವುಗಳನ್ನು ಬಳಸಿ ಬಸ್‌ನ ಹೊರಾಂಗಣ ಮತ್ತು ಒಳಾಂಗಣಗಳನ್ನು ಅಲಂಕರಿಸಲಾಗಿದೆ. ಲಕ್ಷ್ಮೇಶ್ವರದ ಶರಣಪ್ಪ ಹಾಗೂ ಮತ್ತಿತರ ಗೆಳೆಯರ ನೆರವಿನಿಂದ ವೀರಣ್ಣ ಅವರು ಬಸ್‌ಗೆ ವಿಶೇಷ ಹೂವಿನ ಅಲಂಕಾರ ಮಾಡಿದ್ದು, ಹೂವಿನ ಅಲಂಕಾರ ನೋಡುಗರ ಮನಸೂರೆಗೊಳ್ಳುತ್ತಲಿದೆ.

ನ.1ರಂದು ಅಲಂಕೃತ ಬಸ್‌ ದಿನವಿಡೀ ಪಟ್ಟಣವೂ ಸೇರಿದಂತೆ ಜಿಲ್ಲೆಯ ಶಿರಹಟ್ಟಿ, ಗದಗ ಹಾಗೂ ಮತ್ತಿತರ ಭಾಗಗಳಲ್ಲಿ ಸಂಚರಿಸುತ್ತದೆ. ಅಲಂಕರಿಸಿದ ಬಸ್‌ನಲ್ಲಿ ಪ್ರಯಾಣಿಸುವ ನೂರಾರು ಜನರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಾರೆ. ಯುವಕರು ಸೆಲ್ಫಿ ತಗೆದುಕೊಳ್ಳಲು ಮುಗಿಬೀಳುವ ದೃಶ್ಯ ಸಾಮಾನ್ಯವಾಗಿರುತ್ತದೆ.

‘ನಾವು ಓಡಿಸುವ ಬಸ್‌ ನಮ್ಮ ಕುಟುಂಬಕ್ಕೆ ಅನ್ನ ನೀಡುತ್ತದೆ. ಅದೇ ನಮಗೆ ದೇವರಾಗಿದ್ದು, ಪ್ರತಿವರ್ಷ ಕನ್ನಡ ರಾಜ್ಯೋತ್ಸವದಂದು ವಿಶೇಷವಾಗಿ ಅಲಂಕರಿಸುತ್ತೇವೆ. ಇದಕ್ಕೆ ನಮ್ಮ ಕುಟುಂಬದವರ ಸಹಕಾರವಿದ್ದು, ಎಲ್ಲರೂ ರಾಜ್ಯೋತ್ಸವವನ್ನು ಮನೆಯ ಹಬ್ಬದಂತೆ ಆಚರಿಸುತ್ತೇವೆ’ ಎನ್ನುತ್ತಾರೆ ಚಾಲಕ ವೀರಣ್ಣ ಮೇಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.