ADVERTISEMENT

ಹರಿಯದ ತುಂಗೆ; ಹಳದಿಗಟ್ಟಿದ ಹಲ್ಲುಗಳು

ಅಭಿವೃದ್ಧಿ ವಂಚಿತ 11ನೇ ವಾರ್ಡ್‌: ಕುಡಿಯುವ ನೀರು, ರಸ್ತೆ ದುರಸ್ತಿ, ಯುಜಿಡಿ ಸಂಪರ್ಕ ಅಸ್ತವ್ಯಸ್ತ

ಸತೀಶ ಬೆಳ್ಳಕ್ಕಿ
Published 22 ಡಿಸೆಂಬರ್ 2021, 3:43 IST
Last Updated 22 ಡಿಸೆಂಬರ್ 2021, 3:43 IST
ಹಮಾಲರ ಕಾಲೊನಿಯ ಚರಂಡಿಯ ದುರವಸ್ಥೆ
ಹಮಾಲರ ಕಾಲೊನಿಯ ಚರಂಡಿಯ ದುರವಸ್ಥೆ   

ಗದಗ: ಇಲ್ಲಿನ 11ನೇ ವಾರ್ಡ್‌ ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ, ಬೀದಿ ದೀಪ ವ್ಯವಸ್ಥೆ ಹಾಗೂ ಸಮರ್ಪಕ ರಸ್ತೆಗಳನ್ನು ಕಲ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ವಿವೇಕಾನಂದ ನಗರ, ಇರಾನಿ ಕಾಲೊನಿ, ನಿಸರ್ಗ ಬಡಾವಣೆ, ಹಮಾಲರ ಕಾಲೊನಿ ಈ ವಾರ್ಡ್‌ನ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಬಡಾವಣೆಗಳು. ಇದರಲ್ಲಿ ಹಮಾಲರ ಕಾಲೊನಿ ಸ್ಥಿತಿ ಶೋಚನೀಯವಾಗಿದೆ. ಕಟ್ಟಿಕೊಂಡಿರುವ ಚರಂಡಿಗಳಿಂದಾಗಿ ಇದು ಹಂದಿ, ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿದೆ. ಬೀದಿ ದೀಪಗಳಿಲ್ಲದೇ ರಾತ್ರಿ ವೇಳೆ ಅಡ್ಡಾಡುವುದು ಸವಾಲಾಗಿ ಪರಿಣಮಿಸಿದೆ. 24X7 ನೀರು ಪೂರೈಕೆ ಸೇವೆ ಇಲ್ಲಿ ಹೆಸರಿಗಷ್ಟೇ ಇದ್ದು, ಈ ಕಾಲೊನಿಯ ನಳದಲ್ಲಿ ನೀರು ಬಂದು ಬರೋಬ್ಬರಿ ನಾಲ್ಕು ವರ್ಷಗಳೇ ಆಗಿವೆ!

ಹಮಾಲರ ಕಾಲೊನಿಗೆ ಈವರೆಗೆ ನೀರು ಪೂರೈಸಲು ಕ್ರಮವಹಿಸದ ನಗರಸಭೆ, ಈ ಬಗ್ಗೆ ಪ್ರಶ್ನಿಸಿದರೆ ಸಿದ್ಧ ಉತ್ತರಗಳನ್ನು ನೀಡಿ ಜಾರಿಕೊಳ್ಳುತ್ತಾರೆ ಎಂದು ಸ್ಥಳೀಯರು ದೂರಿದ್ದಾರೆ.

ADVERTISEMENT

‘ತುಂಗಭದ್ರಾ ನದಿ ನೀರಿನ ರುಚಿಯನ್ನು ಹಮಾಲರ ಕಾಲೊನಿ ಜನರು ಒಮ್ಮೆಯೂ ನೋಡಿಲ್ಲ. ನಮ್ಮ ಜನರ ಬಾಯಾರಿಕೆ ತಣಿಸುತ್ತಿರುವುದು ಇಲ್ಲಿನ ಕೊಳವೆಬಾವಿಯಲ್ಲಿ ಸಿಗುವ ಸವಳು ನೀರು ಮಾತ್ರ. ಆ ನೀರು ಕುಡಿದು ಜನರ ಹಲ್ಲುಗಳು ಹಳದಿ
ಗಟ್ಟಿವೆ. ದೇಹದಲ್ಲಿನ ಮೂಳೆಗಳು ದುರ್ಬಲಗೊಂಡಿವೆ. ಆದರೂ, ಸ್ಥಳೀಯ ಆಡಳಿತ ಕಾಲೊನಿಗೆ ತುಂಗಭದ್ರಾ ನದಿ ನೀರು ಕೊಡುವ ಗೊಡವೆಗೆ ಹೋಗಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಶರಣಪ್ಪ ಗೊಳಗೊಳಕಿ, ರಮೇಶ ಚಲವಾದಿ ಗುಡುಗಿದರು.

ಯುಜಿಡಿ ಕಾಮಗಾರಿಗೆ ಹಗೆದಿದ್ದ ರಸ್ತೆಗಳು ಕೆಲಸ ಮುಗಿದಿದ್ದರೂ ನಿಯಮದಂತೆ ರಸ್ತೆಗೆ ಡಾಂಬರು ಹಾಕಿಲ್ಲ. ತಗ್ಗು ದಿಣ್ಣೆ ಬಿದ್ದಿರುವ ರಸ್ತೆಗಳಲ್ಲಿ ಬೈಕ್‌ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ.

‘ಇರಾನಿ ಕಾಲೊನಿಯಲ್ಲಿ ಯಜಿಡಿ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ರಸ್ತೆಗೆ ಡಾಂಬರೀಕರಣ ಮಾಡಲು ಹಣದ ಕೊರತೆ ಇರುವ ಕಾರಣ ರಸ್ತೆ ದುರಸ್ತಿ ಸಾಧ್ಯವಾಗಿಲ್ಲ. ಹೆಚ್ಚುವರಿ ಹಣ ಬಿಡುಗಡೆಗೆ ಪ್ರಸ್ತಾವ ಸಲ್ಲಿಸಲಾಗಿದ್ದು, ಹಣ ಬಿಡುಗಡೆಗೊಂಡ ತಕ್ಷಣ ಡಾಂಬರು ಹಾಕಿಸಲು ಕ್ರಮಹಿಸಲಾಗುವುದು ಎಂದು ಯುಜಿಡಿ ಇಇ ಕೆಂಗಾಲಿ ತಿಳಿಸಿದರು.

‘ರಸ್ತೆಬದಿಯಲ್ಲಿರುವ ಬೀದಿ ದೀಪ ನಿರ್ವಹಣೆ ಮಾಡುವ ಸಂಸ್ಥೆಗೆ ನಗರಸಭೆ ಆರು ತಿಂಗಳಿಂದ ಹಣ ‍ಪಾವತಿಸಿಲ್ಲ. ಈ ಕಾರಣದಿಂದಾಗಿ, ಸಮರ್ಪಕ ನಿರ್ವಹಣೆ ಸಾಧ್ಯವಾಗಿಲ್ಲ’ ಎಂದು ಗುತ್ತಿಗೆದಾರ ಸಂಸ್ಥೆಯ ತಿಪ್ಪಾಪುರ ತಿಳಿಸಿದ್ದಾರೆ.

ಹಮಾಲರ ಕಾಲೊನಿ, ಇರಾನಿ ಕಾಲೊನಿ, ವಿವೇಕಾನಂದ ನಗರ, ನಿಸರ್ಗ ಬಡಾವಣೆಗೆ ಕಸದ ವಾಹನ ಸರಿಯಾಗಿ ಬರದ ಕಾರಣ ಕಸ ಎಲ್ಲೆಂದರಲ್ಲಿ ವಿಲೇವಾರಿ ಆಗುತ್ತಿದೆ. ಇದರಿಂದಾಗಿ ಖಾಲಿ ಸೈಟ್‌ಗಳು, ರಸ್ತೆ ಬದಿಗಳು ತ್ಯಾಜ್ಯ ಎಸೆಯುವ ತಾಣಗಳಾಗಿ ಮಾರ್ಪಟ್ಟಿವೆ.ಸೊಳ್ಳೆ, ಹಂದಿಗಳ ತಾಣವಾಗಿ ಬದಲಾಗಿ ಅನೈರ್ಮಲ್ಯ, ಅನಾರೋಗ್ಯ ಇಲ್ಲಿನ ಜನರನ್ನು ಕಾಡುತ್ತಿದೆ.

‘ಕಸದ ಗಾಡಿಗಳ ಕೊರತೆಯಿಂದಾಗಿ ಈ ಅವ್ಯವಸ್ಥೆ ಉಂಟಾಗಿದೆ. ಆದರೂ, ಶಕ್ತಿ ಮೀರಿ ತ್ಯಾಜ್ಯ ವಿಲೇವಾರಿಗೆ ಶ್ರಮಿಸಲಾಗುತ್ತಿದೆ. ಕಟ್ಟಿಕೊಂಡಿರುವ ಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಮವಹಿಸಲಾಗುವುದು’ ಎಂದು ನಗರಸಭೆ ಆರೋಗ್ಯ ನಿರೀಕ್ಷಕ ಮಕಾನದಾರ ತಿಳಿಸಿದ್ದಾರೆ.

11ನೇ ವಾರ್ಡ್‌ನ ಕೆಲವೆಡೆ ಮಧ್ಯ ರಾತ್ರಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಇದರಿಂದಾಗಿ ಹೆಂಗಸರು ಮಕ್ಕಳಿಗೆ ತೊಂದರೆ ಆಗಿದೆ. ರಾತ್ರಿ ಯಾವಾಗ ನೀರು ಬಿಡುತ್ತಾರೆ ಎಂದು ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಇದೆ. ಕಳ್ಳರ ಭಯ ಕಾಡುತ್ತಿದೆ. ಮಧ್ಯರಾತ್ರಿ ನೀರು ಬಿಡುವುದ ನಿಲ್ಲಿಸಿ, ಹಗಲಿನ ವೇಳೆ ಪೂರೈಸಲು ಕ್ರಮವಹಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

11ನೇ ವಾರ್ಡ್‌ನಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಪೌರಾಯುಕ್ತರು ಹಮಾಲರ ಕಾಲೊನಿಗೆ ಭೇಟಿ ನೀಡಿ ಇಲ್ಲಿನ ಕಲುಷಿತ ವಾತಾವರಣ ವೀಕ್ಷಿಸಬೇಕು

ಶರಣಪ್ಪ ಗೊಳಗೊಳಕಿ, ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.