ADVERTISEMENT

ಪಂಚಾಯತ್‌ರಾಜ್‌ ಆಡಳಿತ ವ್ಯವಸ್ಥೆಯ ಅಡಿಪಾಯ: ಸಚಿವ ಎಚ್‌.ಕೆ.ಪಾಟೀಲ

18ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಕಾನೂನು ಸಚಿವ ಎಚ್‌.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 4:44 IST
Last Updated 14 ಡಿಸೆಂಬರ್ 2025, 4:44 IST
ಗದುಗಿನ ಮಹಾತ್ಮಗಾಂಧಿ ಪಂಚಾಯತ್‌ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದಲ್ಲಿ ಶನಿವಾರ ಆರಂಭಗೊಂಡ ಅಖಿಲ ಭಾರತ ಪಂಚಾಯತ್ ಪರಿಷತ್‌ನ 18ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಸಚಿವ ಎಚ್‌.ಕೆ.ಪಾಟೀಲ ಮಾತನಾಡಿದರು
ಗದುಗಿನ ಮಹಾತ್ಮಗಾಂಧಿ ಪಂಚಾಯತ್‌ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದಲ್ಲಿ ಶನಿವಾರ ಆರಂಭಗೊಂಡ ಅಖಿಲ ಭಾರತ ಪಂಚಾಯತ್ ಪರಿಷತ್‌ನ 18ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಸಚಿವ ಎಚ್‌.ಕೆ.ಪಾಟೀಲ ಮಾತನಾಡಿದರು   

ಗದಗ: ‘73ನೇ ಸಂವಿಧಾನ ತಿದ್ದುಪಡಿಯ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳು ಸಂವಿಧಾನಬದ್ಧ ಬಲ ಪಡೆದಿದ್ದು, ಗಾಂಧೀಜಿಯ ಗ್ರಾಮಸ್ವರಾಜ್ಯ ಪರಿಕಲ್ಪನೆಯೇ ನೈಜ ಜನತಂತ್ರದ ಸಾಕಾರ ರೂಪವಾಗಿದೆ’ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

ನಗರದ ಮಹಾತ್ಮಗಾಂಧಿ ಪಂಚಾಯತ್‌ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದಲ್ಲಿ ಶನಿವಾರ ಆರಂಭಗೊಂಡ ಅಖಿಲ ಭಾರತ ಪಂಚಾಯತ್ ಪರಿಷತ್‌ನ 18ನೇ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮನೆ ಪಂಚಾಯತ್ ಎಂದು ಬಣ್ಣಿಸಿದ ಅವರು, ಇದು ದೇಶದ ಆಡಳಿತ ವ್ಯವಸ್ಥೆಯ ಅಡಿಪಾಯವಾಗಿದೆ ಎಂದು ಹೇಳಿದರು.

ADVERTISEMENT

5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ. ನಾರಾಯಣಸ್ವಾಮಿ ಮಾತನಾಡಿ, ‘ಗ್ರಾಮಗಳು ಅಭಿವೃದ್ದಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ. ಹಾಗಾಗಿ, ಗ್ರಾಮ ಪಂಚಾಯಿತಿ ದೊರೆಯುವ ಹಣವನ್ನು ಹೇಗೆ ಉಪಯೋಗ ಮಾಡಬೇಕೆಂಬ ಅರಿವನ್ನು ಪಂಚಾಯಿತಿ ಅಧ್ಯಕ್ಷರಿಗೆ ಮೂಡಿಸಬೇಕಿದೆ. ಆಗ ಮಾತ್ರ ಸ್ವಾವಲಂಬಿ ಗ್ರಾಮ ನಿರ್ಮಾಣ ಸಾಧ್ಯ’ ಎಂದರು.

ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ಸುರೇಶ್ ವಿ. ನಾಡಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ‘ರಾಷ್ಟ್ರಮಟ್ಟದ ಸಮ್ಮೇಳನದ ಚಿಂತನೆ ಮತ್ತು ಸಂವಾದಗಳು ಪಂಚಾಯತ್ ರಾಜ್ ವ್ಯವಸ್ಥೆಯ ಬಲವರ್ಧನೆಗೆ ಅತ್ಯಂತ ಅಗತ್ಯವಾಗಿವೆ. ಗ್ರಾಮೀಣ ಆಡಳಿತ, ವಿಕೇಂದ್ರೀಕರಣ ಮತ್ತು ಜನಸಹಭಾಗಿತ್ವದ ಮೌಲ್ಯಗಳನ್ನು ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಸಮನ್ವಯಗೊಳಿಸಲಾಗುತ್ತಿದೆ’ ಎಂದು ವಿವರಿಸಿದರು.

ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ಡಾ. ಅಶೋಕ್ ಚೌಹಾಣ್ ಡಾ. ಎಸ್.ಎಸ್.ಮೀನಾಕ್ಷಿ ಸುಂದರಂ, ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ಪ್ರಧಾನ ಕಾರ್ಯದರ್ಶಿ ಸತೀಶ್ ಕೆ.ಎಸ್., ಉಪಾಧ್ಯಕ್ಷೆ ಸೌಭಾಗ್ಯ ಬಸವರಾಜ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಜಿ, ಕಾಂಗ್ರೆಸ್‌ ಮುಖಂಡರಾದ ಬಿ.ಬಿ. ಅಸೂಟಿ, ಸಿದ್ದು ಪಾಟೀಲ, ನಾಗಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಳಿವೆಪ್ಪ ಶಿಗ್ಲಿ, ಕಳಾಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷತೆ ಅನಸೂಯ ಬೆಟಗೇರಿ, ಅಸುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಲ್ತಾಫ್ ಎ. ಕಾಗದಗಾರ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರದ ವಿವಿಧ ಭಾಗಗಳಿಂದ ಬಂದಿದ್ದ ತಜ್ಞರು, ಸಂಪನ್ಮೂಲ ವ್ಯಕ್ತಿಗಳು, ಪಂಚಾಯಿತಿ ಸದಸ್ಯರು, ಪ್ರತಿನಿಧಿಗಳು, ವಿಶ್ವವಿದ್ಯಾಲಯದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಗ್ರಾಮ ಪಂಚಾಯಿತಿಗಳನ್ನು ಸ್ಥಳೀಯ ಮಟ್ಟದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಗಳನ್ನಾಗಿ ಮಾಡುವುದು ಮತ್ತು ಅಧಿಕಾರಿಗಳನ್ನು ಅವುಗಳಿಗೆ ಹೊಣೆಗಾರರನ್ನಾಗಿ ಮಾಡುವ ಮೂಲಕ ಹಳ್ಳಿಗಳ ಪುನರ್‌ ನಿರ್ಮಾಣದ ದೃಢನಿಶ್ಚಯ ಮಾಡಬೇಕಿದೆ
ಸುಬೋಧ್ ಕಾಂತ್ ಸಹಾಯ್ ಅಖಿಲ ಭಾರತ ಪಂಚಾಯತ್ ಪರಿಷತ್‌ನ ಅಧ್ಯಕ್ಷ

ಗ್ರಾಮಸ್ವರಾಜ್ಯ ಚಿಂತನೆ

ಸಾಕಾರಕ್ಕೆ ಪೂರಕ ‘ಗದಗ ಜಿಲ್ಲೆ ಸಾಹಿತ್ಯ ಸಂಗೀತ ಮತ್ತು ವಾಸ್ತುಶಿಲ್ಪ ಕ್ಷೇತ್ರಗಳಲ್ಲಿ ವಿಶಿಷ್ಟ ಗುರುತು ಪಡೆದಿದೆ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು ಹೇಳಿದರು. ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವು ಸ್ನೇಹ ಮತ್ತು ಬಾಂಧವ್ಯಕ್ಕೆ ವೇದಿಕೆಯಾಗಲಿದ್ದು ಗಾಂಧೀಜಿಯವರ ಗ್ರಾಮಸ್ವರಾಜ್ಯ ಚಿಂತನೆಗಳನ್ನು ಸಾಕಾರಗೊಳಿಸಲು ಪೂರಕವಾಗಿದೆ ಎಂದರು. ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳು ಇನ್ನಷ್ಟು ಪರಿಣಾಮಕಾರಿಯಾಗಲು ಪಂಚಾಯತ್ ವ್ಯವಸ್ಥೆಯಲ್ಲಿರುವ ಸವಾಲುಗಳ ಕುರಿತು ಗಂಭೀರ ಚರ್ಚೆ ನಡೆಯಬೇಕಿದೆ ಅವರು ಆಶಿಸಿದರು.